ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಿಮ್ಸ್ ಸಂಸ್ಥೆ ಆವರಣದಲ್ಲಿರುವ ಕ್ಯಾನ್ಸರ್ ಆಸ್ಪತ್ರೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ತಿಳಿಸಿದರು.ಬುಧವಾರ ನಗರದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಯಾನ್ಸರ್ ಆಸ್ಪತ್ರೆಗೆ ಅನುದಾಣದ ಕೊರತೆ ಇಲ್ಲ. ಕೋಟ್ಯಂತರ ರು. ಮೌಲ್ಯದ ಯಂತ್ರೋಪಕರಣಗಳ ಖರೀದಿಗೆ ಟೆಂಡರ್ ಆಗಿದೆ. ಈ ತಿಂಗಳಲ್ಲಿ ಅವು ಬರುವ ಸಾಧ್ಯತೆಗಳಿವೆ ಎಂದರು.
ಕ್ಯಾನ್ಸರ್ ಆಸ್ಪತ್ರೆಗೆ ತಜ್ಞ ವೈದ್ಯರಿದ್ದು, ಮತ್ತೊಬ್ಬ ತಜ್ಞ ವೈದ್ಯರ ಅವಶ್ಯಕತೆ ಇದೆ. ಅವರ ನೇಮಕಾತಿಗೂ ಸರ್ಕಾರದಿಂದ ಮಂಜೂರಾತಿ ದೊರಕಿದೆ. ಕ್ಯಾನ್ಸರ್ ಆಸ್ಪತ್ರೆ ಕಾರ್ಯಾರಂಭಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹಂತ ಹಂತವಾಗಿ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:
ಕರ್ತವ್ಯದ ಸಮಯದಲ್ಲಿ ಸರ್ಕಾರಿ ವೈದ್ಯರು ಖಾಸಗಿಯಾಗಿ ಕ್ಲಿನಿಕ್‌ಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದು ಕಂಡುಬಂದವರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ಕುರಿತು ವರದಿ ನೀಡುವಂತೆಯೂ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದ ಅವರು, ಸರ್ಕಾರಿ ವೈದ್ಯರು ಖಾಸಗಿಯಾಗಿ ಕೆಲಸ ಮಾಡುವುದನ್ನು ತಪ್ಪಿಸಲು ಬಿಗಿ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಈ ಮೊದಲು ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸುವಾಗ ಮತ್ತು ಸಂಜೆ ನಿರ್ಗಮಿಸುವಾಗ ಮಾತ್ರ ಥಮ್ ಕೊಡಬೇಕಿತ್ತು. ಆದರೆ, ಈಗ ಮಧ್ಯಾಹ್ನ ಊಟಕ್ಕೆ ಆಸ್ಪತ್ರೆಯಿಂದ ಹೊರಹೋಗುವಾಗ ಮತ್ತು ಮತ್ತೆ ಊಟ ಮುಗಿಸಿ ಆಸ್ಪತ್ರೆಗೆ ವಾಪಸಾಗುವಾಗಲೂ ಥಮ್ ಕೊಡುವಂತಹ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಇದಕ್ಕಾಗಿ ಸೀಸಿ ಕ್ಯಾಮೆರಾಗಳನ್ನು ಆಸ್ಪತ್ರೆಗಳಲ್ಲಿ ಅಳವಡಿಸಿರುವುದಾಗಿ ಹೇಳಿದರು.ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಗುಣಾತ್ಮಕ ಚಿಕಿತ್ಸೆ ದೊರಕಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಚೀಟಿ ಬರೆದು ಕಳುಹಿಸುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು. ಸರ್ಕಾರಿ ವೈದ್ಯರು ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡದಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿಕೊಟ್ಟು ಪರಿಶೀಲನೆ ನಡೆಸಲಾಗುವುದು ಎಂದು ನುಡಿದರು.
ತಡೆಯಾಜ್ಞೆ ತೆರವಿಗೆ ಪ್ರಯತ್ನ:ಮಿಮ್ಸ್ ಆಸ್ಪತ್ರೆಯನ್ನು ವಿಸ್ತರಣೆ ಮಾಡುವುದಕ್ಕೆ ಜಾಗದ ಕೊರತೆ ಇರುವುದು ನಿಜ. ಆಸ್ಪತ್ರೆಗೆ ಸೇರಿದ ಜಾಗದಲ್ಲಿ ತಮಿಳು ಕಾಲೋನಿ ಇದೆ. ಅದನ್ನು ತೆರವುಗೊಳಿಸುವುದಕ್ಕೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಅದರ ತೆರವಿಗೆ ಪ್ರಯತ್ನಿಸುತ್ತಿದ್ದೇವೆ. ಮಿಮ್ಸ್ ಆಸ್ಪತ್ರೆಗೆ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಜಾಗದ ಕೊರತೆಯಿಂದ ಬಳಕೆಯಾಗಿಲ್ಲ. ಅದಕ್ಕಾಗಿ ವಾಪಸ್ ಹೋಗಿದೆ. ಆದಷ್ಟು ಬೇಗ ತಡೆಯಾಜ್ಞೆಯನ್ನು ತೆರವುಗೊಳಿಸಿ ಆಸ್ಪತ್ರೆಗೆ ಹೊಸ ರೂಪ ನೀಡಲಾಗುವುದು ಎಂದರು.
ಸೀಟಿ ಸ್ಕ್ಯಾನ್ ಯಂತ್ರ ಕೊಡುಗೆ:ಮಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಒಂದು ಸೀಟಿ ಸ್ಕ್ಯಾನ್ ಯಂತ್ರವಿದ್ದು, ಮತ್ತೊಂದು ಯಂತ್ರವನ್ನು ಶೀಘ್ರದಲ್ಲೇ ದೊರಕಿಸಿಕೊಡುವುದಾ ತಿಳಿಸಿದ ಸಚಿವ ಶರಣಪ್ರಕಾಶ ಪಾಟೀಲ ಅವರು, ಎಂಆರ್‌ಐ ಸ್ಕ್ಯಾನ್ ವರದಿ ವಿಳಂಬವಾಗುತ್ತಿರುವುದು ನಿಜ. ದಿನಕ್ಕೆ ೨೦ರಿಂದ ೩೦ ಜನರು ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ. ಒತ್ತಡ ಹೆಚ್ಚಿರುವುದರಿಂದ ವರದಿ ವಿಳಂಬವಾಗುತ್ತಿದೆ. ಇನ್ನೊಂದು ಯಂತ್ರವನ್ನು ನೀಡುವುದಕ್ಕೆ ಭರವಸೆ ನೀಡಿದರು.
ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಇತರರಿದ್ದರು.