ಸಾರಾಂಶ
ಭೀಮಣ್ಣ ಗಜಾಪುರ
ಕೂಡ್ಲಿಗಿ: ಭಿಕ್ಷೆಯಿಂದ ಬಂದ ಹಣವನ್ನು ನೊಂದವರ ಕಣ್ಣೀರು ಒರೆಸಲು, ಅಸಾಯಕರಿಗೆ ಆಸರೆಯಾಗಲು ಮೀಸಲಿಡುವ ಮೂಲಕ ಇಲ್ಲಿನ ಮಂಗಳಮುಖಿಯೊಬ್ಬರು ಮಾದರಿಯಾಗಿದ್ದಾರೆ.ಸಮೀಪದ ಮೊರಬ ಗ್ರಾಮದ 23 ವರ್ಷದ ಸ್ನೇಹಾ ಕಳೆದ ಮೂರು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಅವರ ಕಷ್ಟಗಳಲ್ಲಿ ಭಾಗಿಯಾಗಿ, ಅವರ ಬದುಕಿಗೆ ಭರವಸೆ ಮೂಡಿಸುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಈ ಮಂಗಳಮುಖಿ ಮಾಡಿದ ಕೆಲಸ ದಾಖಲು ಮಾಡಿದರೆ ಹನುಮನ ಬಾಲದಂತೆ ಉದ್ದದ ಪಟ್ಟಿಯೇ ಆಗುತ್ತದೆ.
ತಾನು ಪ್ರತಿನಿತ್ಯ ಭಿಕ್ಷೆ ಬೇಡಿ ಕೂಡಿಟ್ಟ ಹಣದಲ್ಲಿ ಇಲ್ಲಿಯವರೆಗೂ 25ಕ್ಕೂ ಹೆಚ್ಚು ಗ್ರಾಮೀಣ ಭಾಗದ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು, ಪೆನ್ ಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ಹತ್ತಾರು ಅನಾಥಾಶ್ರಮಗಳಿಗೆ ತೆರಳಿ ಅಲ್ಲಿಯ ಅನಾಥರಿಗೆ ಅನ್ನ, ಬಟ್ಟೆ, ಇತರೆ ಅಗತ್ಯ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿದ್ದಾರೆ.ಕೂಡ್ಲಿಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಾಟಕ ಪ್ರದರ್ಶನವಾದರೆ ಐದಾರು ಸಾವಿರ ಹಣ ನೀಡಿ ಕಲೆಗೆ ಪ್ರೋತ್ಸಾಹ ನೀಡುತ್ತಾಳೆ. ಕೂಡ್ಲಿಗಿ ಪಟ್ಟಣ ಸುತ್ತಮುತ್ತ ಯಾವುದೇ ಕ್ರೀಡೆಗಳು ನಡೆದರೆ ಸಾವಿರಾರು ರುಪಾಯಿ ಬಹುಮಾನ ನೀಡುವ ಮೂಲಕ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಕುಟುಂಬದೊಂದಿಗೆ ಜೀವನ:ಕೂಡ್ಲಿಗಿ ಸಮೀಪದ ಮೊರಬ ಗ್ರಾಮದ ಮೀಸೆ ಹುಲಿಕುಂಟೆಪ್ಪ-ಹನುಮಕ್ಕ ದಂಪತಿಗಳ 11 ಮಕ್ಕಳಲ್ಲಿ ಕೊನೆಯದಾಗಿ ಕಿರಣ್ ಹುಟ್ಟಿದ. ಓದಿದ್ದು ಕೇವಲ 8ನೇ ತರಗತಿ ಮಾತ್ರ. ಈ ಪೈಕಿ 8 ಸಹೋದರಿಯರು, ಉಳಿದಿಬ್ಬರು ಸಹೋದರರು. ಈಗ್ಗೆ 3 ವರ್ಷಗಳಿಂದ ಮುಂಗಳಮುಖಿಯಾಗಿ ಸ್ನೇಹಾ ಆಗಿ ಪರಿವರ್ತನೆಯಾಗಿದ್ದಾರೆ. ಸಮಾಜಮುಖಿಯಾಗಿ ರೂಪುಗೊಂಡಿದ್ದಾಳೆ. ತುಂಬು ಕುಟುಂಬದಲ್ಲಿಯೇ ವಾಸ ಮಾಡುತ್ತಿರುವ ಸ್ನೇಹಾ ಹುಟ್ಟಿನಿಂದಲೇ ಕಷ್ಟ, ಅಪಮಾನ, ಅವಮಾನಗಳನ್ನು ಎದುರಿಸಿ ಅದೇ ನೆಲದಲ್ಲಿಯೇ ಶಹಬ್ಬಾಸ್‌ಗಿರಿ ಪಡೆದಿದ್ದಾರೆ.
ಪ್ರತಿದಿನ ಕೂಡ್ಲಿಗಿ ಪಟ್ಟಣದ ಕೊಟ್ಟೂರು ರಸ್ತೆಯ ರಾ.ಹೆ.50ರ ಅಂಡರ್ ಪಾಸ್ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾರೆ. ಬೈಕ್, ಕಾರಿನವರು ನೀಡಿದ ₹5, ₹10 ಕೂಡಿಡುತ್ತಾರೆ. ಜನರು ಕೊಟ್ಟರೂ ಕೊಡದಿದ್ದರೂ ನಗುನಗುತಾ ಇರುತ್ತಾರೆ.ಪ್ರತಿನಿತ್ಯ ಭಿಕ್ಷೆ ಬೇಡಿದರೆ ಅಂದಾಜು ₹800- ₹1000 ಸಂಗ್ರಹವಾಗುತ್ತದೆ. ತಿಂಗಳಿಗೆ 25 ರಿಂದ 30 ಸಾವಿರ ಆಗುತ್ತದೆ. ಆ ಹಣವನ್ನು ಬಹುತೇಕ ಅನಾಥಾಶ್ರಮ, ವಿದ್ಯಾರ್ಥಿಗಳಿಗೆ ಪುಸ್ತಕ, ಕ್ರೀಡೆ, ವೃದ್ಧರಿಗೆ, ಜಾತ್ರೆ, ಉತ್ಸವಗಳಲ್ಲಿ ಅನ್ನ ಸಂತರ್ಪಣೆಗೆ ಖರ್ಚು ಮಾಡುವೆ. ನನ್ನ ಮೇಲೆ ಹಲವು ಬಾರಿ ಹಲ್ಲೆ ನಡೆದಿವೆ. ಆದರೂ ಧೈರ್ಯಗುಂದಿಲ್ಲ ಎನ್ನುತ್ತಾರೆ ಮಂಗಳಮುಖಿ ಸ್ನೇಹಾ.