ಸಾರಾಂಶ
ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಉಚಿತ ಸಾಮೂಹಿಕ ವಿವಾಹಗಳು ಸಹಕಾರಿಯಾಗಲಿವೆ. ಜೀವನದಲ್ಲಿ ಎದುರಾಗುವ ಏರುಪೇರುಗಳನ್ನು ಎದುರಿಸುವ ಜತೆಗೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಮಾದರಿ ಜೀವನ ನಡೆಸಬೇಕು.
ಹೊಸಪೇಟೆ: ತಾಲೂಕಿನ ಕಾಕುಬಾಳು ಗ್ರಾಮದ ಜಡೆಶಿವಯೋಗಿಶ್ವರ ಮಠದ ರಥೋತ್ಸವದ ಅಂಗವಾಗಿ ಗ್ರಾಮದಲ್ಲಿ ಭಾನುವಾರ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಜರುಗಿತು.
೧೭ ಜೋಡಿ ನವ ವಧುವರರು, ನವ ದಾಂಪತ್ಯಕ್ಕೆ ಅಡಿ ಇಟ್ಟರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಮಹೋತ್ಸವಗಳು ಬಡ- ಮಧ್ಯಮ ವರ್ಗದ ಜನರ ಪಾಲಿಗೆ ವರದಾನವಾಗಿವೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಉಚಿತ ಸಾಮೂಹಿಕ ವಿವಾಹಗಳು ಸಹಕಾರಿಯಾಗಲಿವೆ. ಜೀವನದಲ್ಲಿ ಎದುರಾಗುವ ಏರುಪೇರುಗಳನ್ನು ಎದುರಿಸುವ ಜತೆಗೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಮಾದರಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ಜಡೆಶಿವಯೋಗಿಶ್ವರ ಮಠದ ಅಧ್ಯಕ್ಷ ಎಚ್.ಎಂ. ಷಡಾಕ್ಷರಯ್ಯ ಸ್ವಾಮಿಜಿ ಆಶೀರ್ವಚನ ನೀಡಿದರು. ಗ್ರಾಮದ ರಾಜಾಪುರದ ಚಂದ್ರಶೇಖರಪ್ಪ, ನವ ವಧುವವರಿಗೆ ಮಾಂಗಲ್ಯ ಹಾಗೂ ವಸ್ತ್ರಗಳನ್ನು ದಾನವಾಗಿ ನೀಡಿದರು. ಅನ್ನದಾಸೋಹ ಸೇವೆಯನ್ನು ರಾಜಾಪುರದ ಮಲ್ಲಿಕಾರ್ಜುನ ದಂಪತಿ ನೆರವೇರಿಸಿದರು. ಹೊಸಪೇಟೆ ಹಾಗೂ ಸಂಡೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.