ಕೊಪ್ಪಳ ಜಿಲ್ಲೆ ಆನೆಗುಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜಾ ಹಕ್ಕು ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಬೆಂಗಳೂರಿನ ಉತ್ತರಾದಿ ಮಠದ ನಡುವೆ ದಶಕಗಳಿಂದ (ಸುಮಾರು 7 ದಶಕಗಳು) ನಡೆಯುತ್ತಿದ್ದ ಸುದೀರ್ಘ ಕಾನೂನು ಸಮರ ಸುಖಾಂತ್ಯ ಕಂಡಿದೆ.
ಕನ್ನಡಪ್ರಭ ವಾರ್ತೆ ನವದೆಹಲಿಕೊಪ್ಪಳ ಜಿಲ್ಲೆ ಆನೆಗುಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜಾ ಹಕ್ಕು ಹಾಗೂ ಆಡಳಿತಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಬೆಂಗಳೂರಿನ ಉತ್ತರಾದಿ ಮಠದ ನಡುವೆ ದಶಕಗಳಿಂದ (ಸುಮಾರು 7 ದಶಕಗಳು) ನಡೆಯುತ್ತಿದ್ದ ಸುದೀರ್ಘ ಕಾನೂನು ಸಮರ ಸುಖಾಂತ್ಯ ಕಂಡಿದೆ.ಸುಪ್ರೀಂಕೋರ್ಟ್ ನ್ಯಾ.ಎಂ.ಎಂ.ಸುಂದರೇಶ್ ನೇತೃತ್ವದ ಪೀಠದಲ್ಲಿ ಈ ಸಂಬಂಧದ ವಿವಾದ ಇತ್ಯರ್ಥವಾಗಿದ್ದು, ವಿವಾದಕ್ಕೆ ಸುಪ್ರೀಂಕೋರ್ಟ್ ಅಂತಿಮ ತೆರೆ ಎಳೆದಿದೆ.
ನವವೃಂದಾವನ ಗಡ್ಡೆಯಲ್ಲಿ ಪದ್ಮನಾಭ ತೀರ್ಥರ ಆರಾಧನೆ ಮತ್ತು ಪೂಜಾ ಹಕ್ಕಿನ ಕುರಿತು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾದಿ ಮಠದ ನಡುವೆ ದೀರ್ಘಕಾಲದವರೆಗೆ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆಯುತ್ತಿತ್ತು. 2025ರ ಮಾರ್ಚ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ಅವರನ್ನು ವಿವಾದ ಪರಿಹಾರಕ್ಕಾಗಿ ಮಧ್ಯಸ್ಥಗಾರರನ್ನಾಗಿ ನೇಮಿಸಿ, ಆದೇಶಿಸಿತ್ತು. ಬಳಿಕ, ಕೌಲ್ ಅವರ ಮಧ್ಯಸ್ಥಿಕೆಯಲ್ಲಿ ಉತ್ತರಾದಿ ಮಠದ ಸತ್ಯಾತ್ಮ ತೀರ್ಥರು ಮತ್ತು ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥರು ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಈ ಸಂಬಂಧ 2026ರ ಜನವರಿ 3ರ ಒಪ್ಪಂದ ಮತ್ತು 2026ರ ಏಪ್ರಿಲ್ 13ರ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು.ಈ ಸಂಬಂಧದ ದಾಖಲೆಯನ್ನು ಕಕ್ಷಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿ, ಮಧ್ಯಸ್ಥಿಕೆದಾರರ ಪ್ರಯತ್ನದಿಂದ ಮಠಗಳ ನಡುವೆ ವಿವಾದ ಇತ್ಯರ್ಥ ಆಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದರ ಆಧಾರದ ಮೇಲೆ ಎರಡೂ ಮಠಗಳ ನಡುವಿನ ಕಾನೂನು ಹೋರಾಟ ವಿಲೇವಾರಿ ಆಗಿದೆ ಎಂದು ನ್ಯಾಯಪೀಠ ತಿಳಿಸಿದೆ. ಈ ಐತಿಹಾಸಿಕ ಸಂಧಾನದೊಂದಿಗೆ ದಶಕಗಳ ಭಕ್ತರ ನಿರೀಕ್ಷೆಯಂತೆ ಮಠಗಳ ನಡುವಿನ ಮಧುರ ಬಾಂಧವ್ಯ ಪುನಃಸ್ಥಾಪನೆಯಾದಂತಾಗಿದೆ.ಉಭಯ ಮಠಗಳಿಂದ ಆರಾಧನೆ:ಒಪ್ಪಂದದ ನಂತರ, ಎರಡೂ ಮಠಗಳು ಮಾಧ್ವ ಪರಂಪರೆಯ ಪ್ರಚಾರಕ್ಕಾಗಿ ಜಂಟಿಯಾಗಿ ಕೆಲಸ ಮಾಡಲು ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ನಿರ್ಧರಿಸಿವೆ. ಇನ್ನು ಮುಂದೆ ನವವೃಂದಾವನ ಗಡ್ಡೆಯಲ್ಲಿರುವ ಪದ್ಮನಾಭತೀರ್ಥರ ಆರಾಧನೆಯನ್ನು ಉಭಯ ಮಠದವರು ಸರದಿಯ ಮೇಲೆ ನಡೆಸಲಿದ್ದಾರೆ. ಬಾಕಿ ಉಳಿದಿರುವ ಇತರ ವ್ಯಾಜ್ಯ-ವಿವಾದಗಳನ್ನು ಕೂಡ ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ.
ನವವೃಂದಾವನದಲ್ಲಿರುವ ಮೂವರು ಯತಿಗಳ ವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನೆ ನವೆಂಬರ್‌ನಲ್ಲಿ, ಕವೀಂದ್ರ ತೀರ್ಥರು ಹಾಗೂ ವಾಗೀಶ ತೀರ್ಥರ ಆರಾಧನೆ ಏಪ್ರಿಲ್‌ನಲ್ಲಿ ಬರಲಿದೆ. ಪದ್ಮನಾಭ ತೀರ್ಥರ ಆರಾಧನೆಯನ್ನು ಸರದಿ ಆಧಾರದಲ್ಲಿ ಒಂದೊಂದು ವರ್ಷ ಉಭಯ ಮಠಗಳು ನಡೆಸಲಿವೆ. ಇನ್ನಿಬ್ಬರ ಆರಾಧನೆಯನ್ನು ಒಂದೊಂದು ಮಠದಿಂದ ಒಂದು ವರ್ಷ ನಡೆಸಲಾಗುತ್ತದೆ. ಉಭಯ ಮಠಗಳ ಭಕ್ತರು, ಪ್ರಮುಖರು ಆಯಾ ಆರಾಧನೆ ಆಚರಣೆ ವೇಳೆ ಮಠಕ್ಕೆ ಆಗಮಿಸಲಿದ್ದಾರೆ.