ದೀಪಾವಳಿಗೆ ಮನೆ ಮನೆಗೆ ಮಾಂಕಾಳಿ!

| Published : Nov 14 2023, 01:15 AM IST

ಸಾರಾಂಶ

ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಹಾಗೂ ಆತನ ಜೊತೆ ತೆಂಬರೆ ಬಡಿಯುತ್ತಾ ಅಡಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತ ಕುಣಿಯುತ್ತಾ ಮನೆಮನೆಗೆ ತೆರಳುತ್ತಾರೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ತುಳುನಾಡಿನಲ್ಲಿ ಪ್ರತಿಯೊಂದು ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಜತೆಗೆ ಹಬ್ಬವು ಊರಿಂದ ಊರಿಗೆ ಬೇರೆ ಬೇರೆ ರೀತಿಯಲ್ಲಿ ಆಚರಿಸಲಾಗುತ್ತದೆ. ಕಾಸರಗೋಡು, ಬಂಟ್ವಾಳ, ಪುತ್ತೂರು ಭಾಗಗಳಲ್ಲಿ ಆಟಿಕಳೆಂಜ ರೀತಿಯಲ್ಲೇ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಮಾಂಕಾಳಿ ಕುಣಿತ ಚಾಲ್ತಿಯಲ್ಲಿದೆ. ಈ ಮಾಂಕಾಳಿ ಕುಣಿತವು ದೀಪಾವಳಿ ಸಂದರ್ಭ ಕಂಡು ಬರುತ್ತದೆ.ಆಚರಣೆ ಹೇಗೆ?ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಹಾಗೂ ಆತನ ಜೊತೆ ತೆಂಬರೆ ಬಡಿಯುತ್ತಾ ಅಡಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತ ಕುಣಿಯುತ್ತಾ ಮನೆಮನೆಗೆ ತೆರಳುತ್ತಾರೆ. ದೀಪಾವಳಿ ಸಂದರ್ಭ ಪಾಡ್ಯದಿಂದ ಮಾಂಕಾಳಿ ಕುಣಿತ ಆರಂಭವಾಗುತ್ತದೆ. ಗ್ರಾಮದ ಗುತ್ತಿನ ಮನೆಯಲ್ಲಿ ಆರಂಭಗೊಂಡು ಊರಿನಾದ್ಯಂತ ಸಂಚಾರ ನಡೆಯುತ್ತದೆ.ಹೀಗೆ ಮನೆಮನೆಗೆ ಬಂದ ಇವರಿಗೆ ಹಣ ನೀಡುವ ವಾಡಿಕೆಯಿಲ್ಲ, ಬದಲಿಗೆ ಕುಚ್ಚಲಕ್ಕಿ, ಎಣ್ಣೆ, ಉಪ್ಪು, ಮೆಣಸು, ದೋಸೆ ನೀಡಲಾಗುತ್ತದೆ.

ಈ ಮುಖವಾಡದಲ್ಲಿ ಕಣ್ಣು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಹೋಲುತ್ತದೆ. ತೆಂಬರೆ ಬಡಿಯುತ್ತಾ ಲಯವಾದ ತುಳುಭಾಷೆಯ ಹಾಡನ್ನು ಹಾಡುತ್ತಾ ಊರಿಗೆ ಅಂಟಿಕೊಳ್ಳುವ ರೋಗಗಳನ್ನು ಹೋಗಲಾಡಿಸಲು ಪ್ರಾರ್ಥಿಸುತ್ತಾರೆ.ನರ್ತಕ ಮುಖವಾಡವನ್ನಿಟ್ಟು ನರ್ತಿಸುತ್ತಾನೆ‌. ಘಟ್ಟದಿಂದ ಇಳಿದು ಮಾಂಕಾಳಿ ಬಂದು ಊರನ್ನು ರೋಗರುಜಿನಗಳಿಂದ ಮುಕ್ತಿಗೊಳಿಸುತ್ತಾಳೆ ಎಂಬುದು ಜನಪದದ ಪ್ರತೀತಿ.

ಈ ಸಂಪ್ರದಾಯ ಕಾರ್ಕಳ ತಾಲೂಕಿನ ಇರ್ವತ್ತೂರು, ರೆಂಜಾಳ, ನಿಟ್ಟೆ, ಶಿರ್ಲಾಲು, ಕೆರುವಾಶೆ, ಹೆಬ್ರಿ ತಾಲೂಕಿನ ಅಂಡಾರು ಗ್ರಾಮಗಳಲ್ಲಿ ಕಾಣಸಿಗುತ್ತದೆ.

ಕಾರ್ಕಳ ತಾಲೂಕಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆರುವಾಶೆಯ ಉಗ್ಗಪ್ಪ ಪರವ ಅವರ ಮಾರ್ಗದರ್ಶನದಲ್ಲಿ 15ಕ್ಕೂ ಹೆಚ್ಚು ತಂಡಗಳು ಕಾರ್ಕಳ, ಹೆಬ್ರಿ ತಾಲೂಕಿನಾದ್ಯಂತ ಸಂಚರಿಸುತ್ತವೆ. ಕಳೆದ ನಲವತ್ತು ವರ್ಷಗಳಿಂದ ಈ ಮಾಂಕಾಳಿ ಕುಣಿತವನ್ನು ಉಳಿಸಿಕೊಂಡು ಬರುತ್ತಿದ್ದಾರೆ.

ಕಾಲಚಕ್ರ ಕಳೆದಂತೆ ನಮ್ಮ ಸಂಸ್ಕೃತಿಯು ಅಳಿಯುತ್ತಾ ಸಾಗುತ್ತಿದೆ. ಆದರೂ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ನಾವು ಮಾಡುತಿದ್ದೇವೆ. ಮಾಂಕಾಳಿ ರೋಗರುಜಿನಗಳಿಂದ ಕಾಪಾಡುತ್ತಾಳೆ ಎನ್ನುವ ನಂಬಿಕೆ ನಮ್ಮ ತುಳುನಾಡಿನಲ್ಲಿದೆ.

। ಉಗ್ಗಪ್ಪ ಕೆರುವಾಶೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.--------

ಗುತ್ತಿನ‌ ಮನೆಗಳಿಂದಲೇ ಮಾಂಕಾಳಿ ಕುಣಿತ ಅರಂಭವಾಗಿ‌ ಊರಿನಾದ್ಯಂತ ಮನೆಮನೆಗೆ ಸಾಗುತ್ತಾರೆ. ಈ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಹಳೆಯ ತಲೆಮಾರು ಉಳಿಸಿಕೊಂಡು ಬರುತ್ತಿದೆ. ಈಗ ಎಲ್ಲೆಡೆ ಕಾಣಲು ಸಿಗುತ್ತಿಲ್ಲ.। ಕೃಷ್ಣ ಶೆಟ್ಟಿ, ಕೊರಂಟಬೆಟ್ಟು ಗುತ್ತಿನ‌ಮನೆ ಅಂಡಾರು