ಅಂಕೋಲಾ ಬಳಿ ಟ್ರ್ಯಾಕ್‌ಮ್ಯಾನ್‌ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ

| Published : Oct 10 2024, 02:26 AM IST

ಅಂಕೋಲಾ ಬಳಿ ಟ್ರ್ಯಾಕ್‌ಮ್ಯಾನ್‌ ಸಮಯಪ್ರಜ್ಞೆಯಿಂದ ತಪ್ಪಿದ ರೈಲು ದುರಂತ
Share this Article
  • FB
  • TW
  • Linkdin
  • Email

ಸಾರಾಂಶ

ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳು ಹಾರವಾಡಕ್ಕೆ ಆಗಮಿಸಿ ರೈಲ್ವೆ ದುರಂತ ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಂಕೋಲಾ: ರೈಲು ಹಳಿಯ ಜಾಯಿಂಟ್ ತುಂಡಾದ ಕಾರಣ ಸಂಭವನೀಯ ದುರಂತವೊಂದು ರೈಲ್ವೆ ಟ್ರ್ಯಾಕ್‌ಮ್ಯಾನ್ ಅವರ ಸಮಯಪ್ರಜ್ಞೆಯಿಂದ ಮಂಗಳವಾರ ತಪ್ಪಿದ್ದು, ಇಲಾಖೆಯ ಸಿಬ್ಬಂದಿಯ ಕಾರ್ಯಕ್ಕೆ ಕೊಂಕಣ ರೈಲ್ವೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಾರವಾಡ ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಜಾಯಿಂಟ್ ತುಂಡಾಗಿತ್ತು. ರೈಲು ಸಂಚರಿಸಿದರೆ ಹಳಿ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಮಂಗಳವಾರ ಬೆಳಗಿನ ಜಾವ 4.50ರ ಸುಮಾರಿಗೆ ಹಾರವಾಡ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಹಳಿ ಪರೀಕ್ಷೆ ನಡೆಸುತ್ತಿದ್ದ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರಿಗೆ ರೈಲ್ವೆ ಹಳಿಯ ಜೋಡಣೆ ತುಂಡಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಸ್ಟೇಷನ್ ಮಾಸ್ಟರ್ ಅವರಿಗೆ ತಿಳಿಸಿದ್ದರಿಂದ ಇಲಾಖೆಯ ಅಧಿಕಾರಿಗಳು ಆ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ತಡೆಹಿಡಿದು ಹಳಿ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.

ಬೆಳಗಿನ ಜಾವದಲ್ಲಿ ಮಂಗಳೂರು ಮತ್ತು ಮುಂಬೈ ಕಡೆ ಈ ಭಾಗದಿಂದ ವೇಗದೂತ ರೈಲುಗಳ ಸಂಚಾರವಿದ್ದು, ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಟ್ರ್ಯಾಕ್ ಮ್ಯಾನ್ ಅವರ ಜಾಗರೂಕತೆಯ ಪರಿಶೀಲನೆ ಮತ್ತು ಸಮಯಪ್ರಜ್ಞೆಯಿಂದ ಅನಾಹುತ ಸಂಭವಿಸುವುದು ತಪ್ಪಿದೆ.

ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳು ಹಾರವಾಡಕ್ಕೆ ಆಗಮಿಸಿ ರೈಲ್ವೆ ದುರಂತ ತಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಟ್ರ್ಯಾಕ್ ಮ್ಯಾನ್ ಛತ್ರಪತಿ ಆನಂದು ಗೌಡ ಅವರನ್ನು ಸನ್ಮಾನಿಸಿ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿಡಿಲು ಬಡಿದು 6 ಮಂದಿ ಅಸ್ವಸ್ಥ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಕರ್ಕಿಸವಲಿನಲ್ಲಿ ಬುಧವಾರ ಸಿಡಿಲು ಬಡಿದು ೬ ಮಂದಿ ಅಸ್ವಸ್ಥರಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ಕಿಸವಲ್ ಗ್ರಾಮದ ವಿದ್ಯಾ ಭಾಸ್ಕರ ಚನ್ನಯ್ಯ(೧೪), ಸುನಂದ ತಿಮ್ಮ ಚನ್ನಯ್ಯ(೫೦), ಸುನೀತಾ ಗಣಪತಿ ಚನ್ನಯ್ಯ(೨೫), ವಿನಾಯಕ ಭಾಸ್ಕರ ಚನ್ನಯ್ಯ(೧೮), ಪ್ರೇಮಾ ಭಾಸ್ಕರ ಚನ್ನಯ್ಯ(೪೦), ವಿಹಾನ್ ಧನಂಜಯ ಚನ್ನಯ್ಯ(೧೧ ತಿಂಗಳು) ಸಿಡಿಲಿನ ಆಘಾತಕ್ಕೆ ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಕಂದಾಯ ಇಲಾಖೆಯ ಸಿಬ್ಬಂದಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅವರ ಮನೆಗೆ ಅಲ್ಪ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಆಸ್ಪತ್ರೆಗೆ ಭೇಟಿ ನೀಡಿ ಆಘಾತಗೊಂಡವರನ್ನು ಸಂತೈಸಿದ್ದಾರೆ.