ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ , ಡಿಸ್ಟಿಲರಿ ಘಟಕ ಸ್ಥಾಪನೆಗೆ ಭಾರೀ ವಿರೋಧ

| Published : Mar 07 2024, 01:48 AM IST

ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ , ಡಿಸ್ಟಿಲರಿ ಘಟಕ ಸ್ಥಾಪನೆಗೆ ಭಾರೀ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿಗಳು ನೂತನ ಘಟಕಗಳ ಆರಂಭದ ಪರ ಮಾತನಾಡುವಂತೆ ಹತ್ತಾರು ಸಲ ಮೈಕ್ ಮೂಲಕ ಆಹ್ವಾನಿಸದರೂ ಯಾರೊಬ್ಬರೂ ವೇದಿಕೆಯಲ್ಲಿ ನಿಂತು ಮಾತಾಡಲಿಲ್ಲ. ಅಂತಿಮವಾಗಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಸಾರ್ವಜನಿಕರ ಪೂರ್ಣ ವಿರೋಧ ಇರುವುದು ಕಂಡು ಬಂದಿದೆ. ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿ ಜಿಲ್ಲಾಧಿಕಾರಿಗಳು ಸಭೆ ಅಂತ್ಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆ ಸಂಬಂಧ ಬುಧವಾರ ನಡೆದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದರು.

ತಾಲೂಕಿನ ಮಾಕವಳ್ಳಿಯ ಕಾರ್ಖಾನೆಯಲ್ಲಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಬಹುತೇಕ ಸಾರ್ವಜನಿಕರ ವಿರೋಧ ಕಂಡು ಬಂತು. ಜನರ ಹೇಳಿಕೆ ದಾಖಲಿಸಿಕೊಂಡ ಜಿಲ್ಲಾಧಿಕಾರಿ ಡಾ.ಕುಮಾರ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಖಾನೆ ಒಳಾಂಗಣದಲ್ಲಿ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿರೋಧ ವ್ಯಕ್ತಪಡಿಸುವವರನ್ನು ಪೊಲೀಸರು ಒಳಗೆ ಬಿಡದೆ ಕಾರ್ಖಾನೆ ಗೇಟುಗಳನ್ನು ಭದ್ರಪಡಿಸಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಎಲ್ಲರನ್ನೂ ಒಳಗೆ ಬಿಡುವಂತೆ ಸೂಚಿಸಿದರು.

ಈ ವೇಳೆ ಹೇಮಾವತಿ ನದಿ ಉಳಿಸಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕಗಳಿಂದ ನಮ್ಮ ಬದುಕು ಸರ್ವನಾಶ ಎಂದು ರೈತಸಂಘ ಮತ್ತು ಪರಿಸರವಾದಿಗಳು ಘೋಷಣೆ ಕೂಗಲು ಆರಂಭಿಸಿದರು. ಹೇಮಾವತಿ ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ಈಗಾಗಲೇ ಪರಿಸರ ಇಲಾಖೆ ವರದಿ ನೀಡಿದೆ. ಕಾರ್ಖಾನೆಯವರು ನೂತನ ಘಟಕಗಳನ್ನು ಆರಂಭಿಸಿದರೆ ಹೇಮಾವತಿ ಬಯಲಿನ ಜನರ ಬದುಕು ಸಂಪೂರ್ಣ ನಾಶವಾಗಲಿದೆ ಎಂದು ಎಚ್ಚರಿಸಿದರು.

ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಪರಿಸರಕ್ಕೆ ವಿರುದ್ಧವಾದ ನೂತನ ಘಕಟಗಳ ಸ್ಥಾಪನೆಗೆ ನಮ್ಮ ವಿರೋಧವಿದೆ. ಕಾರ್ಖಾನೆ ರೈತರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಕಳೆದ ಒಂದು ದಶಕದ ಹಿಂದೆಯೇ ಜನಭಿಪ್ರಾಯ ಸಭೆ ನಡೆದಿದೆ. ಮತ್ತೆ ಜನಾಭಿಪ್ರಾಯ ಸಭೆ ನಡೆಸುವ ಅಗತ್ಯವಿಲ್ಲ. ಈ ಸಭೆಯನ್ನು ರದ್ದುಪಡಿಸುವಂತೆ ಸ್ಥಳದಲ್ಲಿದ್ದ ನೂರಾರು ಮಹಿಳೆಯರೂ ಸೇರಿದಂತೆ ಅಪಾರ ಸಂಖ್ಯೆ ಜನ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ, ನಿಯಮಾನುಸಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಾನು ಸರ್ಕಾರಕ್ಕೆ ವರದಿ ಕೊಡಬೇಕು. ನೀವುಗಳು ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಬೇಡ ಎಂದರೆ ನಾನು ಅದರಂತೆಯೇ ವರದಿ ಮಾಡುತ್ತೇನೆ ಎಂದರು.

ಸಭೆಯಲ್ಲಿ ಬಹುತೇಕರು ಕಾರ್ಖಾನೆ ನೂತನ ಘಕಟಗಳ ಆರಂಭಕ್ಕೆ ತಮ್ಮ ವಿರೋಧವನ್ನು ದಾಖಲಿಸಿದರು. ಜಿಲ್ಲಾಧಿಕಾರಿಗಳು ನೂತನ ಘಟಕಗಳ ಆರಂಭದ ಪರ ಮಾತನಾಡುವಂತೆ ಹತ್ತಾರು ಸಲ ಮೈಕ್ ಮೂಲಕ ಆಹ್ವಾನಿಸದರೂ ಯಾರೊಬ್ಬರೂ ವೇದಿಕೆಯಲ್ಲಿ ನಿಂತು ಮಾತಾಡಲಿಲ್ಲ.

ಅಂತಿಮವಾಗಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಸಾರ್ವಜನಿಕರ ಪೂರ್ಣ ವಿರೋಧ ಇರುವುದು ಕಂಡು ಬಂದಿದೆ. ಈ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಘೋಷಿಸಿ ಜಿಲ್ಲಾಧಿಕಾರಿಗಳು ಸಭೆಯನ್ನು ಅಂತ್ಯಗೊಳಿಸಿದರು.

ಜಿಲ್ಲಾಧಿಕಾರಿಗಳು ಸಭೆ ಹೊರ ಬರುತ್ತಿದ್ದಂತೆಯೇ ಕೆಲವರು ಕಾರ್ಖಾನೆ ಪರ ಮಾತನಾಡಲು ನಾವು ಬಂದಿದ್ದೇವೆ. ನಮಗೆ ಅವಕಾಶ ಕೊಡಿ ಎಂದು ಲಿಖಿತ ಮನವಿ ನೀಡಲು ಮುಂದಾದರು. ಈ ವೇಳೆ ಆಕ್ಷೇಪ ವ್ಯಕ್ತವಾಗಿ ತಳ್ಳಾಟ ನೂಕಾಟ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ಎಲ್ಲವನ್ನೂ ನಿಯಂತ್ರಸಿದರು. ಬಹಿರಂಗ ಸಭೆಯಲ್ಲಿ ಕೈಗೊಂಡ ನಿರ್ಣಯವೇ ಅಂತಿಮ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಪ್ರತಿಭಟನೆ ಗದ್ದಲ ತಣ್ಣಗಾಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಎನ್ .ಯತೀಶ್, ಹಿರಿಯ ಪರಿಸರ ಅಧಿಕಾರಿ ವಿಜಯಲಕ್ಷ್ಮಿ ಸಭೆಯಲ್ಲಿದ್ದು ಸಾರ್ವಜನಿಕರ ಅಹವಾಲು ದಾಖಲಿಸಿದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕಾರ್ಖಾನೆ ಹಿರಿಯ ಉಪಾಧ್ಯಕ್ಷ ರವಿರೆಡ್ಡಿ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಸೇರಿದಂತೆ ಸಾವಿರಾರು ರೈತರು, ಸಾರ್ವಜನಿಕರು ಭಾಗವಹಿಸಿದ್ದರು.