ಮಾಹೆ ಮಣಿಪಾಲ: ಉದ್ಯಮಶೀಲತಾ ಶೃಂಗಸಭೆ

| Published : Feb 13 2024, 12:45 AM IST

ಸಾರಾಂಶ

ಫೆ.10ರಿಂದ 13ರ ವರೆಗೆ ಹಲವಾರು ಕಾರ್ಯಾಗಾರಗಳು ಮತ್ತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಶೃಂಗಸಭೆಯನ್ನು ಫೆ.14ರಂದು ಮಾಹೆಯ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದು, ಬೋಟ್ ಸಂಸ್ಥೆಯ ಸಹ-ಸಂಸ್ಥಾಪಕ ಅಮನ್ ಗುಪ್ತಾ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ಮಣಿಪಾಲ ಉದ್ಯಮಶೀಲತಾ ಶೃಂಗಸಭೆಯ 7ನೇ ಆವೃತ್ತಿಗೆ ಶನಿವಾರ ಕುಲಸಚಿವ ಡಾ. ಪಿ.ಗಿರಿಧರ್ ಕಿಣಿ ಚಾಲನೆ ನೀಡಿದರು.ನಂತರ ಅವರು ಉದ್ಯಮಶೀಲತೆಯ ಉತ್ತೇಜನಕ್ಕಾಗಿ ಮಾಹೆಯು ಒದಗಿಸುವ ಬೆಂಬಲ ಮತ್ತು ಸೌಲಭ್ಯಗಳನ್ನು ವಿಸ್ತೃತವಾಗಿ ತಿಳಿಸಿದರು. ಮಣಿಪಾಲದ ಉದಾಹರಣೆ ಮತ್ತು ಅದರ ಸಂಸ್ಥಾಪಕ ಡಾ. ಟಿಎಂಎ ಪೈ ಅವರ ದೃಷ್ಟಿಕೋನವನ್ನು ಉಲ್ಲೇಖಿಸುವ ಮೂಲಕ ಉದ್ಯಮಶೀಲತೆಯ ಮಹತ್ವವನ್ನು ಒತ್ತಿ ಹೇಳಿದರು.ಎಂಐಟಿ ಮಣಿಪಾಲದ ನಿರ್ದೇಶಕ ಕಮಾಂಡರ್ (ಡಾ.) ಅನಿಲ್ ರಾಣಾ, ಮಾಹೆಯ ಯೋಜನೆ ಮತ್ತು ಮೇಲ್ವಿಚಾರಣೆಯ ನಿರ್ದೇಶಕ ಡಾ. ರವಿರಾಜ ಎನ್.ಎಸ್., ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್., ಮಣಿಪಾಲ್ ಡಾಟ್ ನೆಟ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಪ್ರಶಾಂತ್ ಭಟ್, ಶೃಂಗಸಭೆಯ ಸಂಚಾಲಕ ಹಾಗೂ ಎಂಯುಟಿಬಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂತೋಷ ರಾವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಈ ಶೃಂಗಸಭೆಯನ್ನು ಮಣಿಪಾಲ್ ಇನ್‌ಕ್ಯುಬೇಟರ್‌ಗಳು, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಮಾಹೆಯ ವಿವಿಧ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಪೋಷಕ ಘಟಕಗಳು ಜಂಟಿಯಾಗಿ ಆಯೋಜಿಸಿದ್ದು, ಎಂಐಟಿ ವಾಣಿಜ್ಯೋದ್ಯಮ ಸೆಲ್ (ಇ-ಸೆಲ್) ಕಾರ್ಯಗತಗೊಳಿಸಿದೆ.ಫೆ.10ರಿಂದ 13ರ ವರೆಗೆ ಹಲವಾರು ಕಾರ್ಯಾಗಾರಗಳು ಮತ್ತು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಶೃಂಗಸಭೆಯನ್ನು ಫೆ.14ರಂದು ಮಾಹೆಯ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಲಿದ್ದು, ಬೋಟ್ ಸಂಸ್ಥೆಯ ಸಹ-ಸಂಸ್ಥಾಪಕ ಅಮನ್ ಗುಪ್ತಾ ದಿಕ್ಸೂಚಿ ಭಾಷಣವನ್ನು ಮಾಡಲಿದ್ದಾರೆ.ಫೆ.15ರಂದು ಎಂಬಿಎ ಚಾಯ್ ವಾಲಾ ಸಂಸ್ಥಾಪಕ ಪ್ರಫುಲ್ ಬಿಲ್ಲೋರ್ ಅವರೊಂದಿಗೆ ‘ಚಾಯ್ ಪೆ ಚರ್ಚಾ’ ನಡೆಯಲಿದೆ. 16ರಂದು ಆವಿಷ್ಕಾರ ಮೇಳದೊಂದಿಗೆ ಶೃಂಗಸಭೆ ಸಮಾರೋಪಗೊಳ್ಳಲಿದೆ. ಈ ಶೃಂಗಸಭೆಯಲ್ಲಿ ಸಂಶೋಧಕರ ಮತ್ತು ಸ್ಟಾರ್ಟಪ್‌ಗಳ 100ಕ್ಕೂ ಹೆಚ್ಚು ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು.

ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯ ಮೂಲಕ ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಅನುಗುಣವಾಗಿ, ಮಾಹೆಯು ದಶಕಗಳಿಂದ ಆವಿಷ್ಕಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ. ವಿದ್ಯಾರ್ಥಿಗಳು, ಅಧ್ಯಾಪಕರು, ಇತರರಲ್ಲಿ ಜಾಗೃತಿ ಮೂಡಿಸಲು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಳಗೊಳ್ಳಲು, ಮಾಹೆಯು 2016 ರಿಂದ ಮಣಿಪಾಲ ಉದ್ಯಮಶೀಲತಾ ಶೃಂಗಸಭೆಯನ್ನು ಸಂಘಟಿಸಲು ಪ್ರಾರಂಭಿಸಿದೆ.ಶೃಂಗಸಭೆಯ ಹಿಂದಿನ ಆವೃತ್ತಿಗಳಲ್ಲಿ 50ಕ್ಕೂ ಹೆಚ್ಚು ಉದ್ಯಮಿಗಳು ಮತ್ತು ಇತರ ಉದ್ಯಮ ತಜ್ಞರು ಭಾಗವಹಿಸಿದ್ದಾರೆ. ಮಾಹೆಯು ಕಳೆದ ದಶಕದಲ್ಲಿ 150ಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಬೆಂಬಲಿಸಿದೆ. ಮಾಹೆಯು ಎರಡು ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್‌ಗಳಿಗೆ ನೆಲೆಯಾಗಿದ್ದು, ಪ್ರಸ್ತುತ 50ಕ್ಕೂ ಹೆಚ್ಚು ಸ್ಟಾರ್ಟಪ್ ಗಳನ್ನು ಹೊಂದಿದೆ.