ಸಾರಾಂಶ
ಕ್ಷೇತ್ರದ ಹಿಂದಿನ ಶಾಸಕರುಗಳು ಮಾಲವಿ ಜಲಾಶಯವನ್ನು ಓಟ್‌ಬ್ಯಾಂಕ್‌ಗೆ ಬಳಕೆ ಮಾಡುತ್ತಿದ್ದರು.
ಹಗರಿಬೊಮ್ಮನಹಳ್ಳಿ: ಮಾಜಿ ಶಾಸಕ ಎಸ್.ಭೀಮನಾಯ್ಕರ ಶ್ರಮದಿಂದ ತಾಲೂಕಿನ ಮಾಲವಿ ಜಲಾಶಯಕ್ಕೆ ಶಾಶ್ವತವಾಗಿ ನೀರು ಹರಿದು ಬರುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಶ್ಯಾನುಬೋಗರ ಗುರುಸಿದ್ದಪ್ಪ ತಿಳಿಸಿದರು.
ಮಾಲವಿ ಜಲಾಶಯಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಮಾಜಿ ಶಾಸಕ ದಿ.ಚನ್ನಬಸವನಗೌಡರ ದೂರದೃಷ್ಠಿ ಫಲವಾಗಿ ಮಾಲವಿ ಗ್ರಾಮದ ಬಳಿ ಜಲಾಶಯ ನಿರ್ಮಾಣವಾಗಿದೆ. ಕ್ಷೇತ್ರದ ಹಿಂದಿನ ಶಾಸಕರುಗಳು ಮಾಲವಿ ಜಲಾಶಯವನ್ನು ಓಟ್‌ಬ್ಯಾಂಕ್‌ಗೆ ಬಳಕೆ ಮಾಡುತ್ತಿದ್ದರು. ಆದರೆ, ಭೀಮನಾಯ್ಕ ಜಲಾಶಯಕ್ಕೆ ನೀರು ತರುವ ಭರವಸೆ ನೀಡದೆ, ಸರಕಾರದಿಂದ ೧೬೫ಕೋಟಿರೂ ಅನುದಾನ ಒದಗಿಸಿ ರೈತರ ಬಹುದಿನದ ಕನಸನ್ನು ನನಸಾಗಿಸಿದ್ದಾರೆ. ಅಭಿವೃಧ್ದಿ ಯಾವ ಪಕ್ಷದವರು ಮಾಡಿದ್ದರು ಅಭಿವೃಧ್ದಿಯೇ. ಸರಕಾರ ಡ್ಯಾಂನ ಗೇಟ್ ದುರಸ್ಥಿಗೆ ೪.೨ ಕೋಟಿ ರೂ.ಅನುದಾನವನ್ನೂ ಕೂಡ ಪ್ರಸಕ್ತವಾಗಿ ಒದಗಿಸಿದೆ. ೯ನೇ ಗೇಟ್ ದುರಸ್ಥಿಯಿಂದಾಗಿ ಡ್ಯಾಂನ ನೀರು ಪೋಲಾಗುತ್ತಿತ್ತು. ಇತ್ತೀಚೆಗಷ್ಟೇ ಶಾಸಕ ಕೆ.ನೇಮರಾಜ ನಾಯ್ಕ ಭೇಟಿ ನೀಡಿ, ನೀರು ಪೋಲಾಗುವುದನ್ನು ತಪ್ಪಿಸಿದ್ದಾರೆ. ಆದರೆ, ಜಲಾಶಯದ ಗೇಟ್‌ಗಳಿಗೆ ಒದಗಿದ ಅನುದಾನದಲ್ಲಿ ಗೇಟ್‌ಗಳನ್ನು ಶಾಶ್ವತವಾಗಿ ದುರಸ್ಥಿಪಡಿಸುವ ತುರ್ತುಕ್ರಮ ಅಗತ್ಯವಿದೆ. ಜಲಾಶಯಕ್ಕೆ ೧೦.೭ಅಡಿ ನೀರು ಹರಿದುಬಂದಿದ್ದು ಈ ಭಾಗದ ಮಾಲವಿ, ಉಲುವತ್ತಿ, ಹರೇಗೊಂಡನಹಳ್ಳಿ ಸೇರಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ರೋಹಿತ್ ಮಾತನಾಡಿ, ಮಾಲವಿ ಜಲಾಶಯದ ಕಾಲುವೆಗಳನ್ನು ದುರಸ್ಥಿಗೊಳಿಸಬೇಕು ಜೊತೆಗೆ ಕಾಲುವೆಗಳ ಆಧುನೀಕರಣಕ್ಕೆ ಸರಕಾರ ತಕ್ಷಣವೇ ಅನುದಾನ ಒದಗಿಸಬೇಕು. ಶಾಸಕ ಕೆ.ನೇಮರಾಜನಾಯ್ಕ ತಾತ್ಕಾಲಿಕ ನೀರು ಪೋಲಾಗುತ್ತಿರುವುದನ್ನು ತಪ್ಪಿಸಿ ರೈತರಿಗೆ ಸಹಕಾರಿಯಾಗಿದ್ದಾರೆ ಎಂದರು.ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯಕ್ಕೆ ಜಿ.ಪಂ.ಮಾಜಿ ಸದಸ್ಯ ಶ್ಯಾನುಬೋಗರ ಗುರುಸಿದ್ದಪ್ಪ ಭೇಟಿ ನೀಡಿದ್ದರು.