ಜಿಲ್ಲಾಡಳಿತದಿಂದ ಸಂತಕವಿ ಸರ್ವಜ್ಞ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

| Published : Feb 21 2024, 02:10 AM IST

ಜಿಲ್ಲಾಡಳಿತದಿಂದ ಸಂತಕವಿ ಸರ್ವಜ್ಞ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಮಡಿಕೇರಿ ಗಾಂಧಿ ಭವನದಲ್ಲಿ ಮಂಗಳವಾರ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ನಗರದ ಗಾಂಧಿ ಭವನದಲ್ಲಿ ಮಂಗಳವಾರ ಆಚರಿಸಲಾಯಿತು.

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಸಂತಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಸಂತ ಕವಿ ಶ್ರೇಷ್ಠ ದಾರ್ಶನಿಕ ಕವಿ ಸರ್ವಜ್ಞ ಅವರು ಕನ್ನಡದಲ್ಲಿ ತ್ರಿಪದಿ ಸಾಲುಗಳ ಪದ್ಯ ಬರೆಯುವ ಮೂಲಕ ಮನೆ ಮಾತಾಗಿದ್ದಾರೆ ಎಂದರು.

ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆ ಬಳಿಯ ಶಿವನೇರಿ ಗ್ರಾಮದಲ್ಲಿ ಜನಿಸಿ ಭಾರತದ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ್ದಾರೆ ಎಂದು ತಿಳಿಸಿದರು.

ಕವಿ ಸರ್ವಜ್ಞ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಎಲ್ಲಾ ಮಹನೀಯರ ಜೀವನ ಸಂದೇಶಗಳನ್ನು ತಿಳಿದುಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ನರ್ವಾಡೆ ಹೇಳಿದರು.

ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ವೆಂಕಟನಾಯಕ್ ಮಾತನಾಡಿ, ಕವಿ ಸರ್ವಜ್ಞ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅದ್ಭುತ ತ್ರಿಪದಿಗಳನ್ನು ರಚಿಸಿದ್ದಾರೆ. ಕವಿ ಸರ್ವಜ್ಞ ಅವರ ಪದ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ಕವಿ ಸರ್ವಜ್ಞ ಅವರು ಕನ್ನಡ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ತ್ರಿಪದಿ ಸಾಲುಗಳ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕತೆ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.

ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಪ್ರಭಾವ ಬೀರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

17ನೇ ಶತಮಾನದಲ್ಲಿ ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಬಾರ ಮಾಡುತ್ತಿದ್ದರು. ಅವರ ತಾಯಿ ಜೀಜಾ ಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದರು. ಒಬ್ಬ ರಾಜನಿಗೆ ಬೇಕಾದ ಎಲ್ಲಾ ಯುದ್ಧ ಕಲೆಗಳನ್ನು ಜೀಜಾಮಾತೆಯು ಕಲಿಸುತ್ತಿದ್ದರು ಎಂದು ವೆಂಕಟ್ ನಾಯಕ್ ತಿಳಿಸಿದರು.

ಕುಲಾಲ/ಕುಂಬಾರ ಮಡಿಕೆ ತಯಾರಿಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಪಿ.ದಿನೇಶ್ ಮಾತನಾಡಿ, ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಅವರ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಕವಿ ಸರ್ವಜ್ಞರು ಜನ ಸಾಮಾನ್ಯರಿಗೆ ಒಪ್ಪಿಗೆ ಆಗುವ ರೀತಿಯಲ್ಲಿ ತ್ರಿಪದಿಗಳನ್ನು ಬರೆದು ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.

‘ಕವಿ ಸರ್ವಜ್ಞ ಅವರ ಜೀವಿತಾವದಿಯಲ್ಲಿ ಅಸ್ಪೃಶ್ಯತೆ, ಜಾತಿಯತೆ ವಿರುದ್ದ ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಮೂರು ಸಾಲುಗಳ ತ್ರಿಪದಿ ಬರೆಯುವ ಮೂಲಕ ಶಾಂತಿ ದೂತರಾಗಿ ಕೆಲಸ ಮಾಡಿದ್ದಾರೆ. ಬಸವಣ್ಣ ಅವರು ನೀಡಿದ ವಚನಗಳು, ಕವಿ ಸರ್ವಜ್ಞ ಅವರು ನೀಡಿದ ತ್ರಿಪದಿ ಸಾಲುಗಳು ಕನ್ನಡ ನಾಡಿನಲ್ಲಿ ತಮ್ಮದೇ ಆದ ಹೆಸರು ಹೊಂದಿವೆ ಎಂದು ಹೇಳಿದರು.’

ಮರಾಠ ಸಮಾಜದ ಜಿಲ್ಲಾಧ್ಯಕ್ಷ ಎಸ್.ಆರ್.ಅರುಣ್ ರಾವ್ ಮಾತನಾಡಿ, ಕವಿ ಸರ್ವಜ್ಞ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.

ಛತ್ರಪತಿ ಶಿವಾಜಿ ಮಹಾರಾಜರು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ರಕ್ಷಣೆಗೆ ಒತ್ತು ನೀಡಿದ್ದರು. ಶಿವಾಜಿ ಮಹಾರಾಜರು ಹಿಂದೂ ಸಾಮ್ರಜ್ಯದ ದೊರೆಯಾಗಿದ್ದಾರೆ ಎಂದು ಹೇಳಿದರು.

ಕುಂಬಾರ ಕುಲಾಲ ಸಂಘದ ಮಾಜಿ ಅಧ್ಯಕ್ಷ ನಾಣಯ್ಯ ಪ್ರಮುಖರಾದ ಕುಶಾಲಪ್ಪ, ಚಂದ್ರಶೇಖರ್, ದಾಮೋದರ ಇತರರು ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ಬಿ.ಸಿ.ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.