ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೇ ೨೦ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಯಶಸ್ವಿಯಾಗಲು ಎಲ್ಲಾ ಕಾರ್ಮಿಕರು ರಸ್ತೆಗಿಳಿದು ಹೋರಾಟ ಮಾಡುವುದರ ಮೂಲಕ ಬಂಧನಕ್ಕೆ ಒಳಗಾಗುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಬಹಿರಂಗವಾಗಿ ಕರೆ ನೀಡಿದರು.ನಗರದ ಮಹಾವೀರ ವೃತ್ತದಲ್ಲಿ ಗುರುವಾರ ಕಾರ್ಮಿಕರ ದಿನದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಮಿಕರ ಶ್ರಮ ಶಕ್ತಿ ಇಲ್ಲದೇ ಯಾವುದು ಉತ್ಪಾದನೆ ಆಗುವುದಿಲ್ಲ. ಸಮಾಜದಲ್ಲಿ ನಿಜವಾದ ಉತ್ಪಾದಕರು ಇದ್ದರೇ ಅವರು ಕಾರ್ಮಿಕರೇ ಹೊರತು ಯಾವುದೇ ಕಾರಣಕ್ಕೂ ಬಂಡವಾಳಗಾರರು ಅಲ್ಲ, ಭೂ ಮಾಲೀಕರಲ್ಲ. ಇವರು ಕೇವಲ ಬಂಡವಾಳ ಹೂಡುತ್ತಾರೆ ಹೊರತು ಭೂಮಿಗೆ ಬೆಲೆ ಬರಲು, ಉತ್ಪಾದನೆ ಆಗುವುದು ಶ್ರಮಿಕರು ತಮ್ಮ ಶಕ್ತಿ ಧಾರೆ ಎರೆದಾಗ ಮಾತ್ರ ಸಾಧ್ಯ. ಆದರೆ ಇಂತಹ ಶ್ರಮಿಕರ ಇಡೀ ಸಂಪತ್ತನ್ನು ಕೆಲವೇ ಜನರು ಹಿಡಿದಿಟ್ಟುಕೊಂಡಿದ್ದಾರೆ. ಇಡೀ ದೇಶದ ಶೇಕಡ ೯೦ರಷ್ಟು ಆಸ್ತಿ ಹತ್ತು ಜನರ ಕೈಲಿ ಸಿಕ್ಕಿಕೊಂಡಿದೆ. ೭೦ ಗಂಟೆ, ೯೦ ಗಂಟೆ ದುಡಿಯುವುದರಿಂದ ಕಾರ್ಮಿಕರು ಉದ್ಧಾರ ಆಗುವುದಿಲ್ಲ. ಮಾಲೀಕರು ಉದ್ಧಾರ ಆಗುತ್ತಾರೆ. ಸರ್ಕಾರವು ಮಾಲೀಕರ ಪರವಾಗಿ ಕಾನೂನು ಮಾಡುತ್ತಿದೆ. ನಾಲ್ಕು ಕಾರ್ಮಿಕ ಸಮಿತಿಯನ್ನು ಸರ್ಕಾರ ತರುತ್ತಿದ್ದು, ಇದರಿಂದ ಸಂಘ ಕಟ್ಟುವುದನ್ನು ನಿರಾಕರಿಸಲಾಗಿದೆ. ಮುಷ್ಕರ ಮಾಡಲು ೯೦ ದಿನ ಮೊದಲೇ ತಿಳಿಸಬೇಕಾಗಿದೆ. ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ಕಾರ್ಮಿಕರು ಗಮನಹರಿಸಬೇಕಾಗಿದೆ. ಎಷ್ಟೇ ಶಕ್ತಿಯಿಂದ ದುಡಿದರೂ ಸರಿಯಾಗಿ ವೇತನ ಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸರ್ಕಾರವು ಕನಿಷ್ಠ ವೇತನ ಕಾಯಿದೆಯನ್ನು ಬದಲಾವಣೆ ಮಾಡಿದೆ. ವೇತನ ಸಮಿತಿ ತಂದು ಅದರಲ್ಲಿ ೧೭೫ ರು. ನಿಗದಿ ಮಾಡಿದೆ. ಇವತ್ತಿನ ಬೆಲೆ ಏರಿಕೆ ನೋಡಿದರೇ ಕನಿಷ್ಠ ೩೫ ಸಾವಿರ ರು. ಬೇಕಾಗಿದೆ ಎಂದು ಒತ್ತಾಯಿಸಿದರು.
ದಿನದ ೨೪ ಗಂಟೆ ದುಡಿದರೂ ೩೫ ಸಾವಿರ ರು. ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೆಟ್ರೋಲ್, ಡೀಸೆಲ್, ಶಾಲೆಯ ಶುಲ್ಕ ಹೆಚ್ಚಾಗಿರುವುದರ ಜೊತೆಗೆ ದಿನನಿತ್ಯದ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೆ ಸಂಬಳ ಮಾತ್ರ ಅತೀ ಕಡಿಮೆ ಕೊಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮೋದಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಾಪಸ್ ಮಾಡಬೇಕು. ಇಲ್ಲವಾದರೇ ಮುಂದೆ ಶ್ರಮಿಕರಿಗೆ ಉಳಿಗಾಲ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಕಿವಿಮಾತು ಹೇಳಿದರು. ಶ್ರಮಿಕರು ಮತ್ತು ಬಡವರು ಉಳಿಯಬೇಕಾದರೇ ಮೇ ೨೦ರ ಮುಷ್ಕರ ಯಶಸ್ವಿಯಾಗಬೇಕಾಗಿದೆ. ಮುಷ್ಕರದ ದಿನ ಯಾವುದೇ ಕಾರ್ಮಿಕರು ಕೆಲಸ ಮಾಡುವುದು ಬೇಡ. ಫ್ಯಾಕ್ಟರಿಗಳಲ್ಲಿ, ಕಚೇರಿಯಲ್ಲಿ ಸೇರಿದಂತೆ ಎಲ್ಲಾ ಕಡೆ ಕೆಲಸಗಳನ್ನು ಸ್ಥಗಿತಗೊಳಿಸಿ ಈ ಮುಷ್ಕರಕ್ಕೆ ಮುಂದಾಗಬೇಕು. ಸಾಮೂಹಿಕವಾಗಿ ರಸ್ತೆಗಿಳಿದು ಹೋರಾಟ ನಡೆಸಬೇಕಾಗಿದೆ. ಮೇ ೨೦ರಂದು ಸಾಮೂಹಿಕವಾಗಿ ರಸ್ತೆಗೆ ಇಳಿದು ಬಂಧನಕ್ಕೆ ಒಳಗಾಗಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಇದೇ ವೇಳೆ ಬಹಿರಂಗಪಡಿಸಿದರು.ಕಾರ್ಮಿಕರು ಗುಲಾಮರಲ್ಲ, ಅವರು ಎಲ್ಲರಂತೆ ಮನುಷ್ಯರು, ಅವರಿಗೆ ದಿನದ ೮ ಗಂಟೆ ಮಾತ್ರ ಕೆಲಸ, ೮ ಗಂಟೆ ವಿಶ್ರಾಂತಿ ಮತ್ತು ೮ ಗಂಟೆ ಮನರಂಜನೆ ಮತ್ತಿತರೆ ಚಟುವಟಿಕೆಗಳಿಗಾಗಿ ನಡೆದ ಐತಿಹಾಸಿಕ ಹೋರಾಟದ ನೆನಪಿನಲ್ಲಿ ಮೇ ೧ನ್ನು ಕಾರ್ಮಿಕರ ದಿನವನ್ನಾಗಿ ಜಗತ್ತೇ ಆಚರಿಸುತ್ತದೆ. ೧೮೮೬ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಚಳವಳಿಯಲ್ಲಿ ಪ್ರಾಣತೆತ್ತ ಹುತಾತ್ಮರ ನೆನಪಿನಲ್ಲಿ ಈ ದಿನವನ್ನ ಆಚರಿಸುತ್ತೇವೆ. ಇಂದಿನ ಕಾರ್ಮಿಕರನ್ನು ಆಳುವ ಸರ್ಕಾರಗಳು ಮತ್ತು ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಗುಲಾಮಗಿರಿಗೆ ತಳ್ಳುತ್ತಿದೆ. ಇದರ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಮೇ ದಿನಾಚರಣೆ ಬಹಳ ಮಹತ್ವವಾಗಿದೆ. ಕಾರ್ಮಿಕರ ಕೈಗೆ ವಿಮೋಚನೆಯ ಅಸ್ತ್ರವನ್ನು ಕೊಟ್ಟ ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಹೀಗೆ ಹೇಳಿದ್ದಾರೆ. "ಜಗತ್ತಿನ ಕಾರ್ಮಿಕರೇ ಒಂದಾಗಿ, ಸಂಕೋಲೆಗಳಲ್ಲದೆ ಕಳೆದುಕೊಳ್ಳಲು ಶ್ರಮಜೀವಿಗಳಿಗೆ ಬೇರೇನಿಲ್ಲ, ಗೆಲ್ಲಲೊಂದು ಜಗತ್ತೇ ಇದೆ " ಎಂದರು.
ಇದೇ ವೇಳೆ ಮೇ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಮಾದಿಗದಂಡೋರ ಹೋರಾಟ ಸಮಿತಿ ಅಧ್ಯಕ್ಷ ಟಿ.ಆರ್. ವಿಜಯ ಕುಮಾರ್, ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಷಿರ್ ಅಹಮದ್, ಸಂಚಾಲಕ ಸಯ್ಯಾದ್ ಅನ್ಸರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಸಂಚಾಲಕ ಅಯೂಬ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.