ಬತ್ತಿದ ಜಲಮೂಲಗಳಲ್ಲಿ ಮತ್ತೆ ಜೀವಕಳೆ

| Published : Mar 22 2024, 01:07 AM IST

ಸಾರಾಂಶ

ಬರಗಾಲ ಆವರಿಸಿದ್ದರಿಂದ ಜೀವ ಜಲ ಅಸ್ತಿತ್ವ ಕಳೆದುಕೊಳ್ಳುವುದು ಸಾಮಾನ್ಯ. ನೀರು ಸಂಗ್ರಹವಾಗದಿದ್ದರೆ ಭವಿಷ್ಯದಲ್ಲಿ ಬದುಕು ನಡೆಸುವುದು ಕೂಡ ಕಠೋರವಾಗುತ್ತದೆ. ಇದೆಲ್ಲ ತಿಳಿದೂ ಜನರು ಮಾತ್ರ ತಲೆ ಕೆಡಿಸಿಕೊಳ್ಳದೇ ಬೇಕಾ ಬಿಟ್ಟಿಯಾಗಿ ನೀರನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಇದೀಗ ಜನರು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ. ಈಗ ಬರ ಆವರಿಸಿದೆ. ಹೀಗಾಗಿ ಅಂತರ್ಜಲಮಟ್ಟ ಕುಸಿದು ಜಲಮೂಲಗಳು ಬತ್ತಿ ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಕಾಲುವೆ ಮೂಲಕ ಹಳ್ಳಕ್ಕೆ ನೀರು ಹರಿಸಿದ್ದರಿಂದ ಹಳ್ಳದ ಸುತ್ತಮುತ್ತಲಿರುವ ಗ್ರಾಮಗಳಲ್ಲಿನ ಬಾವಿ, ಬೋರ್ವೆಲ್ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿದೆ. ಇದರಿಂದ ಕುಡಿಯುವ ನೀರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಅನುಕೂಲವಾಗಿದೆ.

ಖಾಜು ಸಿಂಗೆಗೋಳಕನ್ನಡಪ್ರಭ ವಾರ್ತೆ ಇಂಡಿ

ಬರಗಾಲ ಆವರಿಸಿದ್ದರಿಂದ ಜೀವ ಜಲ ಅಸ್ತಿತ್ವ ಕಳೆದುಕೊಳ್ಳುವುದು ಸಾಮಾನ್ಯ. ನೀರು ಸಂಗ್ರಹವಾಗದಿದ್ದರೆ ಭವಿಷ್ಯದಲ್ಲಿ ಬದುಕು ನಡೆಸುವುದು ಕೂಡ ಕಠೋರವಾಗುತ್ತದೆ. ಇದೆಲ್ಲ ತಿಳಿದೂ ಜನರು ಮಾತ್ರ ತಲೆ ಕೆಡಿಸಿಕೊಳ್ಳದೇ ಬೇಕಾ ಬಿಟ್ಟಿಯಾಗಿ ನೀರನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಇದೀಗ ಜನರು ನೀರಿಗಾಗಿ ಪರಿತಪಿಸುವುದು ಸಾಮಾನ್ಯವಾಗಿದೆ. ಈಗ ಬರ ಆವರಿಸಿದೆ. ಹೀಗಾಗಿ ಅಂತರ್ಜಲಮಟ್ಟ ಕುಸಿದು ಜಲಮೂಲಗಳು ಬತ್ತಿ ಪ್ರಾಣಿ, ಪಕ್ಷಿಗಳಿಗೂ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ, ಕಾಲುವೆ ಮೂಲಕ ಹಳ್ಳಕ್ಕೆ ನೀರು ಹರಿಸಿದ್ದರಿಂದ ಹಳ್ಳದ ಸುತ್ತಮುತ್ತಲಿರುವ ಗ್ರಾಮಗಳಲ್ಲಿನ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಿದೆ. ಇದರಿಂದ ಕುಡಿಯುವ ನೀರು ಸೇರಿದಂತೆ ಪ್ರಾಣಿ, ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಅನುಕೂಲವಾಗಿದೆ.

ನಾರಾಯಣಪುರ ಜಲಾಶಯದಿಂದ ಸಿಂದಗಿ ತಾಲೂಕಿನ ಬಳಗಾನೂರು ಕೆರೆಗೆ ನೀರು ಬಿಡಲಾಗುತ್ತದೆ. ಅಲ್ಲಿಂದ ಕಾಲುವೆ ಮೂಲಕ ತಾಲೂಕಿನ ಸಂಗೋಗಿ ಕೆರೆ ತುಂಬಲಾಗಿದೆ. ಇದರಿಂದ ನಾದ, ಗೊಳಸಾರ ಹಳ್ಳಕ್ಕೆ ನೀರು ಹರಿಸಿದ್ದರಿಂದ ಈ ಕೆರೆಗಳಲ್ಲೂ ನೀರು ತುಂಬಿದೆ. ನಾದ ಹಾಗೂ ಗೊಳಸಾರ ಬಳಿ ಹರಿದಿರುವ ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಬಾಂದಾರುಗಳು ತುಂಬಿದ್ದರಿಂದ ಇಂದು ಹಳ್ಳದ ದಂಡೆಯ ಮೇಲಿರುವ ಗ್ರಾಮಗಳ ಜನರು ಹಾಗೂ ರೈತರು ಹರ್ಷಗೊಂಡಿದ್ದಾರೆ.

ಹಲವು ವರ್ಷಗಳಿಂದ ಮಳೆ ಇಲ್ಲದೇ ನಾದ ಬಳಿ ಹರಿದಿರುವ ಹಳ್ಳ ನೀರು ತುಂಬಿ ಹರಿದಿಲ್ಲ. ಈ ಹಳ್ಳ ನಾದ, ಗೋಳಸಾರ, ಮಿರಗಿ ಗ್ರಾಮದ ಮುಂದೆ ಹರಿದು ಭೀಮಾನದಿ ಸಂದಿಸುತ್ತದೆ. ಈ ಹಳ್ಳಕ್ಕೆ ಹೊಂದಿಕೊಂಡಂತೆ, ನಾದ ಬಿಕೆ, ನಾದ ಕೆಡಿ, ಗೊಳಸಾರ, ಲಾಳಸಂಗಿ, ಶಿವಪೂರ ಕೆಡಿ, ಮಿರಗಿ ಗ್ರಾಮಗಳು ಸಮೀಪವಾಗುತ್ತವೆ. ಕೆಬಿಜೆಎನ್‌ಎಲ್‌ ಅಧಿಕಾರಿಗಳು ಈ ಹಳ್ಳಕ್ಕೆ ಕಾಲುವೆ ಮೂಲಕ ನೀರಿನ ಅನುಕೂಲಕ್ಕಾಗಿ ನೀರು ಹರಿಸಿದ್ದರಿಂದ ಈ ಎಲ್ಲ ಗ್ರಾಮಗಳಲ್ಲಿನ ಬಾವಿ, ಬೋರ್‌ವೆಲ್‌ಗಳಿಗೆ ಅಂತರ್ಜಲಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಅನುಕೂಲವಾಗಿದೆ.

ಮಳೆಯಿಂದ ಹಳ್ಳಕ್ಕೆ ನೀರು ಹರಿಯದೇ ಇರುವ ಕಾಲದಲ್ಲಿ ಕಾಲುವೆ ಮೂಲಕ ನೀರು ಹರಿಸಿದ್ದರಿಂದ ಇಂದು ಅಂತರ್ಜಲಮಟ್ಟ ಹೆಚ್ಚಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ. ಅಲ್ಲದೆ. ಪ್ರಾಣಿ, ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗಿದೆ. ಆದ್ದರಿಂದ ಮಳೆಗಾಲದಲ್ಲಿ ಮಳೆ ನೀರಿನ ಕೊಯ್ಲಿನಂತಹ ವಿಧಾನಗಳನ್ನು ಅನುಸರಿಸಿ ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಬೇಕಿದೆ. ಹೀಗೆ ಮಾಡಿದರೆ ಮಾತ್ರ ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಬರಗಾಲದಲ್ಲೂ ಜಲಮೂಲಗಳು ಬತ್ತುವುದಿಲ್ಲ. ಇದರೊಟ್ಟಿಗೆ ನೀರಿನ ಸಂರಕ್ಷಣೆ ಕೂಡಾ ಮೂಖ್ಯವಾಗಿದೆ.

---

ಕೋಟ್‌

ನಾದ ಹಳ್ಳದ ದಂಡೆಯ ಮೇಲಿರುವ ಹಲವು ಗ್ರಾಮಗಳಲ್ಲಿ ಹಾಗೂ ಜನವಸತಿ ಪ್ರದೇಶದಲ್ಲಿನ ತೆರೆದ ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಕುಸಿದ್ದಿದ್ದರಿಂದ ನೀರಿನ ಸಮಸ್ಯೆ ತಲೆದೊರಿತ್ತು. ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದವು. ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಲು ಮನವಿ ಮಾಡಿಕೊಂಡಿದ್ದರಿಂದ ನಮ್ಮ ಮನವಿಗೆ ಸ್ಪಂದಿಸಿ ನಾದ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಿದ್ದರಿಂದ ಇಂದು ಹಳ್ಳದ ದಂಡೆಯಲ್ಲಿರುವ ತೆರೆದ ಬಾವಿ, ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ನೀರು ಹೆಚ್ಚಾಗಿದೆ.

-ಎಂ.ಆರ್.ಪಾಟೀಲ(ಗೊಳಸಾರ), ಹಿರಿಯ ಮುಖಂಡರು.

---

ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದೇಶ ಮಾಡಿದ್ದರಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಿ ಕಾಲುವೆ ಮೂಲಕ ನೀರು ಹರಿಸಲಾಗಿದೆ. ನಾದ ಹಳ್ಳಕ್ಕೆ ನೀರು ಹರಿಸಿದರೆ ಹಳ್ಳದ ಸುತ್ತಮುತ್ತಲಿನ ಸುಮಾರು 8 ರಿಂದ 9 ಹಳ್ಳಿಗಳಲ್ಲಿನ ಜನರಿಗೆ ನೀರಿನ ಅನುಕೂಲವಾಗುವುದಲ್ಲದೆ, ತೆರೆದ ಬಾವಿ, ಬೋರ್‌ವೆಲ್‌ಗಳು ರೀಚಾರ್ಜ್‌ ಆಗುತ್ತವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೇಳಿದ್ದರಿಂದ ನಾದ ಹಳ್ಳಕ್ಕೆ ನೀರು ಕಾಲುವೆ ಮೂಲಕ ನೀರು ಹರಿಸಲಾಗಿದೆ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಮಾತ್ರ ನೀರು ಬಳಕೆ ಮಾಡಿಕೊಳ್ಳಬೇಕು.

-ಮನೋಜಕುಮಾರ ಗಡಬಳ್ಳಿ, ಅಧೀಕ್ಷಕ ಅಭಿಯಂತರ ಕೆಬಿಜೆಎನ್‌ಎಲ್‌, ರಾಂಪೂರ.

---

ಬಾಕ್ಸ್‌

ಹಲವು ಗ್ರಾಮಗಳಿಗೆ ಅನುಕೂಲ

ನಾದ ಹಾಗೂ ಮಾರ್ಸನಹಳ್ಳಿ ಗ್ರಾಮದ ಮುಂದೆ ಹರಿದಿರುವ ಹಳ್ಳಗಳಿಗೆ ಕಾಲುವೆ ಮೂಲಕ ನೀರು ಹರಿಸಿದ್ದರಿಂದ ನಾದ ಹಳ್ಳದ ದಂಡೆಯ ಮೇಲಿರುವ ನಾದ ಬಿಕೆ, ನಾದ ಕೆಡಿ, ಲಾಳಸಂಗಿ, ಗೋಳಸಾರ, ಶಿವಪೂರ, ಮಿರಗಿ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲವಾಗಿದೆ. ಅಲ್ಲದೇ, ಅಂತರ್ಜಲಮಟ್ಟ ಹೆಚ್ಚಾಗಿ ತೆರೆದ ಬಾವಿ, ಬೋರ್‌ವೆಲ್‌ಗಳಿಗೆ ನೀರು ಬರಲು ಅನುಕೂಲವಾಗಿದೆ.

ಮಾರ್ಸನಹಳ್ಳಿ ಗ್ರಾಮದ ಮುಂದೆ ಹರಿದಿರುವ ಹಳ್ಳಕ್ಕೆ ನೀರು ಹರಿಸಿದ್ದರಿಂದ ಈ ಹಳ್ಳದ ಬದಿಯಲ್ಲಿ ಇರುವ ವಿಭೂತಿಹಳ್ಳಿ, ಮಾರ್ಸನಹಳ್ಳಿ, ಅರ್ಜುಣಗಿ, ಬಿ.ಕೆ.ಅರ್ಜುಣಗಿ ಕೆಡಿ ಹಾಗೂ ಹಂಜನಾಳ ಆಲಮೇಲ ವಸತಿ, ಮಿರಗಿ ಗ್ರಾಮದ ಸಾರ್ವಜನಿಕರಿಗೆ, ರೈತರಿಗೆ ಪ್ರಾಣಿ,ಪಕ್ಷಿ,ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆಗೆ ಅಲ್ಪಸ್ವಲ್ಪ ಕೃಷಿಗೆ ಅನುಕೂಲವಾಗಿದೆ. ಅಲ್ಲದೆ ಅಂತರ್ಜಲಮಟ್ಟ ಹೆಚ್ಚಾಗಲು ಕಾರಣವಾಗಿದೆ.