ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

| Published : Aug 30 2025, 01:01 AM IST

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಪೆ ಪರಿಸರದಲ್ಲಿ ಸಮುದ್ರಪಾಲಾಗುತ್ತಿದ್ದ ನಾಲ್ವರು ಮೀನುಗಾರರನ್ನು ಈಶ್ವರ್ ಮಲ್ಪೆ ದೋಣಿಯಲ್ಲಿ ತೆರಳಿ, ಈಜಿ ಕೈಸೋತು ಹೋಗಿದ್ದ ಮೀನುಗಾರರಿಗೆ ಲೈಫ್‌ ಜಾಕೆಟ್‌ ನೀಡಿ ರಕ್ಷಿಸಿ ದಡಕ್ಕೆ ಕರೆ ತಂದರು.

ಕನ್ನಡಪ್ರಭ ವಾರ್ತೆ ಉಡುಪಿ

ಸಮುದ್ರ ಪಾಲಾಗುತ್ತಿದ್ದ 4 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ ಘಟನೆ ಶುಕ್ರವಾರ ಬೆಳಗ್ಗೆ ಮಲ್ಪೆ ತೊಟ್ಟಂ ಎಂಬಲ್ಲಿ ನಡೆದಿದೆ. ಜೀವನ್ ಎಂಬವರು ಮಾಲಕರಾಗಿರುವ ಈ ಬೋಟಿನಲ್ಲಿ 4 ಮಂದಿ ಮೀನುಗಾರರು ಏಡಿಬಲೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದರು. ದಡದಿಂದ ಅನತಿ ದೂರ ಹೋಗುವಷ್ಟರಲ್ಲಿಯೇ ಈ ಘಟನೆ ನಡೆದಿದೆ.ಪ್ರಸ್ತುತ ಗಾಳಿಮಳೆಯಿಂದ ಸಮುದ್ರ ತೀವ್ರ ಪ್ರಕ್ಷುಬ್ಧವಾಗಿದ್ದು, ಭಾರಿ ಗಾತ್ರದ ಅಲೆಯೊಂದು ಬಡಿದು ದೋಣಿ ಮಗುಚಿಕೊಂಡಿತು. ದೋಣಿಯಲ್ಲಿದ್ದ ಮೀನುಗಾರರು ಸಮುದ್ರಕ್ಕೆ ಬಿದ್ದರು. ಈ ಮೀನುಗಾರರು ನುರಿತ ಈಜುಗಾರರಾಗಿದ್ದು, ಬಹಳ ಹೊತ್ತು ಅಲೆಗಳ ನಡುವೆ ಈಜಿದರಾದರೂ ದಡ ಸೇರಲಾಗಲಿಲ್ಲ. ಅಷ್ಟರಲ್ಲಿ ಘಟನೆ ನೋಡಿದ ಸ್ಥಳೀಯರು ಮುಳುಗುತಜ್ಞ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಿದರು. ಧಾವಿಸಿ ಬಂದ ಈಶ್ವರ್ ಇನ್ನೊಂದು ದೋಣಿಯಲ್ಲಿ ತೆರಳಿ, ಈಜಿ ಕೈಸೋತು ಹೋಗಿದ್ದ ಮೀನುಗಾರರಿಗೆ ಲೈಫ್‌ ಜಾಕೆಟ್‌ಗಳ‍ನ್ನು ನೀಡಿ, ರಕ್ಷಿಸಿ ದಡಕ್ಕೆ ಕರೆ ತಂದರು. ಸ್ಥಳೀಯ ನಗರಸಭಾ ಸದಸ್ಯ ಯೋಗೀಶ್ ಸಹಕರಿಸಿದರು.ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ನಿರಂತರವಾಗಿ ಗಾಳಿಮಳೆಯಾಗುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಆದರೆ ಜೀವನೋಪಾಯಕ್ಕಾಗಿ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದಾರೆ. ಮೀನುಗಾರರು ಇಂತಹ ಅಪಾಯಕ್ಕೆ ಇಳಿಯಬೇಡಿ. ನಿಮ್ಮ ಮನೆಯಲ್ಲಿ ಹೆಂಡತಿ ಮಕ್ಕಳು ದಾರಿ ಕಾಯುತ್ತಿರುತ್ತಾರೆ. ಮೀನುಗಾರಿಕೆ ನಡೆಸುವಾಗ ಲೈಫ್‌ ಜಾಕೆಟ್‌ ಕಡ್ಡಾಯವಾಗಿ ಬಳ‍ಸಿ ಎಂದು ಈಶ್ವರ್ ಮಲ್ಪೆ ಮನವಿ ಮಾಡಿದ್ದಾರೆ.