ಸಾರಾಂಶ
ಬ್ಯಾಡಗಿ ಪಟ್ಟಣದ ಸಂಗಮೇಶ್ವರ ನಗರದಲ್ಲಿ ಎರಡು ಮನೆಗಳ ಬೀಗ ಮುರಿದು ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ 600 ಗ್ರಾಂ ಚಿನ್ನದೊಡವೆ ಸೇರಿದಂತೆ 1.60 ಲಕ್ಷ ಹಣ ದೋಚಿಕೊಂಡು ಪರಾರಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಬ್ಯಾಡಗಿ: ಪಟ್ಟಣದ ಸಂಗಮೇಶ್ವರ ನಗರದಲ್ಲಿ ಎರಡು ಮನೆಗಳ ಬೀಗ ಮುರಿದು ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ 600 ಗ್ರಾಂ ಚಿನ್ನದೊಡವೆ ಸೇರಿದಂತೆ 1.60 ಲಕ್ಷ ಹಣ ದೋಚಿಕೊಂಡು ಪರಾರಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.
ಎಲ್‌ಐಸಿ ಏಜೆಂಟ್ ಮೃತ್ಯುಂಜಯ ಕೆರೂಡಿ ಎಂಬುವರ ಮನೆಯಲ್ಲಿ 450 ಗ್ರಾಂ.ಚಿನ್ನ ಹಾಗೂ ರು. 10 ಸಾವಿರ, ಕ್ರಷರ್ ಮಾಲೀಕ ತಿರಕಪ್ಪ ಬೆಳಕೇರಿ ಅವರಿಗೆ ಸೇರಿದ ಮನೆಯಲ್ಲಿ 150 ಗ್ರಾಂ.ಚಿನ್ನ 1.50 ಲಕ್ಷ ರು. ದೋಚಿದ್ದಾರೆ. ಕಳ್ಳತನ ಘಟನೆಗಳು ಎದುರು ಬದುರು ಮನೆಗಳಲ್ಲಿ ನಡೆದಿದ್ದು ಎರಡೂ ಮನೆಗಳಲ್ಲಿ ಯಾರೂ ಇರಲಿಲ್ಲ. ಆದರೆ ಮೃತ್ಯುಂಜಯ ಕೆರೂಡಿ ಮಾತ್ರ ತಮ್ಮ ಮನೆ ದೇವರು ಉಜನಿ ಗ್ರಾಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಮಗಳ ಮದುವೆಗೆಂದು ಮಾಡಿಸಿಟ್ಟಿದ್ದ ಚಿನ್ನದಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.ಸಂಜೆ ವೇಳೆ ಘಟನೆ:ಸಂಜೆ ವೇಳೆ ಅದೂ ಜನನಿಬಿಡ ಪ್ರದೇಶದಲ್ಲಿಯೇ ಕಳ್ಳತನ ಘಟನೆ ನಡೆದಿದ್ದು ಪಟ್ಟಣದ ಜನರನ್ನು ಇನ್ನಷ್ಟು ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟಕ್ಕೂ ಶಾಸಕ ಬಸವರಾಜ ಶಿವಣ್ಣನವರ ಮನೆ ಪಕ್ಕದಲ್ಲಿ ಕಳ್ಳತನ ಘಟನೆ ನಡೆದಿದ್ದು, ಎಕ್ಸ್ಯುವಿ ಕಾರಿನಲ್ಲಿ ಬಂದ ನುರಿತ ಕಳ್ಳರ ತಂಡವು ಇದರಲ್ಲಿ ಭಾಗಿಯಾಗಿದ್ದಾಗಿ ಪೋಲಿಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಸದರಿ ಕಾರು ಬಸವೇಶ್ವರ ನಗರ ಹಾಗೂ ಸುಭಾಸ್ ಸರ್ಕಲ್‌ನಲ್ಲಿ ಸಾಕಷ್ಟು ಬಾರಿ ಓಡಾಡಿದೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಾವೇರಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರಾದರೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ, ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತಂಡಗಳನ್ನು ರಚಿಸಿ ಕಳ್ಳರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.