ಮಂಡ್ಯ ನಗರಸಭೆ ಸಾಮಾನ್ಯ ಸಭೆ: ವಿಷಯ ಓದು, ಮುಂದಿನ ಸಭೆಗೆ ಮುಂದೂಡು...!

| Published : Oct 31 2024, 12:57 AM IST

ಮಂಡ್ಯ ನಗರಸಭೆ ಸಾಮಾನ್ಯ ಸಭೆ: ವಿಷಯ ಓದು, ಮುಂದಿನ ಸಭೆಗೆ ಮುಂದೂಡು...!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯಗಳನ್ನೂ ಬಹುತೇಕ ಸದಸ್ಯರು ಚರ್ಚೆಗೆ ಪರಿಗಣಿಸಲೂ ಇಲ್ಲ. ಅನುಮೋದನೆಯನ್ನೂ ನೀಡಲಿಲ್ಲ. ವಿಷಯ ಓದು, ಮುಂದಿನ ಸಭೆಗೆ ಮುಂದೂಡು...! ಎನ್ನುತ್ತಲೇ ಎಲ್ಲವನ್ನೂ ಮುಂದೂಡಿದರು. ಪ್ರತಿಷ್ಠೆಯ ಮಾತುಗಳು, ಗದ್ದಲ, ಕೋಲಾಹಲ ಸಭೆಯ ತುಂಬಾ ಮೇಳೈಸಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ಎರಡನೇ ಅವಧಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರೂ ನೂತನ ಅಧ್ಯಕ್ಷ- ಉಪಾಧ್ಯಕ್ಷರು ಮೊದಲ ಸಾಮಾನ್ಯ ಸಭೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಂಪೂರ್ಣ ವಿಫಲರಾದರು.

ಮೊದಲ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಜಿಗಿದು ಎರಡನೇ ಅವಧಿಯಲ್ಲೂ ಗದ್ದುಗೆ ಏರುವುದಕ್ಕೆ ಪ್ರಯತ್ನಿಸಿ ಮುಗ್ಗರಿಸಿದ್ದರು. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರು ಒಗ್ಗೂಡಿ ಬುಧವಾರ ನಡೆದ ಸಾಮಾನ್ಯ ಸಭೆಯ ಗದ್ದಲ, ಕೋಲಾಹಲದಲ್ಲೇ ಮುಳುಗುವಂತೆ ಮಾಡಿದರು.

ಚರ್ಚೆಯೂ ಇಲ್ಲ, ಅನುಮೋದನೆಯೂ ಇಲ್ಲ:

ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯಗಳನ್ನೂ ಬಹುತೇಕ ಸದಸ್ಯರು ಚರ್ಚೆಗೆ ಪರಿಗಣಿಸಲೂ ಇಲ್ಲ. ಅನುಮೋದನೆಯನ್ನೂ ನೀಡಲಿಲ್ಲ. ವಿಷಯ ಓದು, ಮುಂದಿನ ಸಭೆಗೆ ಮುಂದೂಡು...! ಎನ್ನುತ್ತಲೇ ಎಲ್ಲವನ್ನೂ ಮುಂದೂಡಿದರು. ಪ್ರತಿಷ್ಠೆಯ ಮಾತುಗಳು, ಗದ್ದಲ, ಕೋಲಾಹಲ ಸಭೆಯ ತುಂಬಾ ಮೇಳೈಸಿತ್ತು. ಯಾವುದೇ ವಿಷಯಗಳು ಚರ್ಚೆಗೂ ಸ್ವೀಕೃತವಾಗದೆ, ಅನುಮೋದನೆಯೂ ಸಿಗದಿದ್ದರಿಂದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್ ಅಪಹಾಸ್ಯ, ಮುಜುಗರಕ್ಕೆ ಗುರಿಯಾದರು.

ಪುರಸಭೆ ಕಾಯ್ದೆ ೧೯೬೪ ಕಲಂ ೫೦ರ ಪ್ರಕಾರ ನಗರಸಭೆ ಸಾಮಾನ್ಯ ಸಭೆ ನಡೆಯುವುದಕ್ಕೆ ಮೂರನೇ ಒಂದು ಭಾಗದಷ್ಟು ಸದಸ್ಯರು ಹಾಗೂ ವಿಷಯಗಳಿಗೆ ಅನುಮೋದನೆ ನೀಡಲು ನಾಲ್ಕನೇ ಒಂದು ಭಾಗದಷ್ಟು ಸದಸ್ಯರ ಬೆಂಬಲವಿರಬೇಕೆಂಬ ನಿಯಮವಿದೆ. ಇದೇ ನಿಯಮವನ್ನು ಅಸ್ತ್ರವಾಗಿಸಿಕೊಂಡ ಸದಸ್ಯ ಎಚ್.ಎಸ್.ಮಂಜು ನೇತೃತ್ವದ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರು ವಿಷಯ ಚರ್ಚೆ ಬರದಂತೆ, ಅನುಮೋದನೆಯೂ ದೊರಕದಂತೆ ಮಾಡುವಲ್ಲಿ ಗೆಲುವು ಸಾಧಿಸಿದರು.

ಸಭೆಗೆ ಶಾಸಕರು ಬರಬೇಕು:

ಸಭೆಗೆ ಶಾಸಕರು ಬರಬೇಕು. ಅವರ ಸಮ್ಮುಖದಲ್ಲಿ ವಿಷಯಗಳು ಚರ್ಚೆಯಾಗಬೇಕು. ಕೆಲವೊಂದು ವಿಷಯಗಳಿಗೆ ಶಾಸಕರ ನೇತೃತ್ವದಲ್ಲಿ ನಿರ್ಣಯಗಳನ್ನು ಸರ್ಕಾರದಿಂದ ಮಂಜೂರಾತಿ ದೊರಕಿಸುವ ಅಗತ್ಯವಿದೆ. ಅದಕ್ಕಾಗಿ ಸಭೆಯನ್ನು ಮುಂದೂಡಿ ಎನ್ನುತ್ತಿದ್ದೇನೆ. ನಾವು ಯಾರ ವಿರೋಧವೂ ಇಲ್ಲ, ಯಾವ ವಿಷಯಗಳಿಗೂ ಅಡ್ಡಿಪಡಿಸುತ್ತಲೂ ಇಲ್ಲ. ಕಾನೂನಾತ್ಮಕವಾಗಿ ಸಭೆ ನಡೆಯಬೇಕೆಂಬುದಷ್ಟೇ ನಮ್ಮ ಉದ್ದೇಶ ಎಂದು ಸದಸ್ಯರಾದ ಎಚ್.ಎಸ್.ಮಂಜು, ಶ್ರೀಧರ್, ನಯೀಂ ಸೇರಿದಂತೆ ಇತರರು ನಯವಾಗಿ ಸಭೆ ಸುಗಮವಾಗಿ ನಡೆಯುವುದಕ್ಕೆ ಅಡ್ಡಿಪಡಿಸುತ್ತಿದ್ದರು.

ಅಧ್ಯಕ್ಷ ನಾಗೇಶ್ ಮಾತನಾಡಿ, ಮಂಜು ಅವರೂ ಅಧ್ಯಕ್ಷರಾಗಿದ್ದರು. ಆಗ ಎಲ್ಲಾ ಸಭೆಗಳಿಗೂ ಶಾಸಕರು ಬರುತ್ತಿದ್ದರೇ. ಈಗ ಶಾಸಕರು ಬರಬೇಕು ಎಂದರೆ ಹೇಗೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಲವೊಂದು ಮುಖ್ಯವಾದ ವಿಷಯಗಳಿವೆ. ಅವುಗಳನ್ನು ಚರ್ಚೆ ಮಾಡೋಣ. ಸಭೆ ಸುಗಮವಾಗಿ ನಡೆಯುವುದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರೂ ವಿರೋಧಿ ಸದಸ್ಯರು ಒಪ್ಪಲೇ ಇಲ್ಲ.

ಮೀನಾಕ್ಷಿ-ಪೂರ್ಣಿಮಾ ಮಾತಿನ ಚಕಮಕಿ:

ಆಡಳಿತರೂಢ ಪಕ್ಷದ ಮೀನಾಕ್ಷಿ ಪುಟ್ಟಸ್ವಾಮಿ ಅವರು, ದೀಪಾವಳಿ ಹಬ್ಬ ಬರುತ್ತಿದೆ. ವಾರ್ಡ್‌ಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿದೆ. ಕೂಡಲೇ ಬೀದಿ ದೀಪಗಳನ್ನು ಹಾಕಿಸುವುದಕ್ಕೆ ಅನುಮತಿ ನೀಡುವಂತೆ ಕೋರಿದಾಗ, ದಿಢೀರನೇ ಎದ್ದ ಕಾಂಗ್ರೆಸ್ ಸದಸ್ಯೆ ಪೂರ್ಣಿಮಾ, ಬೀದಿದೀಪಕ್ಕಿಂತ ಮೊದಲು ನಮ್ಮ ವಾರ್ಡ್‌ನಲ್ಲಿ ಯುಜಿಡಿ ಸಮಸ್ಯೆ ಇದೆ. ಅದನ್ನು ಮೊದಲು ಬಗೆಹರಿಸಿ. ಎಷ್ಟು ಬಾರಿ ಈ ವಿಷಯವನ್ನು ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಇದುವರೆಗೂ ಅದಕ್ಕೆ ಪರಿಹಾರ ದೊರಕಿಸಿಲ್ಲ ಎಂದು ಕೂಗೆಬ್ಬಿಸಿದರು. ಯುಜಿಡಿಗಿಂತ ಮೊದಲು ನಮಗೆ ಬೀದಿ ದೀಪದ ಅವಶ್ಯಕತೆ ಇದೆ ಎಂದಾಗ, ನಮಗೆ ಯುಜಿಡಿನೇ ಮುಖ್ಯ ಎಂದು ಏರುದನಿಯಲ್ಲಿ ಕಿರುಚಾಡುತ್ತಾ ಇಬ್ಬರೂ ಮಾತಿನಚಕಮಕಿ ನಡೆಸಿದರು.

ಪೂರ್ಣಿಮಾ ಮಾತಿಗೆ ಸದಸ್ಯ ನಹೀಂ ಬೆಂಬಲವಾಗಿ ನಿಂತಾಗ ಸದಸ್ಯ ರವಿ ಮಾತಿಗಿಳಿದು, ಯುಜಿಡಿ ಸಮಸ್ಯೆ ನಿನ್ನೆ, ಮೊನ್ನೆಯಿಂದ ಹುಟ್ಟಿಕೊಂಡಿಲ್ಲ. ಹಿಂದೆ ಅಧ್ಯಕ್ಷರಾಗಿದ್ದ ಕಾಲದಿಂದಲೂ ಸಮಸ್ಯೆ ಇದೆ. ಅದು ಈಗ ಅಷ್ಟೊಂದು ಮುಖ್ಯವಾಯಿತೇ. ಬೀದಿ ದೀಪಗಳು ಎಲ್ಲಾ ವಾರ್ಡ್‌ಗಳಿಗೂ ಅವಶ್ಯಕವಾಗಿರುವುದರಿಂದ ಅವುಗಳನ್ನು ದೊರಕಿಸಿಕೊಡುವುದಕ್ಕೆ ಎಲ್ಲರೂ ಬೆಂಬಲಿಸುವಂತೆ ಕೋರಿದರೂ ಯಾರೊಬ್ಬರೂ ಅದಕ್ಕೆ ಸಹಮತ ವ್ಯಕ್ತಪಡಿಸಲೇ ಇಲ್ಲ.

ಸಭೆಯನ್ನು ನಿಯಂತ್ರಿಸುವಲ್ಲಿ ಅಧ್ಯಕ್ಷರು ವಿಫಲ

ಸಭೆಯಲ್ಲಿದ್ದ ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಅಧ್ಯಕ್ಷ ನಾಗೇಶ್ ವಿಫಲರಾಗಿದ್ದಷ್ಟೇ ಅಲ್ಲದೇ, ಸಭೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಡೆಸುವುದಕ್ಕೂ ಸಾಧ್ಯವಾಗದೆ ಅಸಹಾಯಕರಾಗಿ ಕುಳಿತಿದ್ದರು. ಉಪಾಧ್ಯಕ್ಷ ಎಂ.ಪಿ. ಅರುಣ್‌ಕುಮಾರ್ ಕೂಡ ಸದಸ್ಯರನ್ನು ಎದುರಿಸಲಾಗದೆ ಪೆಚ್ಚಾಗಿ ಆಸೀನರಾಗಿದ್ದರು. ಪ್ರಭಾರಿ ಆಯುಕ್ತ ಕೃಷ್ಣಕುಮಾರ್ ಮೂಕ ಪ್ರೇಕ್ಷಕರಾಗಿದ್ದರು.

ಸಭೆಯೊಳಗೆ ಕಾಂಗ್ರೆಸ್ ಕಡೆಯಿಂದ ಎಚ್.ಎಸ್.ಮಂಜು ಸೇರಿದಂತೆ ಶ್ರೀಧರ್, ನಹೀಂ, ಪೂರ್ಣಿಮಾ, ನಾರಾಯಣ್ ಆರ್ಭಟ ಜೋರಾಗಿದ್ದರೆ ಜೆಡಿಎಸ್ ಕಡೆಯಿಂದ ರಾಮಲಿಂಗು, ನಾಗೇಶ್, ರವಿ, ಮೀನಾಕ್ಷಿ ಅಬ್ಬರ ಹೆಚ್ಚಾಗಿ ಕಂಡುಬಂದಿತು. ಉಳಿದ ಸದಸ್ಯರು ನಗರಸಭೆಯೊಳಗೆ ನಡೆಯುತ್ತಿದ್ದ ಹೆಡ್ರಾಮಾವನ್ನು ಮೌನದಿಂದಲೇ ವೀಕ್ಷಿಸುತ್ತಿದ್ದರು. ಮುಂಭಾಗದಲ್ಲಿ ಕುಳಿತಿದ್ದ ಸದಸ್ಯರು ವಿಷಯ ಓದಿದ ಕೂಡಲೇ ಮುಂದಿನ ಸಭೆಗೆ ಮುಂದೂಡುವಂತೆ ಕೈ ಎತ್ತಿದ ಕೂಡಲೇ ಹಿಂಭಾಗದಲ್ಲಿ ಕುಳಿತಿದ್ದ ಸದಸ್ಯರು ಬೊಂಬೆಗಳಂತೆ ಕೈಎತ್ತಿ ಬೆಂಬಲ ವ್ಯಕ್ತಪಡಿಸುವುದಕ್ಕೆ ಸೀಮಿತರಾಗಿದ್ದರು.ನಗರಾಭಿವೃದ್ಧಿ ಅತಂತ್ರ, ಪ್ರತಿಷ್ಠೆ ಮೇಲುಗೈ..!

ನಗರದ ರಸ್ತೆ, ಒಳಚರಂಡಿ, ಬೀದಿ ದೀಪ, ಕುಡಿಯುವ ನೀರು, ಸ್ವಚ್ಛತೆ, ಸೌಂದರ್ಯ, ನಗರಸಭೆಯೊಳಗೆ ಆಗಬೇಕಿರುವ ಸಾರ್ವಜನಿಕ ಕೆಲಸಗಳು ಸೇರಿದಂತೆ ಇನ್ನಿತರ ಮಹತ್ವದ ವಿಷಯಗಳ ಕುರಿತಂತೆ ಚರ್ಚೆಯಾಗಬೇಕಿದ್ದ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠೆಯ ಮಾತುಗಳು ಮೇಲುಗೈ ಸಾಧಿಸಿದ್ದವು.

ನಗರದ ಬಹುತೇಕ ರಸ್ತೆಗಳು ಡಾಂಬರೀಕರಣಗೊಂಡಿಲ್ಲ. ಬೀದಿ ದೀಪಗಳು ಕೆಟ್ಟು ವಾರ್ಡ್‌ಗಳಲ್ಲಿ ಕತ್ತಲು ಆವರಿಸಿದೆ. ಮಳೆ ಬಿದ್ದರೆ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುತ್ತಿವೆ. ನಗರದ ಸೌಂದರ್ಯ ಫ್ಲೆಕ್ಸ್‌ಗಳಿಂದ ಹಾಳಾಗಿದೆ. ಖಾಲಿ ಜಾಗಗಳಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸುತ್ತಿಲ್ಲ. ನಗರಸಭೆ ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳು ಕುಂಟುತ್ತಾ ಸಾಗಿವೆ. ಹೀಗಿದ್ದರೂ ನಗರಸಭೆ ಬಹುತೇಕ ಸದಸ್ಯರು ಸಾಮಾನ್ಯ ಸಭೆ ಸುಗಮವಾಗಿ ನಡೆಯಲು ಬಿಡಬಾರದೆಂಬ ಏಕೈಕ ಗುರಿಯೊಂದಿಗೆ ಬಂದವರಂತೆ ವರ್ತಿಸುತ್ತಿದ್ದರು. ಸಭೆಗೆ ಶಾಸಕರು ಬರಬೇಕು, ಅನುಮೋದನೆಗೆ ಸದಸ್ಯರ ಬೆಂಬಲವಿಲ್ಲ, ಸಭೆಯ ವೀಡಿಯೋ ಚಿತ್ರೀಕರಣ ಮಾಡಿ, ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಬೇಡಿ ಹೀಗೆ ಅನಗತ್ಯ ವಿಚಾರಗಳನ್ನು ಮುಂದಿಟ್ಟುಕೊಂಡು ಕೂಗಾಟ, ಗದ್ದಲ ಎಬ್ಬಿಸುತ್ತಾ ಯಾವ ವಿಷಯಗಳಿಗೂ ಒಪ್ಪಿಗೆ ನೀಡದೆ ಮುಂದೂಡುತ್ತಾ ಸಭೆಯಲ್ಲಿ ಕಾಲಹರಣ ಮಾಡಿ ಊಟಕ್ಕೆ ಎದ್ದುಹೋದರು.

ಅಧ್ಯಕ್ಷರೇ ನಾನ್‌ವೆಜ್ ಊಟ ಇಲ್ವೇನ್ರೀ..!

ಮೊದಲ ಸಭೆ ಮಾಡಿದ್ದೀರಿ. ನಾನ್‌ವೆಜ್ ಊಟ ಹಾಕಿಸ್ತೀರೋ ಇಲ್ಲವೋ ಎಂದು ಕೆಲವು ಸದಸ್ಯರು ಅಧ್ಯಕ್ಷ ನಾಗೇಶ್ ಕಾಲೆಳೆದರು. ಮೊದಲ ಸಭೆಯಾಗಿರುವುದರಿಂದ ವೆಜ್ ಊಟ. ಮುಂದೆ ಹಾಕಿಸೋಣ ಬನ್ನಿ ಎಂದು ನಾಗೇಶ್ ಹೇಳಿದಾಗ, ಕಾರ್ತೀಕ ಮಾಸ ಬರುತ್ತೆ. ನಾವು ತಿನ್ನೋದಿಲ್ವಲ್ಲ ಅಧ್ಯಕ್ಷರೇ ಎಂದು ಸದಸ್ಯೆ ಪೂರ್ಣಿಮಾ ಹೇಳಿದರು.

ಸದ್ಯಕ್ಕೆ ವೆಜ್ ಊಟ ಇದೆ. ಎಲ್ಲರೂ ಬಂದು ಊಟ ಮಾಡಿ. ಕಾರ್ತೀಕ ಮಾಸ ಮುಗಿದ ಮೇಲೆ ನಾನ್‌ವೆಜ್ ಊಟಕ್ಕೂ ವ್ಯವಸ್ಥೆ ಮಾಡೋಣ ಎನ್ನುತ್ತಾ ಸಭೆಯೊಳಗೆ ವೀರಾವೇಷದಿಂದ ಪರಸ್ಪರ ಕೂಗಾಡುತ್ತಾ, ಕಿರುಚಾಡುತ್ತಾ. ಏಕವಚನದಲ್ಲಿ ನಿಂದಿಸಿಕೊಳ್ಳುತ್ತಿದ್ದವರು. ಹೊರಗೆ ಬಂದು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು, ಹರಟುತ್ತಾ, ಒಬ್ಬರನ್ನೊಬ್ಬರು ತಮಾಷೆಯಾಗಿ ಕಾಲೆಳೆಯುತ್ತಾ ಮುನ್ನಡೆದರು. ಇದನ್ನು ಕಂಡು ನಗರದ ಜನರು ಏನೆಂದುಕೊಳ್ಳಬೇಕೆಂಬುದು ಅವರವರ ಭಾವಕ್ಕೆ.. ಅವರವರ ಭಕುತಿಗೆ.