ಮಲೆತಿರಿಕೆ ಬೆಟ್ಟ ವಾಸ ಯೋಗ್ಯವಲ್ಲ

| Published : May 13 2024, 12:04 AM IST

ಸಾರಾಂಶ

ಕೊಡಗಿನಲ್ಲಿ 2018ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ಮಲೆ ತಿರಿಕೆ ಬೆಟ್ಟದಲ್ಲಿ 200 ಮೀಟರ್‌ ಆಳಕ್ಕೆ ಬಿರುಕು ಬಿಟ್ಟಿತ್ತು. ಇದು ಜನರಲ್ಲಿ ಆತಂಕ ಮನೆ ಮಾಡಿತ್ತು.

ಮಂಜುನಾಥ್ ಟಿ.ಎನ್

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಮಲೆತಿರಿಕೆ ಬೆಟ್ಟ ಜನರಿಗೆ ವಾಸಯೋಗ್ಯವಲ್ಲ, ಈ ಬೆಟ್ಟದ ಕೆಲವು ಭಾಗ ಕುಸಿಯುತ್ತದೆ ಎಂದು ಭಾರತೀಯ ಭೂ ಮತ್ತು ಗಣಿ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ವರದಿ ನೀಡಿ ಈ ಮಳೆಗಾಲಕ್ಕೆ ಆರನೇ ವರ್ಷವಿದು.

ಈ ನಾಲ್ಕು ವರ್ಷಗಳಲ್ಲಿ ಸರ್ಕಾರದ್ದೇ ಅಂಗ ಸಂಸ್ಥೆಯ ಅಧಿಕಾರಿಗಳು ನೀಡಿದ ವರದಿಯನ್ನು ಮೊದಮೊದಲು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರು. ತದನಂತರ ಅದು ಕೇವಲ ಆರಂಭ ಶೂರತ್ವದಂತೆ ಕಾಣಿಸುತ್ತಿದೆಯೇ ವಿನಾಃ ವಾಸ್ತವದಲ್ಲಿ ಇಲ್ಲಿನ ನಿವಾಸಿಗಳ ಜೀವ ಕಾಪಾಡುವ ಯಾವ ತ್ವರಿತ ಹೆಜ್ಜೆಗಳು ಸರ್ಕಾರ ಮಾಡಲಿಲ್ಲ. ಅದಕ್ಕೆ ಭೂ ಸರ್ವೇಕ್ಷಣಾ ಇಲಾಖೆಯ ವರದಿಗೆ ಈ ಮಳೆಗಾಲಕ್ಕೆ ಆರು ವರ್ಷಗಳು ತುಂಬುತ್ತಿರುವುದೇ ಸಾಕ್ಷಿ.ಜಿಲ್ಲಾಡಳಿತ ನೀಡುವ ಪ್ರಕಟಣೆಗಳಿಂದ ನಿವಾಸಿಗಳ ಜೀವನ ನಿರ್ಧಾರ: ಕಳೆದ ಐದಾರು ವರ್ಷಗಳಿಂದ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ನಿವಾಸಿಗಳ ಸ್ಥಿತಿ ವಿರಾಜಪೇಟೆ ಪುರಸಭೆ ಹಾಗೂ ಜಿಲ್ಲಾಡಳಿತ ಪ್ರಕಟಣೆಗಳಿಂದ ನಿರ್ಧಾರವಾಗುತ್ತಿದೆ. ಯೆಲ್ಲೋ ಅಲರ್ಟ್‌ ಬಂದರೆ ಎಚ್ಚರದಿಂದ ಇರುವುದು, ರೆಡ್‌ ಅಲರ್ಟ್‌ ಬಂದರೆ ಗಂಟುಮೂಟೆ ಕಟ್ಟಿಕೊಂಡು ಸಂತ್ರಸ್ತ ಶಿಬಿರಕ್ಕೆ ಹೋಗಿ ತಂಗುವುದು. ಕೊಡಗಿನಲ್ಲಿ 2018 ರಲ್ಲಿ ಮೊದಲ ಬಾರಿ ವಿಕೋಪ ಸಂಭವಿಸಿದಾಗ ವಿರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿ 2೦೦ ಮೀಟರ್‌ ಆಳಕ್ಕೆ ಬಿರುಕು ಕಾಣಿಸಿಕೊಂಡಿತ್ತು. ಅಲ್ಲದೇ ನೆಹರು ನಗರದಲ್ಲಿಯೂ ಈ ರೀತಿಯ ಬಿರುಕು ಕಾಣಿಸಿಕೊಂಡು ಜನರಲ್ಲಿ ಆತಂಕ ಮನೆಮಾಡಿತ್ತು. ಸ್ಥಳಕ್ಕೆ ಭಾರತೀಯ ಗಣಿ ಮತ್ತು ಭೂ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಈ ಬಿರುಕು ಅಪಾಯಕಾರಿಯಾಗಿದೆ. ಈ ಪ್ರದೇಶ ಜನವಸತಿಗೆ ಸುರಕ್ಷಿತವಾಗಿಲ್ಲ, ಅತೀಯಾದ ಮಳೆ ಬಂದಲ್ಲಿ ಬೆಟ್ಟ ಪ್ರದೇಶದಲ್ಲಿ ಮಣ್ಣು-ನೀರು ಸೇರಿ ಹರಿಯುತ್ತಾ ಬೆಟ್ಟ ಜಾರುವ ಸಂಭವವಿದೆ ಎನ್ನುವ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

ಮಳೆಗಾಲದಲ್ಲಿ ಬೆಟ್ಟದ ನಿವಾಸಿಗಳಿಗೆ ಹೆದರಿ ಅಡಗುವುದೊಂದೇ ಮಾರ್ಗ:

ಹೆಚ್ಚಾಗಿ ಕೂಲಿಕಾರ್ಮಿಕರೇ ವಾಸವಿರುವ ಈ ಪ್ರದೇಶದಲ್ಲಿ, ಎಲ್ಲರ ಬಳಿ ಜಿಲ್ಲಾಡಳಿತದ ಪ್ರಕಟಣೆ ನೋಡಲು ಸ್ಮಾರ್ಟ್ಫೋನ್‌ ಇರುವುದಿಲ್ಲ. ಜಿಲ್ಲಾಡಳಿತದ ಪ್ರಕಟಣೆ ತಲುಪದಿದ್ದರೂ ಸಂಜೆಯಾಗುತ್ತಲೇ ಪುರಸಭೆ ಅಧಿಕಾರಿಗಳು, ಪೊಲೀಸಿನವರು ಬಂದು ಸುರಿವ ಮಳೆಯಲ್ಲಿ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಕರೆಯುವುದು, ನಾವೂ ಬರೋದಿಲ್ಲ ಎಂದು ಹಠ ಮಾಡುವ ನಿವಾಸಿಗಳು ಇದು ಮಾಮೂಲು ಚಿತ್ರಣವಾಗಿ ಹೋಗಿದೆ. ನೆಹರು ನಗರ, ಅರಸುನಗರ, ಮಗ್ಗುಲ ಗ್ರಾಮದ ನಿವಾಸಿಗಳು ಕಳೆದ ವರ್ಷದಿಂದ ಕಾಳಜಿ ಕೇಂದ್ರಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ.

ಮಂದಗತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಸರ್ಕಾರಿ ಯಂತ್ರಗಳು : ಮಲೆತಿರಿಕೆ ಹಾಗೂ ನೆಹರುನಗರದ 64 ಕುಟುಂಬಗಳಿಗೆ ಬಿಟ್ಟಂಗಾಲದ ಅಂಬಟ್ಟಿ ಗ್ರಾಮದ ಬಳಿ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಾಗವಿಲ್ಲದ ಕಾರಣ, ಖಾಸಗೀಯವರ 7.80 ಜಾಗ ಖರೀದಿ ಮಾಡಲಾಗಿದೆ. ಇತ್ತೀಚೆಗೆ ತಹಸೀಲ್ದಾರ್‌ ಅವರ ಹೆಸರಿಗೆ ಜಾಗವೂ ವರ್ಗಾವಣೆಯಾಗಿದೆ. ಆದರೆ ಇನ್ನೂ ಕಾಡು ಕಡಿದು ಬಡಾವಣೆ ಮಾಡಿ ಜಾಗವನ್ನು ನಿವಾಸಿಗಳಿಗೆ ಹಂಚುವ ಪ್ರಕ್ರಿಯೆ ಆಗಬೇಕಿದೆ. ಇತ್ತೀಚೆಗೆ ಅರಣ್ಯ ಇಲಾಖೆ ಆ ಜಾಗದಲ್ಲಿರುವ ಮರ ಕಡಿಯಲು ಒಪ್ಪಿ ಕುರುಚಲು ಗಿಡ ಕಡಿಯಲು ಆಗುವುದಿಲ್ಲ ಎಂದು ಹೇಳಿದ ಮೇರೆಗೆ ವಿರಾಜಪೇಟೆಯ ನೂತನ ಶಾಸಕರು ಇಡೀ ಜಾಗದ ಕಾಡು ಕಡಿದು ಕೊಡಬೇಕಾಗಿ ನಿರ್ದೇಶನವನ್ನು ಕೂಡಾ ನೀಡಿದ್ದಾರೆ ಎನ್ನಲಾಗಿದೆ.

ಈ ಬಾರಿಯೂ ನಿವಾಸಿಗಳಿಗಿಲ್ಲ ಬೆಟ್ಟದಿಂದ ಮುಕ್ತಿ: ಪ್ರತಿ ಮಳೆಗಾಲದಲ್ಲೂ ಕಾಳಜೀ ಕೇಂದ್ರಕ್ಕೆ ಹೋಗಿ ಮಳೆ ಕಡಿಮೆಯಾದ ಮೇಲೆ ವಾಪಸು ಮನೆಗೆ ಬಂದು ಬೇಸೆತ್ತು ಹೋಗಿರುವ ನಿವಾಸಿಗಳು ಕಳೆದೆರೆಡು ವರ್ಷಗಳಿಂದ ಅವರನ್ನು ಕಾಳಜಿ ಕೇಂದ್ರಕ್ಕೆ ಕರೆತರುವುದೇ ಸವಾಲಿನ ಕೆಲಸವಾಗಿದೆ. ಈ ವರ್ಷ ಒಂದು ದಿನದ ಜೋರು ಮಳೆಗೆ ಮಲೆತಿರಿಕೆ ಬೆಟ್ಟದ ನಿವಾಸಿ ಸಂತೋಷ್‌ ಅವರ ಮನೆಯ ಮೇಲೆ ಮರಬಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆದರೆ ಮನೆ ಸ್ವಲ್ಪ ಜಖಂ ಆಗಿದೆ. ಇಷ್ಟೆಲ್ಲಾ ಆತಂಕಗಳ ನಡುವೆ ಇಲ್ಲಿನ ನಿವಾಸಿಗಳು ಮಳೆಗಾಲ ಬಂದಾಗ ಹೆದರುವುದು, ಬೇಸಿಗೆ ಬಂದಾಗ ಎಂದಿನಂತೆ ಜೀವನ ನಡೆಸುವುದಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಬೇಕೆನ್ನುವುದು ಈ ಬೆಟ್ಟಪ್ರದೇಶದ ನಿವಾಸಿಗಳ ಆಗ್ರಹವಾಗಿದೆ.‌

ಕಳೆದ ಮೂರುವರ್ಷಗಳಿಂದ ಈ ವಿಚಾರದಲ್ಲಿ ಸ್ವಲ್ಪಮಟ್ಟಿಗಿನ ಹಿನ್ನೆಡೆಯಾಗಿತ್ತು. ಈಗ ನೂತನ ಶಾಸಕರು ಬಂದ ಬಳಿಕ ನಿವಾಸಿಗಳಿಗೆ ಖರೀದಿ ಮಾಡಿರುವ ಜಾಗದಲ್ಲಿ ಕಾಡು ಕಡಿದು ಸ್ವಚ್ಛಗೊಳಿಸಲು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಇನ್ನೂ ಮೂರು ತಿಂಗಳಿನಲ್ಲಿ ನಿವಾಸಿಗಳಿಗೆ ಜಾಗ ಹಸ್ತಾಂತರ ಮಾಡುವ ಕೆಲಸವನ್ನು ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ. ಅಲ್ಲಿಯವರೆಗೂ ನಿವಾಸಿಗಳ ಸುರಕ್ಷತೆಗಾಗಿ ಪುರಸಭೆ ವತಿಯಿಂದ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಸದಸ್ಯ ರಾಜೇಶ್‌ ಪದ್ಮನಾಭ ಹೇಳಿದರು.

ಮಲೆತಿರಿಕೆ ಬೆಟ್ಟ ಜನರಿಗೆ ವಾಸಯೋಗ್ಯವಲ್ಲ ಎಂದು ಹೇಳಿ ಆರು ವರ್ಷ ಆಯ್ತು. ಪ್ರತಿವರ್ಷ ನಾವು ಭಯದಲ್ಲೇ ಜೀವನ ಕಳೆಯುತ್ತಾ ಇದ್ದೇವೆ. ಮೊದಲ ವರ್ಷ ಮನೆಯ ಹಿಂಬದಿಯ ಬರೆ ಕುಸಿದಿದೆ, ಬೆಟ್ಟದಿಂದ ರಭಸವಾಗಿ ನೀರು ಮನೆಯ ಕಡೆಗೆ ಹರಿದು ಬರುತ್ತದೆ. ಆದರೆ ಇದುವರೆಗೂ ನಮಗೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ವಿನಾಃ ಮಾಡುತ್ತಿಲ್ಲ. ಈಗಾಗಲೇ ಮಳೆಗಾಲ ಶುರು ಆಗ್ತಾಯಿದೆ. ಸಂತ್ರಸ್ತ ಶಿಬಿರಕ್ಕೆ ಹೋಗಲು ಮನಸಾಗುವುದಿಲ್ಲ. ಎಷ್ಟು ವರ್ಷ ಜೀವಭಯದಲ್ಲಿ ಬದುಕುವುದು? ಇನ್ನಾದರೂ ನಮ್ಮ ಸಮಸ್ಯೆ ಪರಿಹಾರ ಮಾಡಿ ಎಂದು ಮಲೆತೀರಿಕೆ ಬೆಟ್ಟದ ನಿವಾಸಿ ರಂಜು ತಿಳಿಸಿದರು.

ಸರ್ಕಾರದ ಮಟ್ಟದಲ್ಲಿ ಕೆಲಸಗಳು ನಡೆಯುತ್ತಿವೆ. ಜಾಗ ತಹಸೀಲ್ದಾರ್‌ ಹೆಸರಿಗೆ ವರ್ಗಾವಣೆಯಾಗಿದ್ದು ಸ್ಥಳದಲ್ಲಿ ಇರುವಂತಹ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಒಪ್ಪಿಗೆ ದೊರಕಿದೆ. ಇನ್ನು ಜಾಗವನ್ನು ಲೇಔಟ್‌ ಆಗಿ ಪರಿವರ್ತನೆ ಮಾಡಲಾಗಿದ್ದು ಸ್ವಲ್ಪ ಸಮಯದಲ್ಲಿ ನಿವಾಸಿಗಳಿಗೆ ಹಸ್ತಾಂತರ ಮಾಡುವ ಕೆಲಸ ಆಗುತ್ತದೆ ಎನ್.ಡಿ.ಆರ್.ಎಫ್‌ ಹಾಗೂ ಸರ್ಕಾರದಿಂದ ನಿವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ನಿಗದಿತ ಪರಿಹಾರ ಹಣವನ್ನು ಸದ್ಯದಲ್ಲಿಯೇ ಸರ್ಕಾರದಿಂದ ನೀಡಲಾಗುವುದು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಎ ಎಸ್ ಪೊನ್ನಣ್ಣ ತಿಳಿಸಿದರು.