ಲೋಕಾಯುಕ್ತ ಅರ್ಜಿ ಶೀಘ್ರ ವಿಲೇವಾರಿ ಮಾಡಿ

| Published : Oct 19 2025, 01:00 AM IST

ಸಾರಾಂಶ

ಉಪಲೋಕಾಯುಕ್ತರ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲು ಸ್ವಾಗತ ಸಮಿತಿ, ಶಿಷ್ಟಾಚಾರ, ವೇದಿಕೆ, ಆಹಾರ, ಸಾರಿಗೆ ಸಮಿತಿ ಸೇರಿದಂತೆ ಈಗಾಗಲೇ ವಿವಿಧ ಸಮಿತಿ ರಚಿಸಿ, ಕಾರ್ಯ ಹಂಚಿಕೆ ಮಾಡಲಾಗಿದೆ

ಕೊಪ್ಪಳ: ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾದ ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳ ಅರ್ಜಿ ಬಾಕಿ ಇಟ್ಟುಕೊಳ್ಳದೇ ಅವುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತದ ಗೌರವಾನ್ವಿತ ಉಪಲೋಕಾಯುಕ್ತರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅ.29, 30 ಮತ್ತು 31ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಅವಧಿಯಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಅ. 30 ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಅ. 31 ರಂದು ಲೋಕಾಯುಕ್ತ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ. ಆದ್ದರಿಂದ ಇಲಾಖೆಗಳು ಲೋಕಾಯುಕ್ತಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಬಾಕಿ ಇಟ್ಟುಕೊಳ್ಳಬಾರದು. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಆಯಾ ಇಲಾಖೆಗಳ ಮುಖ್ಯಸ್ಥರು ಕ್ರಮ ವಹಿಸಬೇಕೆಂದು ಹೇಳಿದರು.

ಉಪಲೋಕಾಯುಕ್ತರ ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸಲು ಸ್ವಾಗತ ಸಮಿತಿ, ಶಿಷ್ಟಾಚಾರ, ವೇದಿಕೆ, ಆಹಾರ, ಸಾರಿಗೆ ಸಮಿತಿ ಸೇರಿದಂತೆ ಈಗಾಗಲೇ ವಿವಿಧ ಸಮಿತಿ ರಚಿಸಿ, ಕಾರ್ಯ ಹಂಚಿಕೆ ಮಾಡಲಾಗಿದೆ. ಅದರಂತೆ ಎಲ್ಲ ಸಮಿತಿಗಳು ತಮಗೆ ವಹಿಸಲಾದ ಕರ್ತವ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದರು.

ಉಪಲೋಕಾಯುಕ್ತರು ವಿವಿಧ ಸ್ಥಳಗಳಿಗೆ ಭೇಟಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಈ ಬಗ್ಗೆ ಜಿಲ್ಲೆಯಾದ್ಯಂತ ಹೆಚ್ಚಿನ ಪ್ರಚಾರ ಮಾಡಬೇಕು. ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಧ್ವನಿವರ್ಧಕಗಳ ಮೂಲಕ ಬಸ್ ನಿಲ್ದಾಣಗಳಲ್ಲಿ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಚಾರ ಮಾಡಬೇಕು. ಉಪಲೋಕಾಯುಕ್ತರಿಗೆ ಅರ್ಜಿ ಅಥವಾ ದೂರು ಸಲ್ಲಿಸಲು ಬರುವ ಜನರಿಗೆ ವಿಶೇಷ ಕೌಂಟರ್‌ಗಳ ವ್ಯವಸ್ಥೆ ಸೇರಿದಂತೆ ಇತರೆ ಅಗತ್ಯ ಸೌಲಭ್ಯ ಸಾರ್ವಜನಿಕರಿಗೆ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಸೇರಿದಂತೆ ಜಿಲ್ಲಾಮಟ್ಟದ ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.