ಸಾರಾಂಶ
ಮಾರುತಿ ಶಿಡ್ಲಾಪೂರಹಾನಗಲ್ಲ: ಹಣ್ಣುಗಳ ರಾಜ ಮಾವಿನ ಸುಗ್ಗಿ ಶುರುವಾಗಿದ್ದು, ಅದರಲ್ಲೂ ತಾಲೂಕಿನ ಮಾವಿಗೆ ಎಲ್ಲಿಲ್ಲದ ಬೇಡಿಕೆ. ವಿದೇಶಕ್ಕೂ ಇಲ್ಲಿನ ಮಾವು ರಫ್ತಾಗುತ್ತದೆ. ಬೆಳೆ, ಬೆಲೆ, ಬಿಸಿಲು, ಮಳೆ, ಇಬ್ಬನಿಗಳ ಏರಿಳಿತಗಳು ಕೂಡ ಬೆಳೆಗಾರರನ್ನು ಸಾಕಷ್ಟು ಕಾಡುತ್ತಿದ್ದು, ಹೀಗಾಗಿ ಹಲವು ರೈತರು ಮಾವು ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ತಾಲೂಕಿನಲ್ಲಿ 14662 ಹೆಕ್ಟೇರ್ ತೋಟಗಾರಿಕೆ ಭೂಮಿ ಇದೆ. 3500 ಹೆಕ್ಟೇರ್ ಮಾವು ಬೆಳೆ ಇದೆ. ಇದರಲ್ಲಿ 1500 ಹೆಕ್ಟೇರ್ ಪ್ರದೇಶದ ಮಾವು ತೆಗೆದು ಅಡಕೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳತ್ತ ರೈತರ ಚಿತ್ತ ಹರಿದಿದೆ.ಪ್ರತಿವರ್ಷ ಮಾವು ಬೆಳೆಗೆ ಮಳೆ ಚೆಲ್ಲಾಟವಾಡುತ್ತದೆ. ಹೂವು ಕಚ್ಟುವ ಸಂದರ್ಭದಲ್ಲಿ ಮಳೆ ಹಾಗೂ ಭಾರಿ ಇಬ್ಬನಿಯ ಕಾರಣದಿಂದಾಗಿ ಕಚ್ಚಿದ ಹೂವು ಕೆಟ್ಟು ಒಣಗಿ ಕರಕಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಮಾವು ಬೆಳೆಯ ಬಗೆಗೆ ಕೃಷಿಕರು ಅಸಮಾಧಾನಗೊಂಡಿದ್ದಾರೆ. ಆದರೆ ಈ ಬಾರಿ ಮಳೆ ಮತ್ತು ಇಬ್ಬನಿಯ ಕಾಟವಿಲ್ಲ. ಆದರೂ ಹೂವು ಬಿಡುವ ವೇಳೆ ಮಾವು ಮರಗಳು ಚಿಗುರಿ ಫಸಲಿನ ಇಳುವರಿ ಅರ್ಧಕ್ಕಿಂತ ಕಡಿಮೆಯಾಗಿದೆ.ವಿದೇಶದಲ್ಲೂ ಹೆಸರುವಾಸಿ: ದೇಶ- ವಿದೇಶಗಳಿಗೆ ಇಲ್ಲಿನ ಮಾವು ರಫ್ತಾಗುತ್ತದೆ. ಮುಖ್ಯವಾಗಿ ಸೌದಿ ರಾಷ್ಟ್ರಗಳು, ಜಪಾನ್, ಆಫ್ರಿಕನ್ ದೇಶಗಳು, ಇರಾನ್ ಸೇರಿದಂತೆ ಹತ್ತಾರು ದೇಶಗಳಿಗೆ ರವಾನೆಯಾಗುತ್ತದೆ. ಬಹುತೇಕ ಮಾವು ಮುಂಬೈ ಮಾರುಕಟ್ಟೆ ತಲುಪುತ್ತದೆ. ಅಫೂಸ್, ಪೈರಿ, ರತ್ನಾ, ತೋತಾಪುರಿ, ಬೆನಿಷಾ, ನಾಟಿ, ಮಲ್ಲಿಕಾ, ಸಿಂಧೂಲಾ ತಳಿಗಳು ಇಲ್ಲಿ ಹೆಚ್ಚು ಹೆಸರು ಮಾಡಿವೆ. ಆದರೆ ಇಲ್ಲಿರುವುದು ಬಹುಪಾಲು ಆಪೂಸು ತಳಿ. ತಾಲೂಕು ಹಣ್ಣಿನ ಬೆಳೆಗಳಿಗೆ ಹೆಚ್ಚು ಫಲವತ್ತಾದ ಹಾಗೂ ಹಣ್ಣಿಗೆ ರುಚಿ ಕೊಡುವ ಭೂಪ್ರದೇಶ ಹೊಂದಿದೆ.ಶೇ. 60ರಷ್ಟು ಬೆಳೆಯ ಕೊರತೆ: ಈ ಬಾರಿ ಸ್ವಲ್ಪ ತಡವಾಗಿಯೇ ಮಾವು ಮಾರುಕಟ್ಟೆಗಳು ತೆರೆದಿವೆ. ಶೇ. 60ರಷ್ಟು ಬೆಳೆಯ ಕೊರತೆ ಇದೆ. ಒಂದು ಕೆಜಿಗೆ ₹40ರಿಂದ ₹75ರ ವರೆಗೆ ಮಾರಾಟವಾಗುತ್ತಿದೆ. ಇದೆಲ್ಲವೂ ರಫ್ತಾಗುವ ಹಣ್ಣಿನ ಬೆಲೆ. ಆದರೆ ಜ್ಯೂಸ್ ಕಾರ್ಖಾನೆಗಳಿಗೆ ಕಳಿಸುವ ಕೊನೆಯ ಹಂತದ ಮಾವು ಕೆಜಿಗೆ ₹30ರಿಂದ ₹35 ಮಾತ್ರ ಬೆಲೆ ಇದೆ. ಇದು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ರಾಜ್ಯಗಳಿಗೆ ರವಾನೆ ಮಾಡಲಾಗುತ್ತದೆ. ಈ ಬಾರಿ ಬೆಳೆ ಬೆಲೆ ಎರಡರಲ್ಲಿಯೂ ರೈತರಿಗೆ ಲಾಭವಿಲ್ಲ. ನೂರಾರು ಎಕರೆ ಮಾವು ತೆಗೆದು ಈಗ ರೈತರು ಅಡಕೆ ಬೆಳೆಯತ್ತ ಮನಸ್ಸು ಮಾಡಿದ್ದಾರೆ. ಆದರೆ ಒಳ್ಳೆಯ ಕಾಳಜಿ ಮಾಡಿದರೆ, ಔಷಧೋಪಚಾರಕ್ಕೆ ಅವಕಾಶ ಕೊಟ್ಟರೆ ಮಾವು ಒಳ್ಳೆಯ ಫಲ ನೀಡಬಲ್ಲದು ಎನ್ನಲಾಗುತ್ತಿದೆ.50 ವರ್ಷದ ಮಂಡಿ: ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ಮಾವು ಮಾರಾಟದ ಮಂಡಿ ಆರಂಭಿಸಿದ ಶಿರಸಿ ಮೂಲದ ಅಬ್ದುಲ್ ಕರೀಂಸಾಬ್ ರೈತರಿಂದಲೇ ನೇರವಾಗಿ ಮಾವು ಖರೀದಿಸಲು ಆರಂಭ ಮಾಡಿದ ಮೇಲೆ ಒಂದಷ್ಟು ಬೆಳೆಗಾರರಿಗೆ ಅನುಕೂಲ ಆಗಿದೆ. ಆದರೆ ಈಗ ತಾಲೂಕಿನಲ್ಲಿ ಹತ್ತಾರು ಕಡೆಗೆ ಮಾವು ಖರೀದಿಸುವ ಮಂಡಿಗಳಿವೆ. ಇಲ್ಲೀಗ ಹರಾಜು ರೂಪದಲ್ಲಿ ಮಾವು ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಸಾವಿರಾರು ರೈತರು, ನೂರಾರು ವ್ಯಾಪಾರಸ್ಥರು ಇಲ್ಲಿ ಮಾವು ವ್ಯಾಪಾರದಲ್ಲಿ ಪಾಲ್ಗೊಳ್ಳುತ್ತಾರೆ.ಸಂಸ್ಕರಣ ಘಟಕ: ತಾಲೂಕಿನ ಯಳವಟ್ಟಿಯಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆಗೆ ಮುಂದಾದ ಸರ್ಕಾರ ನಂತರದಲ್ಲಿ ಈ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ. ಈಗಾಗಲೇ ಈ ಘಟಕ ಆರಂಭವಾಗಿದ್ದರೆ ರೈತರ ಮಾವು ಹೆಚ್ಚು ಬೆಲೆಗೆ ಮಾರಲು ಸಾಧ್ಯವಾಗುತ್ತಿತ್ತು. ಮಾವು ಬೆಳೆಯುವ ಉಮೇದಿ ಕಡಿಮೆಯಾಗಿದೆ. ಪರಿಶ್ರಮಕ್ಕೆ ತಕ್ಕ ಫಲ ಇಲ್ಲ ಎಂಬ ಕಾರಣಕ್ಕಾಗಿ ಮಾವು ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ನಷ್ಟದ ಹಾದಿ:ಮಾವು ಫಸಲನ್ನು ಲಾವಣಿ ಹಿಡಿದುಕೊಂಡು ಮುಂಗಡ ಹಣ ಕೊಟ್ಟು ಕಾಯುತ್ತಿರುತ್ತೇವೆ. ಆದರೆ ಮಳೆ ಹಾಗೂ ಇಬ್ಬನಿಯ ಪರಿಣಾಮ ಹಾಗೂ ಗಾಳಿಯಿಂದಾಗಿ ಫಸಲು ಕೈ ಕೊಡುವ ಸಂದರ್ಭಗಳೇ ಹೆಚ್ಚಾಗಿವೆ. ನಿರ್ದಿಷ್ಟ ಬೆಲೆ ಇರದೇ ಇರುವುದರಿಂದ ತೋಟ ಹಿಡಿದವರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿಯೇ ರೈತರು ಮತ್ತು ದಲ್ಲಾಳಿಗಳಿಬ್ಬರು ನಷ್ಟದ ಹಾದಿಯಲ್ಲಿದ್ದೇವೆ ಎಂದು ಮಾವು ತೋಟ ಖರೀದಿದಾರ ಅಬ್ದುಲ್‌ಸುಕೂರ ಬಾಳೂರ ತಿಳಿಸಿದರು.ಅನಿವಾರ್ಯ: ಇಲ್ಲಿ ಮಾವಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲವೂ ಪಾರದರ್ಶಕವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಪೈಪೋಟಿಯ ಬೆಲೆ ಸಿಗುತ್ತದೆ. ಮಾವು ಪ್ರತಿವರ್ಷವೂ ಒಂದೊಂದು ರೀತಿಯ ಸಮಸ್ಯೆಗೆ ಒಳಗಾಗುತ್ತದೆ. ಸಂದರ್ಭಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ ಎಂದು ಎಚ್‌ಕೆಎಚ್ ಮಂಡಿಯ ಮಾಲೀಕ ಅಬ್ದುಲ್ ಕರೀಂಸಾಬ(ಚಾಚಾ) ತಿಳಿಸಿದರು.