ಸಾರಾಂಶ
ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ, ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಪ್ರತಿಪಾದನೆ
ಕನ್ನಡಪ್ರಭ ವಾರ್ತೆ ದಾವಣಗೆರೆಲಿಂಗಾಯತ ಅನ್ನೋದು ಜಾತಿಯಲ್ಲ. ಅದೊಂದು ತತ್ವ, ಸಿದ್ಧಾಂತ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್‌ನ ದಾವಣಗೆರೆ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನೆ, ನಡೆ-ನುಡಿಗಳ ಶುದ್ಧಿ ವಿಷಯದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳುವವರೇ ಲಿಂಗಾಯತರು, ಅಂಗದ ಮೇಲೆ ಲಿಂಗ ಧರಿಸಿ, ಪೂಜೆ ಮಾಡುವವರು ಮಾತ್ರ ಲಿಂಗಾಯತರು. ಲಿಂಗಾಯತತನವು ಹುಟ್ಟಿನಿಂದ ಬರುವುದಿಲ್ಲ. ಸಾಧನೆಯಿಂದ ಮಾತ್ರ ಬರುತ್ತದೆ. ನನ್ನ ತಂದೆ, ತಾಯಿ ಲಿಂಗಾಯತರು. ನಾನು ಲಿಂಗಾಯತನೆಂದರೆ ಆಗಲ್ಲ ಎಂದು ತಿಳಿಸಿದರು.ಒಂದೆಡೇ ವೈದಿಕ ಪರಂಪರೆ ಅಪ್ಪಿಕೊಂಡು, ಇನ್ನೊಂದೆಡೆ ಬಸವ ತತ್ವ ಇರಬೇಕೆನ್ನುತ್ತೇವೆ. ಅದೂ ಇರಲಿ, ಇದೂ ಇರಲಿಯೆಂದರೆ ಶರಣ ತತ್ವ ಒಪ್ಪುವುದಿಲ್ಲ. ನಾವೇ ಪಾಲಿಸದಿದ್ದರೆ, ಇನ್ನೊಬ್ಬರಿಗೆ ಹೇಳುವ ನೈತಿಕತೆ ಕಳೆದುಕೊಳ್ಳುತ್ತೇವೆ. ಶರಣರ ನಡೆ-ನುಡಿ ಒಂದಾಗದಿದ್ದರೆ ಬಸವ ತತ್ವದಿಂದ ಸಂಪೂರ್ಣ ದೂರವಿದ್ದೇವೆ. ಬಸವ ಪರಂಪರೆ ಒಪ್ಪಿಕೊಂಡವರು ವೈದಿಕ ಪರಂಪರೆ ದೂರವಿಡಬೇಕು. ವೈದಿಕ ಮತ್ತು ಬಸವ ಪರಂಪರೆ ಎರಡೂ ಇರಲೆಂದರೆ ಬಸವತತ್ವ ಅದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಕೆಲವರು ಕಲ್ಲು, ಮಣ್ಣು, ಮೂರ್ತಿ ಪೂಜೆ ಮಾಡುತ್ತಾರೆ. ಶರಣ ತತ್ವ ಅರ್ಥವಾದವರು ಹೀಗೆಂದೂ ಮಾಡುವುದಿಲ್ಲ. ವೈದಿಕ ಮತ್ತು ಬಸವ ಪರಂಪರೆ ಎರಡೂ ಇರಲಿ ಎಂಬ ಧ್ವಂದ್ವ ಭಾವ ಯಾರಿಗೂ ಇರಬಾರದು. ಇದ್ದರೆ ಒಂದು ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ. ದ್ವಂಧ್ವವಿದ್ದರೆ 12ನೇ ಶತಮಾನದಲ್ಲಿ ಬಸವಾದಿ ಶರಣರು ಅಂತಹ ಕ್ರಾಂತಿ ಮಾಡುತ್ತಿರಲಿಲ್ಲ. ಬಸವಣ್ಣ ಕ್ರಾಂತಿ ಮಾಡಲಿಕ್ಕೆ ಮೇಲ್ವರ್ಗದವರ ಆಯ್ಕೆ ಮಾಡಿಕೊಳ್ಳಲಿಲ್ಲ. ಬದಲಿಗೆ ಕೆಳಪಂಕ್ತಿಯವರ ಜಾಗೃತಗೊಳಿಸಿದರು. ಹಾಗಾಗಿ, ಅಂದು ಕ್ರಾಂತಿ ಸಾಧ್ಯವಾಯಿತು ಎಂದು ತಿಳಿಸಿದರು.ಶಸಾಪ ಚನ್ನಗಿರಿ ತಾಲೂಕು ಗೌರವಾಧ್ಯಕ್ಷ ಎಚ್.ಎಸ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಲಿಂಗವಂತರಾದ ಬಳಿಕ ಕಾಯಕ ಮಾಡಿ, ಜೀವಿಸಬೇಕು. ಕಾಯಕವಿದ್ದಲ್ಲಿ ಕೈಲಾಸವಿದೆಯೆಂದು ಶರಣರು ಸಾರಿದ್ದಾರೆ. ಹಾಗಾಗಿ ಲಿಂಗವಂತರಾದ ಶರಣರು ದುಡಿದು ತಿನ್ನಬೇಕು. ಎಲ್ಲಕ್ಕಿಂತ ಮೊದಲು ಪರಿಷತ್‌ನ ಎಲ್ಲಾ ಪದಾಧಿಕಾರಿಗಳು ಲಿಂಗ ಧರಿಸಬೇಕು ಎಂದರು.
ಪರಿಷತ್ ಗೌರವಾಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ನೂತನ ಅಧ್ಯಕ್ಷ ಎಸ್.ಬಿ.ರುದ್ರಗೌಡ ಮತ್ತು ತಂಡಕ್ಕೆ ದೀಕ್ಷಾ ಬೋಧನೆ ಮಾಡಿದರು. ಕೆ.ಬಿ.ಕೊಟ್ರೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಶಸಾಪ ಜಿಲ್ಲಾ ಕಾರ್ಯದರ್ಶಿ ಎನ್.ಎಸ್.ರಾಜು, ವಿಶ್ವ ಮಾನವ ಮಂಟಪ ಸಂಸ್ಥಾಪಕ ಆವರಗೆರೆ ರುದ್ರಮುನಿ ಇತರರಿದ್ದರು. ಬಸಾಪುರ ಬಸವ ಕಲಾಲೋಕದಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಪದಾಧಿಕಾರಿಗಳು ಇಷ್ಟಲಿಂಗ ದೀಕ್ಷೆ ಪಡೆಯಿರಿನಮ್ಮಲ್ಲಿ ಧ್ವಂಧ್ವ ಮನೋಭಾವ ಇದ್ದಲ್ಲಿ ಒಂದು ತತ್ವಕ್ಕೆ ಬದ್ಧರಾಗಲು ಸಾಧ್ಯವಿಲ್ಲ. ಮೊದಲಿಗೆ ಶರಣ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಬೇಕು. ಪರಿಷತ್‌ನ ಎಲ್ಲಾ ಚಟುವಟಿಕೆಗಳು ಬಸವ ತತ್ವದ ಹಾದಿಯಲ್ಲಿ ನಡೆಯಲಿದೆ. ಲಿಂಗಾಯತ ಎನ್ನುವುದು ಜಾತಿಯಲ್ಲ. ಅದೊಂದು ತತ್ವ ಸಿದ್ಧಾಂತವೆಂಬುದು ಎಲ್ಲರೂ ಅರಿಯಬೇಕು.
ಡಾ.ಪಂಡಿತಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿ ಮಠ.....................................................ಮನ ಮೆಚ್ಚಿ ನಡೆಯುವುದು ಮುಖ್ಯ: ಸಾಣೇಹಳ್ಳಿ ಶ್ರೀ
ದೇವಸ್ಥಾನ, ಗುಡಿ, ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡವುದಕ್ಕೆ ಹೊರತು, ದೇವರಿದ್ದಾನೆ ಎನ್ನುವುದಕ್ಕೆ ಅಲ್ಲ. ಯಾವುದೇ ಗುಡಿ, ದೇವಸ್ಥಾನದ ಶಂಕುಸ್ಥಾಪನೆ, ಭೂಮಿಪೂಜೆ, ಕಳಸಾರೋಹಣದಲ್ಲಿ ನಾವು ಭಾಗವಹಿಸುತ್ತಿಲ್ಲ. ಇದನ್ನೂ ಟೀಕಿಸುವವರೂ ಸಾಕಷ್ಟು ಜನರಿದ್ದಾರೆ. ನಮಗೆ ಟೀಕೆ ಮುಖ್ಯವಲ್ಲ. ಬದ್ಧತೆ ಇರಬೇಕಾಗುತ್ತದೆ. ಅಂತಹ ಬದ್ಧತೆಗೆ ಅನುಗುಣವಾಗಿ ಬದುಕಿದರೆ ಬಸವಣ್ಣನೂ ಮೆಚ್ಚುವ ಗುಣ ನಮ್ಮದಾಗುತ್ತದೆ. ಜನ ಮೆಚ್ಚಿ ನಡೆದುಕೊಳ್ಳುವವರಿಗಿಂತ ಮನ ಮೆಚ್ಚಿ ನಡೆದುಕೊಳ್ಳುವವರು ಅತೀ ಮುಖ್ಯ ಎಂದು ಡಾ.ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.