ಪೊಲೀಸರ ಹೆಸರಲ್ಲಿ ಬಂದು ಆಭರಣ ತಯಾರಕರ ಲೂಟಿ

| Published : Mar 07 2024, 01:45 AM IST

ಸಾರಾಂಶ

ಇಂಡಿ: ಚಿನ್ನದ ಆಭರಣ ತಯಾರಕರನ್ನ ಪೊಲೀಸರ ಹೆಸರಲ್ಲಿ ವಿಚಾರಣೆಗೆಂದು ಕರೆದೊಯ್ದು ಅವರ ಬಳಿಯಿದ್ದ ಲಕ್ಷಾಂತರ ರೂ. ಹಣ ಹಾಗೂ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ರಾ.ಹೆದ್ದಾರಿಯಲ್ಲಿ ಬಿಟ್ಟು ಹೋಗಿರುವ ಬೆಚ್ಚಿ ಬೀಳಿಸುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಇಂಡಿ

ಚಿನ್ನದ ಆಭರಣ ತಯಾರಕರನ್ನ ಪೊಲೀಸರ ಹೆಸರಲ್ಲಿ ವಿಚಾರಣೆಗೆಂದು ಕರೆದೊಯ್ದು ಅವರ ಬಳಿಯಿದ್ದ ಲಕ್ಷಾಂತರ ರೂ. ಹಣ ಹಾಗೂ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ರಾ.ಹೆದ್ದಾರಿಯಲ್ಲಿ ಬಿಟ್ಟು ಹೋಗಿರುವ ಬೆಚ್ಚಿ ಬೀಳಿಸುವ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.

ವಿಚಾರಣೆ ಹೆಸರಲ್ಲಿ ಕರೆದೊಯ್ದು ನಡೆಸಿರುವ ಈ ಕೃತ್ಯವನ್ನು ಖಂಡಿಸಿ ಇಂಡಿ ತಾಲೂಕು ಚಿನ್ನ, ಬೆಳ್ಳಿ ಆಭರಣಗಳ ತಯಾರಕರ ಹಾಗೂ ಮಾರಾಟಗಾರರ ಸಂಘ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಬಳಿಕ, ಪ್ರತಿಭಟನೆ ಪಟ್ಟಣದ ಫಣೇಂದ್ರನಾಥ ದೇವಸ್ಥಾನದಿಂದ ಹೊರಟು ಮಹಾವೀರ, ಅಂಬೇಡ್ಕರ, ಬಸವೇಶ್ವರ ವೃತ್ತದ ಮೂಲಕ ನಡೆದು ಎಸಿ ಹಾಗೂ ತಹಸೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನಂತರ ಪ್ರತಿಭಟನಾಕಾರರು ಡಿವೈಎಸ್ಪಿ ಹಾಗೂ ಇಂಡಿ ಶಹರ ಸಿಪಿಐ ಕಚೇರಿಗೆ ತೆರಳಿ ಆಭರಣ ಮತ್ತು ಹಣ ವಾಪಸ್ ಕೊಡಿಸಬೇಕು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಘಟನೆ ಹಿನ್ನಲೆ ಏನು..?:

ಕಳೆದ ಫೆ.24ರ ಸಂಜೆ ಭೀಮರಾಯ ಮೋರೆ ಹಾಗೂ ಪ್ರದೀಪಕುಮಾರ ಅಂಗಡಿಯಲ್ಲಿದ್ದಾಗ ತಾವು ಬಸವ ಕಲ್ಯಾಣ ಠಾಣೆಯ ಪೊಲೀಸರು ನಿಮ್ಮ ಮೇಲೆ ಕೇಸ್ ದಾಖಲಾಗಿವೆ. ವಿಚಾರಣೆಗೆ ಬರಬೇಕು ಎಂದು ಐದು ಜನರ ತಂಡ ಇಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ನಂತರ, ಬಸವ ಕಲ್ಯಾಣ ಪೊಲೀಸರು ಎಂದು ಹೇಳಿದ್ದ ದುರುಳರು, ಭೀಮರಾಯ ಮೋರೆ ಹಾಗೂ ಪ್ರದೀಪಕುಮಾರ ಅವರನ್ನು ಬಸವ ಕಲ್ಯಾಣ ಠಾಣೆಗೆ ಹಾಗೂ ಕೋರ್ಟ್‌ಗೂ ಕರೆದೊಯ್ಯದೆ ಅಲ್ಲಿಯ ಖಾಸಗಿ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾರೆ. ಮಾ.26ರ ರಾತ್ರಿ ಮತ್ತೆ ಇಂಡಿಗೆ ತಂದು ಸಿನಿಮೀಯ ರೀತಿಯಲ್ಲಿ ಅವರ ಬಳಿ ಇದ್ದ ಹಣ, ಬಂಗಾರದ ಆಭರಣಗಳನ್ನು ವಸೂಲಿ ಮಾಡಿ ರಾಷ್ಟ್ರೀಯ ಹೆದ್ದಾರಿ ಟಾಕಳಿ ಬಳಿ ಬಿಟ್ಟು ಹೋಗಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡದೆ, ಸಮವಸ್ತ್ರವಿಲ್ಲದೆ, ಖಾಸಗಿ ವಾಹನದಲ್ಲಿ ಬಂದು ಕಿರುಕುಳ ನೀಡಿದ್ದು, ಅವರಿಂದ ಒಬ್ಬರಿಂದ 2 ತೊಲಿ ಚಿನ್ನದ ಆಭರಣ, ₹41 ಸಾವಿರ, ಮತ್ತೊಬ್ಬನಿಂದ ₹ 2 ಲಕ್ಷ ಹಣ ಕಿತ್ತುಕೊಂಡು ಹಲ್ಲೆ ನಡೆಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

ಕ್ರಮಕ್ಕೆ ಒತ್ತಾಯ:

ಇಂಡಿಗೆ ಮರಳಿ ಬಂದ ತಕ್ಷಣ ಇಬ್ಬರು ಆಭರಣ ತಯಾರಕರು ತಮ್ಮ ಸಂಘದ ಗಮನಕ್ಕೆ ತಂದಿದ್ದು, ಕೃತ್ಯ ಎಸಗಿರುವವರ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹವನ್ನ ಮಾಡಿದ್ದಾರೆ. ಈ ಕೂಡಲೇ ಸಂಘದ ಸದಸ್ಯರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಎಲ್ಲ ಸರಾಫ್ ಅಂಗಡಿಗಳನ್ನು ಬಂದ್‌ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ನಂತರ ತಹಶೀಲ್ದಾರ ಕಚೇರಿ ಶಿರಸ್ತೆದಾರ ಎಸ್‌.ಆರ್‌.ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.ಎಸ್‌.ಎಂ.ಬಿರಾದಾರ, ರಮೇಶ ಪೊದ್ದಾರ, ನಾಮದೇವ ಡಾಂಗೆ, ವಿ.ಡಿ.ಮಹೇಂದ್ರಕರ, ಎಸ್‌.ಜಿ.ಕೊಪ್ಪಾ, ಭೀಮು ಮೊರೆ, ಪ್ರದೀಪ ಹಳ್ಳಿ, ಶ್ರೀಶೈಲ ಅರ್ಜಣಗಿ, ಧರೆಪ್ಪ ಚಾಂದಕವಟೆ, ರಾಜು ಗೌಳಿ, ಕುಮಾರ ಪತ್ತಾರ, ಸಚೀನ ಧನಶೆಟ್ಟಿ, ಸಂದೀಪ ಧನಶೆಟ್ಟಿ, ಪ್ರೇಮಸಿಂಗ ಚವ್ಹಾಣ, ಗೋಪಾಲ ಪತ್ತಾರ, ಗುರು ಬಡಿಗೇರ, ಸಂಜೀವ ಪತ್ತಾರ, ಮಹಾದೇವ ಪತ್ತಾರ, ಕುಮಾರ ಪೊದ್ದಾರ, ಸಾಗರ ಪತ್ತಾರ, ಮುಸ್ತಾಕ ನಾಯ್ಕೋಡಿ, ರಾಘವೇಂದ್ರ ಲಾಳಸಂಗಿ, ರಾಘವೇಂದ್ರ ಹಂಚಾಟೆ, ಸುರೇಶ ಪತ್ತಾರ, ಧರೆಪ್ಪ ಡಂಗಿ, ಪ್ರೇಮಸಿಂಗ ರಾಠೋಡ, ಗೋವಿಂದ ಚವ್ಹಾಣ, ಗಣಪತಿ ಪತ್ತಾರ, ಮೌನೇಶ ಪತ್ತಾರ, ದಿನೇಶ ಪತ್ತಾರ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.