ಉಡುಪಿ-ಚಿಕ್ಕಮಗಳೂರು -: ಕಾಂಗ್ರೆಸ್‌ನ ಲೋಕಲ್‌ ಗ್ಯಾರಂಟಿ, ಮೋದಿ ಗ್ಯಾರಂಟಿ ಪೈಪೋಟಿ

| Published : Apr 14 2024, 01:54 AM IST / Updated: Apr 14 2024, 10:17 AM IST

bjp congress
ಉಡುಪಿ-ಚಿಕ್ಕಮಗಳೂರು -: ಕಾಂಗ್ರೆಸ್‌ನ ಲೋಕಲ್‌ ಗ್ಯಾರಂಟಿ, ಮೋದಿ ಗ್ಯಾರಂಟಿ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

. ಕಾಂಗ್ರೆಸ್‌ ಪಕ್ಷ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ನುಡಿದಂತೆ ನಡೆದಿದ್ದೇವೆ ಮತ ಕೊಡಿ ಎಂದರೆ, ಬಿಜೆಪಿಯು ದೇಶದ ರಕ್ಷಣೆಗೆ, ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ, ಅವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದೆ.

ಸುಭಾಶ್ಚಂದ್ರ ವಾಗ್ಳೆ/ತಾರಾನಾಥ್

 ಉಡುಪಿ/ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರಿನಲ್ಲೀಗ ಗ್ಯಾರಂಟಿಗಳ‍ ನಡುವೆ ಸ್ಪರ್ಧೆ. ಕಾಂಗ್ರೆಸ್‌ ಪಕ್ಷ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ನುಡಿದಂತೆ ನಡೆದಿದ್ದೇವೆ ಮತ ಕೊಡಿ ಎಂದರೆ, ಬಿಜೆಪಿಯು ದೇಶದ ರಕ್ಷಣೆಗೆ, ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ, ಅವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದೆ.

ಕಾಂಗ್ರೆಸ್ ಪಕ್ಷ ಮಾಜಿ ಸಚಿವ, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ.

ಶಾಸಕರಾಗಿದ್ದಾಗ ಸದನಶೂರ ಎಂದೇ ಪ್ರಸಿದ್ಧರಾಗಿದ್ದ ಹೆಗ್ಡೆ ಅವರಿಗೆ ಹಿಂದೆ ವಿಧಾನಸಭೆಗೆ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಅನುಭವ, ಸ್ವಂತ ವರ್ಚಸ್ಸು ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಎಲ್ಲ 4 ಶಾಸಕರು ಸೋತು ಕಾಂಗ್ರೆಸ್ ಗೆದ್ದಿರುವುದು ಅವರಿಗೆ ಪ್ಲಸ್ ಆಗಲಿದೆ. ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಜೊತೆಗೆ, ಹಿಂದೆ ತಾನು ಸಚಿವನಾಗಿದ್ದಾಗ ಕರಾವಳಿ ಮೀನುಗಾರರಿಗೆ, ಮಲೆನಾಡಿನ ಕೃಷಿಕರಿಗೆ ಮಾಡಿರುವ ಕೆಲಸಗಳನ್ನು ನೆನಪಿಸುತ್ತಾ ಮತ ಕೇಳುತ್ತಿದ್ದಾರೆ. ದೆಹಲಿಯ ನಾಯಕನಿಗಲ್ಲ, ಕ್ಷೇತ್ರದಲ್ಲಿ ಗ್ಯಾರಂಟಿ ಕೆಲಸ ಮಾಡುವ ತನಗೆ ಮತ ನೀಡಿ ಎಂದು ಬಿಜೆಪಿಗೆ ಟಕ್ಕರ್ ಕೊಡುತ್ತಿದ್ದಾರೆ.

ಗ್ರಾ.ಪಂ, ತಾ.ಪಂ, ಜಿ.ಪಂ.ನಿಂದ ವಿಧಾನ ಪರಿಷತ್ತಿನವರೆಗೆ ಹಂತಹಂತವಾಗಿ ಮೇಲೆ ಬಂದಿರುವವರು ಕೋಟ ಶ್ರೀನಿವಾಸ ಪೂಜಾರಿ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರ ಬದಲಾಯಿಸಿದಾಗ, ಅನಿರೀಕ್ಷಿತವಾಗಿ ಕೋಟ ಅವರಿಗೆ ಟಿಕೆಟ್ ಒಲಿದಿದೆ. ಹಿಂದುತ್ವ ಮತ್ತು ಅಭಿವೃದ್ಧಿ ತನ್ನ ಅಜೆಂಡಾ, ಅದಕ್ಕಾಗಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತ ನೀಡಿ, ಮೋದಿ ಗೆದ್ದರೆ ಅಭಿವೃದ್ಧಿ ಗ್ಯಾರಂಟಿ ಎನ್ನುತ್ತಾ ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೌಂಟರ್ ಕೊಡುತ್ತಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಒಂದು ಲಕ್ಷದಷ್ಟು ಹೊಸ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಅವರೆಲ್ಲ ತಮ್ಮ ಮತದಾರರು ಎನ್ನುವುದು ಬಿಜೆಪಿಯ ವಿಶ್ವಾಸ. ಗೃಹಲಕ್ಷ್ಮೀ, ಗೃಹಶಕ್ತಿ ಯೋಜನೆಯ ಲಾಭ ಪಡೆದ ಮಹಿಳೆಯರು ತಮ್ಮ ಮತದಾರರು ಎನ್ನುವುದು ಕಾಂಗ್ರೆಸ್‌ನ ಭರವಸೆ.

ಕ್ಷೇತ್ರದ ರಾಜಕೀಯ ಇತಿಹಾಸ:

2009ರಲ್ಲಿ ಹೊಸದಾಗಿ ರೂಪುಗೊಂಡಿರುವ ಅರ್ಧ ಕರಾವಳಿ, ಇನ್ನರ್ಧ ಅರೆ ಮಲೆನಾಡು-ಬಯಲುಸೀಮೆ ಹೊಂದಿರುವ ಕ್ಷೇತ್ರ ಇದು. ಅದಕ್ಕೆ ಮೊದಲು ಉಡುಪಿ ಮತ್ತು ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದವು. ಈ ಹೊಸ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 4 ಲೋಕಸಭಾ ಚುನಾವಣೆಯಲ್ಲಿ 3 ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್ ಗೆದ್ದಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಗೆ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ ಪ್ರಸ್ತುತ ಚಿಕ್ಕಮಗಳೂರಿನ 4 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಉಡುಪಿಯ 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

2018ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರಿನಲ್ಲಿ ಬಿಜೆಪಿ ಶೇ.62.46 ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ.32.09 ಮತ ಗಳಿಸಿತ್ತು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.47.50 ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ.42.12 ಮತ ಗಳಿಸಿದ್ದು, ಬಲವರ್ಧನೆ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಗೆ ಭರವಸೆ ಮೂಡಿಸಿದೆ.

ಹಳೆ ಸ್ಪರ್ಧಿಗಳ ಹೊಸ ಸ್ಪರ್ಧೆ:

ಜಯಪ್ರಕಾಶ್ ಹೆಗ್ಡೆ ಮತ್ತು ಕೋಟ ಶ್ರೀನಿವಾಸ ಪೂಜಾರಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲೇನಲ್ಲ. 2004 ಮತ್ತು 2009ರ ವಿಧಾನಸಭಾ ಚುನಾವಣೆಯಲ್ಲಿ ಹೆಗ್ಡೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರೆ, ಆಗ ಕೋಟ ಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. 2015ರಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕೋಟ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರೆ, ಜಯಪ್ರಕಾಶ ಹೆಗ್ಡೆ ಅವರು ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದರು. ಈಗ ಮತ್ತೆ ಲೋಕಸಭೆಯಲ್ಲಿ ಮುಖಾಮುಖಿಯಾಗಿದ್ದಾರೆ.

ಜಾತಿ-ಮತ ಲೆಕ್ಕಾಚಾರ

ಉಡುಪಿಯಲ್ಲಿ ಬಿಲ್ಲವರ ಸಂಖ್ಯೆ ಹೆಚ್ಚಿದೆ. ಬಂಟರು, ಮೋಗವೀರರು ನಂತರದ ಸ್ಥಾನದಲ್ಲಿದ್ದಾರೆ. ಆದ್ದರಿಂದಲೇ ಬಿಜೆಪಿ ಬಿಲ್ಲವ ಅಭ್ಯರ್ಥಿಯನ್ನು, ಕಾಂಗ್ರೆಸ್ ಬಂಟ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚಿಕ್ಕಮಗಳೂರಿನಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಪ.ಜಾ-ಪ.ಪಂ. ಮತ್ತು ಹಿಂದುಳಿದ ವರ್ಗಗಳೇ ನಿರ್ಣಾಯಕರು. ಆದರೆ ಯಾರ ಬೆಂಬಲ ಯಾರಿಗೆ ಎಂಬುದು ಎರಡೂ ಪಕ್ಷಗಳ ಲೆಕ್ಕಕ್ಕೆ ಸಿಗುತ್ತಿಲ್ಲ. ಈವರೆಗೆ ಜೆಡಿಎಸ್ ಅನ್ನು ಬೆಂಬಲಿಸುತ್ತಿದ್ದ ಮುಸ್ಲಿಂ ಮತದಾರರು ಈ ಬಾರಿ ಬಿಜೆಪಿ ಜೊತೆ ಕೈಜೋಡಿಸಿರುವ ಜೆಡಿಎಸ್ ಅನ್ನು ಬಿಟ್ಟರೆ ಕಾಂಗ್ರೆಸ್‌ಗೆ ಲಾಭವಾಗಲಿದೆ.

2019ರ ಫಲಿತಾಂಶ

ಗೆದ್ದವರು: ಶೋಭಾ ಕರಂದ್ಲಾಜೆ (ಬಿಜೆಪಿ) - ಮತಗಳು 7,18,916

ಸೋತವರು: ಪ್ರಮೋದ್ ಮಧ್ವರಾಜ್ (ಜೆಡಿಎಸ್) - ಮತಗಳು 3,69,317

ಮತದಾರರ ವಿವರ

ಪುರುಷ ಮತದಾರರು - 7,64,246

ಮಹಿಳಾ ಮತದಾರರು - 8,11,981

ಇತರ ಮತದಾರರು - 37

ಒಟ್ಟು ಮತದಾರರು - 15,76,264ಕೆ.ಜಯಪ್ರಕಾಶ್ ಹೆಗ್ಡೆ

ಕಾಂಗ್ರೆಸ್‌ ಅಭ್ಯರ್ಥಿ

ಕುಂದಾಪುರ ತಾಲೂಕಿನವರಾದ ಜಯಪ್ರಕಾಶ್ ಹೆಗ್ಡೆ, 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷದಿಂದ ಗೆದ್ದು ಮೀನುಗಾರಿಕಾ, ಬಂದರು ಸಚಿವರಾಗಿದ್ದವರು. ನಂತರ 2 ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದವರು. 2012ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ 20 ತಿಂಗಳು ಸಂಸದರಾಗಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅವರು ಹೈಕೋರ್ಟಿನ ವಕೀಲರೂ ಆಗಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ

ಬಿಜೆಪಿ ಅಭ್ಯರ್ಥಿ

1993ರಲ್ಲಿ ಕೋಟತಟ್ಟು ಗ್ರಾಪಂ ಸದಸ್ಯನಾಗಿ ರಾಜಕೀಯಕ್ಕೆ ಪ್ರವೇಶ. ನಂತರ ತಾಪಂ, ಜಿಪಂ ಸದಸ್ಯರಾಗಿ, 2008ರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಯಾಗಿ, ಸತತ 4 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾದವರು. ಮುಜರಾಯಿ ಸಚಿವರಾಗಿ, ಹಿಂದುಳಿದ ವರ್ಗಗಳ ಮತ್ತು ಸಮಾಜಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿದ್ದರು. ಪ್ರಸ್ತುತ ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.