ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ

| Published : Jun 26 2024, 12:34 AM IST

ಸಾರಾಂಶ

ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಮೆದಳು ಜ್ವರದಂತ ರೋಗಗಳು ಮಳೆಗಾಲದ ಸಮಯದಲ್ಲಿ ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ. ಎಲ್ಲ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅವಶ್ಯವಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ, ವೈದ್ಯಾಧಿಕಾರಿ ಡಾ.ಜಯಶ್ರೀ ದೇವಗಿರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಮೆದಳು ಜ್ವರದಂತ ರೋಗಗಳು ಮಳೆಗಾಲದ ಸಮಯದಲ್ಲಿ ಹೆಚ್ಚು ಹರಡುವ ಸಾಧ್ಯತೆ ಇರುತ್ತದೆ. ಎಲ್ಲ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅವಶ್ಯವಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ, ವೈದ್ಯಾಧಿಕಾರಿ ಡಾ.ಜಯಶ್ರೀ ದೇವಗಿರಿ ತಿಳಿಸಿದರು.

ಜಿಲ್ಲಾ ಆಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಗ್ರಾಮೀಣ ವಲಯ ಹಾಗೂ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ತಾಲೂಕಿನ ಶಿವಣಗಿಯಲ್ಲಿ ಹಮ್ಮಿಕೊಂಡ ಶಾಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯ ಸುತ್ತಮುತ್ತ ತಗ್ಗು ಮತ್ತು ಗುಂಡಿಗಳಿದ್ದರೆ ಮಣ್ಣಿನಿಂದ ಮುಚ್ಚಬೇಕು. ಮನೆಯ ಸುತ್ತಮುತ್ತ ಹೂವಿನ ಕುಂಡ, ಟೈರ್, ಗ್ಲಾಸ್ ಅಥವಾ ಪ್ಲಾಸ್ಟಿಕ್ ಬಾಟಲ್, ತೆಂಗಿನ ಚಿಪ್ಪು ಮತ್ತು ಇತರೆ ವಸ್ತುಗಳಿದ್ದರೆ ಅದರಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಅವುಗಳನ್ನು ವಿಲೇವಾರಿ ಮಾಡಬೇಕು. ಸೊಳ್ಳೆಗಳ ಕಚ್ಚುವಿಕೆಯಿಂದ ಪಾರಾಗಲು ಪ್ರತಿಯೊಬ್ಬರು ತಮ್ಮ ಮನೆಯ, ಕಿಟಕಿ, ಬಾಗಿಲುಗಳಿಗೆ ತಂತಿ ಜಾಲರಿ ಅಳವಡಿಸುವುದು, ಸೊಳ್ಳೆ ಲಿಕ್ವಿಡ್, ಸೊಳ್ಳೆಬತ್ತಿ, ಸೊಳ್ಳೆ ಕ್ರೀಮ್‌ಗಳನ್ನು ಉಪಯೋಗಿಸಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿಕೊಂಡು ಸೊಳ್ಳೆಗಳು ಕಚ್ಚಿದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಮತ್ತು ಚಿಕ್ಕ ಮಕ್ಕಳು, ಸೊಳ್ಳೆ ಕಡಿತದಿಂದ ಜಾಗೃತರಾಗಿರಬೇಕು. ಮನೆಗಳಲ್ಲಿ ನೀರು ಸಂಗ್ರಹ ವಸ್ತುಗಳನ್ನು ಕನಿಷ್ಠ ನಾಲ್ಕರಿಂದ ಐದು ದಿನಕ್ಕೊಮ್ಮೆ ತೊಳೆದು, ಮತ್ತೆ ನೀರನ್ನು ಸಂಗ್ರಹಿಸಿ, ಮೇಲೆ ಭದ್ರವಾಗಿ ಮುಚ್ಚಬೇಕು, ಇದರಿಂದ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬಹುದು ಎಂದರು.

ಸ್ವಚ್ಛತೆ ಕಾಪಾಡಿ:

ಮುಖ್ಯ ತರಬೇತಿದಾರ ಮತ್ತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಜೋಶಿ ಮಾತನಾಡಿ, ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಘೀ, ಮೆದುಳು ಜ್ವರ, ಬರಲು ಸೊಳ್ಳೆಗಳೇ ಕಾರಣ. ಇಡೀಸ್ ಎಂಬ ಸೊಳ್ಳೆ ಕಡಿತದಿಂದ ಡೆಂಘೀ ಜ್ವರ ಬರುತ್ತದೆ. ಇಡೀಸ್ ಸೊಳ್ಳೆ ಸ್ವಚ್ಛ ನೀರಿನಲ್ಲಿ ತನ್ನ ಮೊಟ್ಟೆಯನ್ನು ಇಟ್ಟು, ತನ್ನ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತದೆ. ಮೊಟ್ಟೆ ಮುಂದೆ ಲಾರ್ವಾ ಆಗಿ, ಪೊರೆಹುಳು ಆಗಿ ಮುಂದೆ ವಯಸ್ಕ ಸೊಳ್ಳೆ ಆಗಿ ಪರಿವರ್ತನೆಗೊಂಡು ಮನುಷ್ಯರನ್ನು ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಈ ಸೊಳ್ಳೆ ಕಚ್ಚುವುದರಿಂದ ಜ್ವರ,ಮೈ ಕೈ ನೋವು, ಕಣ್ಣಿನ ಹಿಂದೆ ಬೇನೆ, ದೇಹದ ಮೇಲೆ ಗುಳ್ಳೆಗಳು, ವಸಡಿನಲ್ಲಿ ರಕ್ತಸ್ರಾವ, ಲಕ್ಷಣ ಕಂಡು ಬರುತ್ತದೆ. ಡೆಂಘೀ ಜ್ವರಕ್ಕೆ ನಿರ್ದಿಷ್ಟ ಔಷಧಿಗಳಿಲ್ಲ. ಆದಕಾರಣ ಪ್ರತಿಯೊಬ್ಬರು ಸೊಳ್ಳೆಗಳು ಉತ್ಪತ್ತಿ ಆಗದ ಹಾಗೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ರಾಮನಗೌಡ ಪಾಟೀಲ್ ಮಾತನಾಡಿ, ಮಲೇರಿಯಾ, ಮೆದುಳು ಜ್ವರ ಮತ್ತು ಚಿಕೂನ್ ಗುನ್ಯಾ ರೋಗಗಳ ಹರಡುವಿಕೆ, ಲಕ್ಷಣಗಳು, ರೋಗದ ತಪಾಸಣೆ ಮತ್ತು ಚಿಕಿತ್ಸೆ, ಮುಂಜಾಗ್ರತ ಕ್ರಮಗಳ ಬಗ್ಗೆ ಸುದೀರ್ಘವಾಗಿ ತಿಳಿಸಿದರು. ಈ ತರಬೇತಿಯಲ್ಲಿ ಆರೋಗ್ಯ ಇಲಾಖೆಯ ಶಂಕ್ರಯ್ಯ ಮೇಲಿನಮಠ, ಐ.ಎಮ್‌.ಕಾಳೆ, ಬಶೀರ್ ಅಹ್ಮದ್ ಬೆನಕನಹಳ್ಳಿ, ವಿಶ್ವನಾಥ ಹಿರೇಮಠ, ತಬಸುಮ ಕೋಟ್ಯಾಳ, ಎಸ್.ಎಸ್.ಮೋರಟಗಿ, ಲಕ್ಷ್ಮಿ ಅರಿಸಿಬಾಗಿಲ, ಅಶ್ರಫ್ ಅಲಿ, ಅಶ್ವಿನಿ ಮೊರೆ ಮತ್ತು ಹಜರುದ್ದಿನ್ ಮಿರ್ದೆ ಸೇರಿದಂತೆ ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ, ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಪಾಲ್ಗೊಂಡಿದ್ದರು.

---

ಬಾಕ್ಸ್‌

ಮುನ್ನೆಚ್ಚರಿಕೆ ಸೂಕ್ತ

ಆರೋಗ್ಯ ಇಲಾಖೆಯಿಂದ ನಮ್ಮ ಎಲ್ಲಾ ಶಿಕ್ಷಕರಿಗೆ ಸಾಂಕ್ರಾಮಿಕ ರೋಗಗಳ ತರಬೇತಿ ಹಮ್ಮಿಕೊಂಡಿರುತ್ತಾರೆ. ತರಬೇತಿಯನ್ನು ಪಡೆದುಕೊಂಡು, ನಿಮ್ಮ ನಿಮ್ಮ ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ, ಲಕ್ಷಣಗಳು, ತಡೆಗಟ್ಟುವಿಕೆ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಬೇಕು. ಎಲ್ಲರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು. ಎಲ್ಲರು ಆರೋಗ್ಯವಂತರಾಗಿರಲು ರೋಗಗಳ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳುವುದು ಸೂಕ್ತ ಎಂದು ಶಿಕ್ಷಣ ಇಲಾಖೆಯ ಶಿವಣಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಎಂ.ಎಸ್.ಗುಬಚಿ ತಿಳಿಸಿದರು.