ಸಾರಾಂಶ
ಬೆಂಗಳೂರು : ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹಾಗೂ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚಂರಡಿ ಮಂಡಳಿಗಳ (ಬಿಡಬ್ಲ್ಯುಎಸ್‌ಎಸ್‌ಬಿ) ಸುಮಾರು 45 ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ನೇತೃತ್ವದಲ್ಲಿ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿದ್ದು, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ವಿದ್ಯುತ್ ಮತ್ತು ನೀರಿನ ಸಂಪರ್ಕ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತರಿಗೆ ಗ್ರಾಹಕರು ದೂರುಗಳನ್ನು ಸಲ್ಲಿಸಿದ್ದರು. ಈ ಬಗ್ಗೆ ಗೌಪ್ಯ ಮಾಹಿತಿ ಸಂಗ್ರಹಿಸಿದಾಗ ಅವ್ಯವಹಾರ ಖಚಿತವಾಯಿತು. ಅಂತೆಯೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಲೋಕಾಯುಕ್ತರ ಆದೇಶದಂತೆ ಗುರುವಾರ ಮಧ್ಯಾಹ್ನ 3.30 ರಿಂದ ದಾಳಿ ನಡೆಸಿದ್ದು, ಲೋಕಾಯುಕ್ತ ಸಂಸ್ಥೆಯಲ್ಲಿ ಬಹುತೇಕ ಬೆಸ್ಕಾಂ ಅಧಿಕಾರಿ ಮತ್ತು ನೌಕರರ ವಿರುದ್ಧ ದಾಖಲಾದ ದೂರುಗಳು ಅಲ್ಲಿನ ಅವ್ಯವಹಾರವನ್ನು ಪುಷ್ಟಿಕರಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ಕಚೇರಿಗೆ ಭೇಟಿ:
ಯಲಹಂಕ ಸ್ಯಾಟ್‌ಲೈಟ್ ಟೌನ್‌ನಲ್ಲಿರುವ ಬೆಸ್ಕಾಂ ಕಚೇರಿಗೆ ಖುದ್ದು ಲೋಕಾಯುಕ್ತರು ಭೇಟಿ ಪರಿಶೀಲಿಸಿದ್ದು, ಕಚೇರಿ ವ್ಯಾಪ್ತಿಯಲ್ಲಿ ನವೆಂಬರ್ ಅಂತ್ಯಕ್ಕೆ 18,57,736 ರು. ಬಿಲ್ ಪಾವತಿ ಬಾಕಿ ಪತ್ತೆಯಾಗಿದೆ. ಕಳೆದ 3 ತಿಂಗಳಿನಿಂದ ಸ್ವೀಕೃತವಾಗಿರುವ ಅರ್ಜಿಗಳು, ಇತ್ಯರ್ಥಪಡಿಸಿರುವ ಹಾಗೂ ಇತ್ಯರ್ಥಪಡಿಸಿದ ಅರ್ಜಿಗಳು ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಲೋಕಾಯುಕ್ತರು ಸೂಚಿಸಿದ್ದಾರೆ.
20 ಸಿಬ್ಬಂದಿ ಪೈಕಿ 7 ಮಂದಿ ಹಾಜರಾತಿ
ಲೋಕಾಯುಕ್ತ ದಾಳಿ ವೇಳೆ ಯಲಹಂಕದ ಜಲ ಮಂಡಳಿಯಲ್ಲಿ 20 ಸಿಬ್ಬಂದಿ ಪೈಕಿ 7 ಜನರು ಮಾತ್ರ ಹಾಜರಾಗಿದ್ದು, ಗೈರಾದವರ ಬಗ್ಗೆ ವಿಚಾರಿಸಿದಾಗ ಕಚೇರಿಯ ವ್ಯವಸ್ಥಾಪಕ ಹಾಗೂ ಕಾರ್ಯಪಾಲಕ ಇಂಜಿನಿಯರ್ ಸೂಕ್ತ ಉತ್ತರ ನೀಡದೆ ನುಣುಚಿಕೊಂಡಿದ್ದಾರೆ. ಆಗ ಎಇಇಗೆ ಕರೆ ಮಾಡಿ ಕಚೇರಿಗೆ ಬರುವಂತೆ ಹೇಳಿದಾಗ 20 ನಿಮಿಷದಲ್ಲಿ ಬರುವುದಾಗಿ ತಿಳಿಸಿ ನಂತರ ಒಂದೂವರೆ ಗಂಟೆ ಕಾದರೂ ಬರಲಿಲ್ಲ. ಇನ್ನೂ ಸಹಕಾರ ನಗರದಲ್ಲಿನ ಬೆಸ್ಕಾಂ ಕಚೇರಿಯಲ್ಲಿ ಹಾಜರಾತಿ, ನಗದು ಘೋಷಣಾ ಹಾಗೂ ಚಲನವಲನ ವಹಿಯನ್ನು ನಿರ್ವಹಿಸದಿರುವುದು ಪತ್ತೆಯಾಗಿದೆ. ಸಹಕಾರ ನಗರದ ರಸ್ತೆಯಲ್ಲಿ ಪೈಪ್ ಅಳವಡಿಸುವ ಕಾಮಗಾರಿಗಾಗಿ ಒಂದೂವರೆ ತಿಂಗಳಿನಿಂದ ರಸ್ತೆ ಅಗೆದಿದ್ದು, ಸಾರ್ವಜನಿಕರು ಓಡಾಟಕ್ಕೆ ತೊಂದರೆಯಾಗಿರುತ್ತಿದೆ ಎಂದು ಜನರು ತಿಳಿಸಿದರು. ಈ ವೇಳೆ ಜಲಮಂಡಳಿಯ ಯಾವೊಬ್ಬ ಇಂಜಿನಿಯರ್ ಸಹ ಸ್ಥಳದಲ್ಲಿ ಹಾಜರಿರಲಿಲ್ಲ.
ಉಪಲೋಕಾಯುಕ್ತರ ದಿಢೀರ್ ಭೇಟಿ
ನಗರದ ಆನಂದ ರಾವ್ ವೃತ್ತ ಹಾಗೂ ಮಲ್ಲೇಶ್ವರಂನಲ್ಲಿರುವ ಬೆಸ್ಕಾಂ ಕಚೇರಿಗಳಿಗೆ ಮತ್ತು ಕೆಸ್ರೆಂಟ್ ರಸ್ತೆ ಮತ್ತು ಮಲ್ಲೇಶ್ವರದ ಜಲಮಂಡಳಿ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಭೇಟ ನೀಡಿ ಪರಿಶೀಲಿಸಿದ್ದಾರೆ. ಹಾಗೆಯೇ ಎಂಜಿ ರಸ್ತೆಯ ಬೆಸ್ಕಾಂ ಕಚೇರಿ, ವಿವೇಕಾನಂದ ರಸ್ತೆ ಮತ್ತು ಇಂದಿರಾ ನಗರದಲ್ಲಿನ ಜಲ ಮಂಡಳಿ ಕಚೇರಿಗಳಲ್ಲಿ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಪಾಸಣೆ ನಡೆಸಿದ್ದಾರೆ.