ವಸತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ಮಂಜುನಾಥ್

| Published : Mar 16 2024, 01:47 AM IST / Updated: Mar 16 2024, 03:49 PM IST

ವಸತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಶಾಸಕ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ ಕಡು ಬಡವರಲ್ಲಿ ಯಾರಿಗೆ ಮನೆ ಇಲ್ಲವೋ ಅವರನ್ನು ಗುರುತಿಸಿ,ಅವರಿಗೆ ಮನೆಗಳನ್ನು ನೀಡಬೇಕು. ಪ್ರತಿ ಕುಟುಂಬವೂ ಸ್ವಂತ ಸೂರನ್ನು ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಮನೆಗಳನ್ನು ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಹನೂರು

ವಸತಿ ಯೋಜನಾ ಫಲಾನುಭವಿಗಳು ನಿಗಧಿತ ಅವಧಿಯೊಳಗೆ ವಸತಿ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಲೋಕ್ಕನಹಳ್ಳಿ ಗ್ರಾಪಂ ಹಾಗೂ ಚಿಕ್ಕ ಮಾಲಾಪುರ ಗ್ರಾಪಂ ವತಿಯಿಂದ ಲೋಕ್ಕನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕ‌ರ್ ಹಾಗೂ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಕಡು ಬಡವರಲ್ಲಿ ಯಾರಿಗೆ ಮನೆ ಇಲ್ಲವೋ ಅವರನ್ನು ಗುರುತಿಸಿ,ಅವರಿಗೆ ಮನೆಗಳನ್ನು ನೀಡಬೇಕು. ಪ್ರತಿ ಕುಟುಂಬವೂ ಸ್ವಂತ ಸೂರನ್ನು ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳ ಮೂಲಕ ಮನೆಗಳನ್ನು ಮಂಜೂರು ಮಾಡಿದೆ ಎಂದರು.

ಆಯ್ಕೆಯಾಗಿರುವ ಫಲಾನುಭವಿಗಳು ನಿಗದಿತ ಸಮಯದೊಳಗೆ ಉತ್ತಮವಾಗಿ ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಈ ಯೋಜನೆಯಡಿ ಜಿಪಿಎಸ್ ಮೂಲಕ ಅಡಿಪಾಯ, ಗೋಡೆ, ಛಾವಣಿ ಹಾಗೂ ಮನೆ ಪೂರ್ಣಗೊಂಡ 4 ಹಂತಗಳಲ್ಲಿ ಸರ್ಕಾರದಿಂದ ಸಹಾಯ ಧನ ಸಿಗಲಿದೆ. ಇದರ ಪ್ರಯೋಜನ ಪಡೆದುಕೊಂಡು ಶೀಘ್ರ ಮನೆ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಉಮೇಶ್ ಮಾತನಾಡಿ, ವಸತಿ ಯೋಜನೆಯಡಿ ಪ.ಜಾತಿಗೆ 2 ಲಕ್ಷ ರು. ಅನುದಾನ ಜೊತೆಗೆ ನರೇಗಾ ಯೋಜನೆಯಡಿ 90 ಮಾನವ ದಿನಗಳು 28,440 ರು. ಒಟ್ಟು 2.28,440 ರು. ಸಿಗುತ್ತದೆ. 

ಸಾಮಾನ್ಯರಿಗೆ 1.20 ಲಕ್ಷ ರು. ಅವರಿಗೂ ನರೇಗಾದಡಿ 90 ಮಾನವ 28,440 ರು. ಸೇರಿ 1,48,440 ಲಕ್ಷ ರು.ಗಳು ಪಡೆಯಬಹುದು.ನರೇಗಾ ಯೋಜನೆಯಡಿ ಅನುದಾನ ಪಡೆದು ಪ್ರತಿಯೊಬ್ಬರೂ ಶೌಚ ಗೃಹ ಹೊಂದಬೇಕು ಎಂದು ತಿಳಿಸಿದರು. ಹಾಗಾಗಿ ಮನೆ ದೊರೆತಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿರುವ ವ್ಯಾಟ್ಸಾಪ್ ಮೂಲಕ ಮಾಹಿತಿಯ ಆರ್.ಡಿ.ಪಿ.ಆರ್. ಯನ್ನು ಬಿಡುಗಡೆಗೊಳಿಸಿದರು. 

ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಿದೆ. ಆ ನಿಟ್ಟಿನಲ್ಲಿ ಸರ್ಕಾರದ ವಾಟ್ಸಾಪ್‌ ಸಹಾಯವಾಣಿ 08224-200134 ಗೆ ಸಂದೇಶ ಕಳುಹಿಸಿ ಸಮಸ್ಯೆ ಇತ್ಯಾರ್ಥ ಪಡಿಸಿಕೊಳ್ಳುವಂತೆ ತಿಳಿಸಿದರು.

ನೋಡಲ್ ಅಧಿಕಾರಿ ತಾಲೂಕು ಪಂಚಾಯತಿ ಸತೀಶ್, ಎಇಇ ಹರೀಶ್, ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಪೂರ್ಣಿಮಾ, ಗ್ರಾಪಂ ಅಧ್ಯಕ್ಷರಾದ ನಾಗೇಶ್, ಚಾಮಮ್ಮ, ಉಪಾಧ್ಯಕ್ಷರಾದ ನಂದಿನಿ,ಚೆನ್ನಯ್ಯ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್, ಕಾರ್ಯದರ್ಶಿ ವೆಂಕಟೇಶ್ , ಸದಸ್ಯರು ಲೋಕ್ಕನಹಳ್ಳಿ ಹಾಗೂ ಚಿಕ್ಕ ಮಾಲಾಪುರ ಗ್ರಾಮಸ್ಥರು ಹಾಜರಿದ್ದರು.