ಸಾರಾಂಶ
ಚನ್ನಪಟ್ಟಣ: ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮವನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದರು.
ತಾಲೂಕಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಸಮಸ್ಯೆ ಅಥವಾ ಅಹವಾಲುಗಳಿದ್ದಲ್ಲಿ ಪ್ರತಿ ತಿಂಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೇರವಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಅವರು ಇತ್ಯರ್ಥ ಪಡಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರಿಸುತ್ತಾರೆ. ವಿಳಂಬವಾದರೆ ಹಿಂಬರಹ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.ಜನತಾ ದರ್ಶನ ಕಾರ್ಯಕ್ರಮ ಜನರಿಗೆ ಸ್ಪಂದಿಸುವ ಕಾರ್ಯಕ್ರಮವಾಗಬೇಕು ಜನರ ಸಮಸ್ಯೆಗಳನ್ನು ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ಪರಿಹರಿಸುವಂತೆ ತಿಳಿಸಿದರು. ಜನರ ಸಮಸ್ಯೆಗಳಿಗೆ ಪರಿಹಾರ ದೊರೆತಾಗಲೇ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಎಲ್ಲಾ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಲು ತಮ್ಮ ಸಮಯ ನೀಡಬೇಕು ಎಂದರು.
240 ಅರ್ಜಿ ಸ್ವೀಕೃತಿ:ಜನತಾ ದರ್ಶನ ಕಾರ್ಯಕ್ರಮದಲ್ಲಿ ಒಟ್ಟು 240 ಅರ್ಜಿಗಳು ಸ್ವೀಕೃತಿಗೊಂಡವು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 124 ಅರ್ಜಿಗಳು ಸ್ವೀಕೃತಗೊಂಡವು. ಇನ್ನು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 33, ನಗರಸಭೆಗೆ ಸಂಬಂಧಿಸಿದಂತೆ 23, ಭೂಮಾಪನ ಇಲಾಖೆಗೆ ಸಂಬಂಧಿಸಿದಂತೆ 12, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿಂತೆ 11 ಅರ್ಜಿಗಳು ಸ್ವೀಕೃತಗೊಂಡಿದ್ದು, ಇವು ಹೆಚ್ಚು ಅರ್ಜಿಗಳು ಸ್ವೀಕೃತಗೊಂಡ ಇಲಾಖೆಗಳು ಎನ್ನಿಸಿದವು.
ಕಾರ್ಯಕ್ರಮದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ರಾಮನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಬಿನೋಯ್, ತಹಶೀಲ್ದಾರ ಮಹೇಂದ್ರ, ಇಒ ಶಿವಕುಮಾರ, ಪೌರಾಯುಕ್ತ ಪುಟ್ಟಸ್ವಾಮಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್............ಕನ್ನಡಪರ ಹೋರಾಟಗಾರರ ಬಿಡುಗಡೆಗೆ ಮನವಿ
ಅನ್ಯಭಾಷೆ ನಾಮಫಲಕಗಳ ವಿರುದ್ಧ ಹೋರಾಟ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಗೆ ಕರವೇ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಕನ್ನಡಕ್ಕಾಗಿ ಧ್ವನಿ ಎತ್ತಿದ್ದ ಕನ್ನಡಪರ ಹೋರಾಟರಾರನ್ನು ಜೈಲಿಗಟ್ಟಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಕೂಡಲೇ ಹೋರಾಟಗಾರರನ್ನು ಬಿಡುಗಡೆಗೊಳಿಸುವ ಜತೆಗೆ ಅವರ ಮೇಲಿರುವ ಎಲ್ಲ ಮೊಕದ್ದಮೆ ಹಿಂಪಡೆಯಬೇಕು. ಉದ್ದಿಮೆದಾರರಿಗೆ ಪರವಾನಗಿ ಕೊಡುವ ಸಮಯದಲ್ಲೇ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ನಾವು ಸಹ ಕನ್ನಡದ ಬಗ್ಗೆ ಕಾಳಜಿ ಹೊಂದಿದವರು, ಹೋರಾಟ ಮಾಡಿಕೊಂಡು ಬಂದವರು. ಈ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಪೊಟೋ೪ಸಿಪಿಟಿ೧: ಶತಮಾನೋತ್ಸವ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.ಪೊಟೋ೪ಸಿಪಿಟಿ೨: ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿಗೆ ಕರವೇ ಪದಾಧಿಕಾರಿಗಳು ಮನವಿ ಸಲ್ಲಿಸಿದರು.