ಸಾರಾಂಶ
ಹುಬ್ಬಳ್ಳಿ: ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು, ಭಾರತದ ಲಿಂಗಾಯತ ಧರ್ಮ. ಈ ಲಿಂಗಾಯತ ಧರ್ಮದಿಂದ ಮಾತ್ರ ಜಗತ್ತಿಗೆ ಸಹಬಾಳ್ವೆ, ಶಾಂತಿ ಸಿಗಲು ಸಾಧ್ಯ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 11ನೇ ದಿನದ ಪ್ರವಚನ ನೀಡಿದ ಅವರು, ಸತಿ ಸಹಗಮನ ಪದ್ಧತಿ, ದೇವದಾಸಿ ಪದ್ಧತಿ, ವಿಧವೆ ಪಟ್ಟ, ಹೆಣ್ಣು ಬಲಿ ಇತ್ಯಾದಿ ಕ್ರೂರ ಆಚರಣೆಗಳು ಚಲಾವಣೆಯಲ್ಲಿದ್ದ ಮತ್ತು ಲಿಂಗ ತಾರತಮ್ಯ ಅತಿರೇಕಕ್ಕೆ ಹೋಗಿದ್ದ ಪುರುಷ ಪ್ರಧಾನ ಸಮಾಜದ ನೆಲದಲ್ಲೇ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದ್ದು ಸಣ್ಣ ಸಾಧನೆಯಲ್ಲ ಎಂದು ಬಣ್ಣಿಸಿದರು.ಬುದ್ಧ ಸ್ತ್ರೀಯರಿಗೆ ದೀಕ್ಷೆ ನೀಡಲಿಲ್ಲ. ಜೈನರು ಮಹಿಳೆಯನ್ನು ನಿತ್ಯ ನರಕಿ ಎನ್ನುತ್ತ, ಮೋಕ್ಷ ಪಡೆಯಲು ಆಕೆ ಮುಂದಿನ ಜನ್ಮದಲ್ಲಿ ಪುರುಷನಾಗಿಯೇ ಹುಟ್ಟಬೇಕು ಎನ್ನುತ್ತಾರೆ. ಇಸ್ಲಾಂ ಧರ್ಮದಲ್ಲಿ ಪುರುಷನ ಸಮಾನ ನಿಂತು ನಮಾಜ ಮಾಡಲು ಸ್ತ್ರೀಗೆ ಅವಕಾಶವಿಲ್ಲ. ಬುರಕಾ ಇತ್ಯಾದಿ ಕಟ್ಟುಪಾಡುಗಳಿವೆ. ಕ್ರೈಸ್ತರಲ್ಲಿ ಧರ್ಮಗುರು ಪೋಪ್ ಆಗಲು ಮಹಿಳೆಗೆ ಅವಕಾಶವೇ ಇಲ್ಲ. ಹೀಗೆ ಆಯಾ ಧರ್ಮಗಳಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಮಹಿಳೆ ಎರಡನೇ ದರ್ಜೆಯ ನಾಗರೀಕಳಾಗಿದ್ದಾಳೆ ಎಂದು ವಿಶ್ಲೇಷಿಸಿದರು.
ಮಹಿಳೆಗೆ ಗುರು ಸ್ಥಾನವೈದಿಕ ಧರ್ಮದಲ್ಲಂತೂ ಹೆಣ್ಣು ಎಂದರೆ ಕೀಳು ಎನ್ನುವ ಮಾತಿದೆ. ಅಲ್ಲಿ ಅವಳಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಎಲ್ಲ ಅನಿಷ್ಟಗಳಿಗೆ ಆಕೆಯೇ ಕಾರಣ. ಕೆಲವು ಧಾರ್ಮಿಕ ಆಚರಣೆ, ಅಧ್ಯಾತ್ಮ ಮತ್ತು ಮೋಕ್ಷಕ್ಕೆ ಅವಳು ಅನರ್ಹಳು ಎಂದು ಶಾಸ್ತ್ರ-ಪುರಾಣ ಬರೆದಿಟ್ಟಿದ್ದರು. ಇವನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಿದ ಬಸವಣ್ಣ, ಮಹಿಳೆಯ ಕೈಯಲ್ಲಿ ಇಷ್ಟಲಿಂಗ ಇಡುವ ಮೂಲಕ ಆಕೆಯನ್ನು ಆ ಎಲ್ಲ ಕಟ್ಟುಪಾಡುಗಳಿಂದ ಬಿಡುಗಡೆ ಮಾಡಿದರು. ಅನುಭವ ಮಂಟಪದಲ್ಲಿ ಪುರುಷನ ಸಮಾನ ಕುಳಿತು ಚರ್ಚಿಸಲು, ವಚನ ರಚಿಸಲು ಹಚ್ಚಿದರು. ಅಷ್ಟೇ ಅಲ್ಲ ಇಷ್ಟಲಿಂಗದಲ್ಲಿ ಸಾಧನೆ ಮಾಡಿದ ಮಹಿಳೆಗೆ ಗುರುವಿನ ಸ್ಥಾನ ನೀಡಿ ಗೌರವಿಸುವ ಮೂಲಕ ಮಾನವೀಯತೆಗೆ ಹೊಸ ವ್ಯಾಖ್ಯಾನ ಬರೆದರು ಎಂದು ಶ್ರೀಗಳು ವಿವರಿಸಿದರು.
ಇಂಥ ಕ್ರಾಂತಿಕಾರಿ ಚಿಂತನೆಗಳಿಗೆ ವೇದಿಕೆಯಾಗಿದ್ದ ಕಲ್ಯಾಣದ ಅನುಭವ ಮಂಟಪ ಇರಲೇ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮುಂದೊಂದು ದಿನ ಬಸವಣ್ಣ, ಶರಣರು ಕಾಲ್ಪನಿಕ ಎನ್ನುವ ಭೂಪರೂ ಈ ಭೂಮಿಯ ಮೇಲೆ ಹುಟ್ಟಬಹುದು. ಹಾಗಾಗಿ ಲಿಂಗಾಯತರು ಧರ್ಮ ಮತ್ತು ಶರಣರನ್ನು ನಿರ್ಲಕ್ಷಿಸಿದರೆ ದೊಡ್ಡ ಅನಾಹುತ ಎದುರಾಗಲಿದೆ ಎಂದು ನಿಜಗುಣಾನಂದರು ಎಚ್ಚರಿಸಿದರು.ಶರಣರ ಚಿತ್ರಗಳ ಗ್ಯಾಲರಿ
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನಾನು ಕೆನಡಾದಲ್ಲಿ ಓದುತ್ತಿದ್ದಾಗ ಅಲ್ಲೊಬ್ಬ ಶ್ರೀಮಂತ ಬದುಕಿನ ವಿವಿಧ ಮಗ್ಗಲು ಪರಿಚಯಿಸುವ 1000 ವರ್ಣಚಿತ್ರಗಳನ್ನು ಬರೆಸಿ ತನ್ನ ಮನೆಯನ್ನೇ ಆರ್ಟ ಗ್ಯಾಲರಿ ಮಾಡಿದ್ದ. ಅದರಿಂದ ಪ್ರಭಾವಿತನಾದ ನಾನು ಸ್ವದೇಶಕ್ಕೆ ಮರಳಿದ ನಂತರ ವಿವಿಧ ಕಲಾವಿದರಿಂದ ಬಸವಾದಿ ಶರಣರ ಬದುಕನ್ನು ಸಾರುವ ವರ್ಣಚಿತ್ರಗಳನ್ನು ಬರೆಸಿರುವೆ. ಅವು ಸುಮಾರು ನೂರು ಚಿತ್ರಗಳಾಗಿವೆ. ಶೀಘ್ರದಲ್ಲಿ ಧಾರವಾಡದಲ್ಲೊಂದು ಸುಂದರ ಆರ್ಟ ಗ್ಯಾಲರಿ ಕಟ್ಟಿ, ಅಲ್ಲಿ ಅವನ್ನೆಲ್ಲ ಪ್ರದರ್ಶನಕ್ಕೆ ಇಡುವ ಮೂಲಕ ಮುಂದಿನ ಪೀಳಿಗೆಗೆ ಲಿಂಗಾಯತ ಧರ್ಮ ಮತ್ತು ಶರಣರ ಬದುಕನ್ನು ಪರಿಚಯಿಸುವ ಹಂಬಲವಿದೆ ಎಂದು ಹೇಳಿದರು.ಜ್ಞಾನ ಕೆಲವರ ಸ್ವತ್ತು ಆಗಿದ್ದ ಕಾಲದಲ್ಲಿ ಶರಣರು ಮಹಿಳೆಯರು, ತುಳಿತಕ್ಕೆ ಒಳಗಾದವರು, ಅಕ್ಷರ ವಂಚಿತರನ್ನೆಲ್ಲ ಕರೆದು ಸಮಾನವಾಗಿ ಕುಳ್ಳಿಸಿಕೊಂಡು ವಚನ ರಚಿಸಿಲು ಹಚ್ಚಿದರು. ಲಿಂಗತಾರತಮ್ಯ ಹೊಡೆದೋಡಿಸಿದರು. ಇಂಥ ವಚನ, ಶರಣ ತತ್ವ ಹೇಳುವುದು ಸರಳ. ಆಚರಣೆ ಕಷ್ಟವಾಗಿದೆ. ಆದರೆ, ನಿಜಗುಣಾನಂದ ಮಹಾಸ್ವಾಮಿಗಳ ಇಂಥ ಪ್ರವಚನ ಆಲಿಸುವುದರಿಂದ ಆ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯೋಗಗುರು ಡಾ.ಚೆನ್ನಬಸವ ಮಹಾಸ್ವಾಮಿಳು ಮಾತನಾಡಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇದ್ದರು.