ಸಾರಾಂಶ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಹಕ್ಕೊತ್ತಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮೋಟೆಬೆನ್ನೂರ ಬಳಿ ಡಿ.11ರಂದು ಮುಂಜಾನೆ 9ಕ್ಕೆ ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪಕ್ಷಾತೀತವಾದ, ವಿನೂತನ ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸುವಂತೆ ಹಕ್ಕೊತ್ತಾಯಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮೋಟೆಬೆನ್ನೂರ ಬಳಿ ಡಿ.11ರಂದು ಮುಂಜಾನೆ 9ಕ್ಕೆ ರಾಷ್ಟ್ರೀಯ ಹೆದ್ದಾರಿ ತಡೆದು ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪಕ್ಷಾತೀತವಾದ, ವಿನೂತನ ಬೃಹತ್ ಪ್ರತಿಭಟನೆ ಕೈಗೊಳ್ಳುವುದಾಗಿ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.ನಗರದ ಉನ್ನತಿ ಕಾಲೇಜಿನಲ್ಲಿ ಬುಧವಾರ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಸುಮಾರು ವರ್ಷಗಳಿಂದ ಈ ಮೀಸಲು ವಿಚಾರವಾಗಿ ಹೋರಾಟ ನಡೆಯುತ್ತಿದೆ. ಸಮಾಜಕ್ಕೆ 2ಎ ಮೀಸಲಾತಿ ದೊರಕುವವರೆಗೂ ವೈವಿಧ್ಯಮಯ ಹೋರಾಟ ಅನಿವಾರ್ಯವಾಗಿದೆ. ಪಕ್ಷಾತೀತವಾಗಿ ನಿರಂತರವಾಗಿ ಈ ಬೃಹತ್ ಹೋರಾಟ ಮಾಡಲಾಗುವುದು ಎಂದರು.
ವೀರಶೈವ ಸಮಾಜದ ಹಿರಿಯ ಮುಖಂಡ ಶಾಮನೂರ ಶಿವಶಂಕರಪ್ಪನವರು ಜಾತಿ ಗಣತಿ ವರದಿ ಜಾರಿ ಮಾಡಬಾರದು ಎಂದು ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವುದು ಸರಿಯಿದೆ. ಜಾತಿ ಗಣತಿಯನ್ನು ಸಮಾಜದವರಾದ ನಾವುಗಳು ವಿರೋಧಿಸುವುದಿಲ್ಲ. ಆದರೆ ಅದನ್ನು ವೈಜ್ಞಾನಿಕವಾಗಿ, ಪ್ರಾಮಾಣಿಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಮಾಡಬೇಕೆಂಬುದು ಸಮಾಜದ ಕಳಕಳಿಯಾಗಿದೆ. ಸರಿಯಾದ ಜಾತಿಗಣತಿ ಆಗಿಲ್ಲವೆಂಬ ಆರೋಪಗಳು ಸಮಾಜದವರಿಂದ ಕೇಳಿ ಬರುತ್ತಿದ್ದು, ಈ ಬಗ್ಗೆ ಸರ್ಕಾರವು ಮರು ಪರಿಶೀಲಿಸಿ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಶ್ರೀಗಳು ಒತ್ತಾಯಿಸಿದರು.ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಗಂಗಾಧರ ಬೂದನೂರ, ನಿಂಗಣ್ಣ ಚಳಗೇರಿ, ಭಾರತಿ ಜಂಬಗಿ, ಕಸ್ತೂರಿ ಚಿಕ್ಕಬಿದರಿ, ಸಿದ್ದಣ್ಣ ಚಿಕ್ಕಬಿದರಿ, ಪ್ರಮೀಳಾ ಜಂಬಗಿ, ಮಹೇಶ್ವರಗೌಡ ಪಾಟೀಲ, ರಮೇಶ ಹಲಗೇರಿ ಮತ್ತಿತರರಿದ್ದರು.