ಸಾರಾಂಶ
- ಜಿಲ್ಲಾಡಳಿತ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ 246ನೇ ಜಯಂತಿ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಸಲಹೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದಲ್ಲೇ ಮೊಟ್ಟಮೊದಲಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೊತ್ತಿಸಿದ ಶ್ರೇಯಸ್ಸು ವೀರರಾಣಿ ಕಿತ್ತೂರು ಚೆನ್ನಮ್ಮನಿಗೆ ಸಲ್ಲುತ್ತದೆ. ದೇಶಭಕ್ತಿಗೆ ಹೆಸರಾದ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವನಂಥ ವೀರವನಿತೆಯರು ಸ್ವಾತಂತ್ರ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇವರೆಲ್ಲರ ಹೋರಾಟವನ್ನು ಮಹಿಳೆಯರು ಸ್ಫೂರ್ತಿಯಾಗಿಸಿಕೊಂಡು ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ, ಪಾಲಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮನ 246ನೇ ಜಯಂತಿ ಹಾಗೂ 200ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಹಿಳೆಯರೂ ಒಂದಿಲ್ಲೊಂದು ಸವಾಲನ್ನು ಎದುರಿಸುತ್ತಿದ್ದಾರೆ. ಸವಾಲುಗಳಿಗೆ ಧೃತಿಗೆಡದೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಡಿ ಹೊತ್ತಿಸಿದರು ಕಿತ್ತೂರು ಚೆನ್ನಮ್ಮ, ಪತಿ, ಮಗನನ್ನು ಕಳೆದುಕೊಂಡರೂ ಎದೆಗುಂದದೆ ದೇಶದ ಸ್ವಾತಂತ್ರ್ಯಕ್ಕಾಗಿ ಕೊಡುಗೆ ನೀಡಿದ್ದಾರೆ. ಚೆನ್ನಮ್ಮ ಮತ್ತೊಂದು ಮಗುವನ್ನು ದತ್ತು ಪಡೆದು, ಆ ಮಗನಿಗೆ ಪಟ್ಟಕಟ್ಟಲು ಮುಂದಾಗಿದ್ದರು. ಆಗ ಬ್ರಿಟಿಷ್ ಅಧಿಕಾರಿ ಡಾಲ್ ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ತಂದನು. ಇಂತಹ ಹಲವಾರು ಸವಾಲು, ಸಂಕಷ್ಟಗಳು ಎದುರಿಗಿದ್ದರೂ ವೀರನಾರಿ ಚೆನ್ನಮ್ಮ ಧೃತಿಗೆಡದೇ ಆಂಗ್ಲರೊಂದಿಗೆ ಸೆಣಸಾಡಿದರು. ಬ್ರಿಟಿಷ್ ಅಧಿಕಾರಿ ಥ್ಯಾಕರೆಯಂಥವರನ್ನು ಮಣಿಸಿ, ವಿಜಯ ಪತಾಕೆ ಹಾರಿಸಿದ್ದರು. ಈ ವಿಜಯೋತ್ಸವಕ್ಕೆ ಈಗ 2 ಶತಮಾನ ಆಗಿದೆ ಎಂದು ಚೆನ್ನಮ್ಮ ಸಾಧನೆಯನ್ನು ಸ್ಮರಿಸಿದರು.ಪುತ್ಥಳಿ ಸ್ಥಾಪನೆಗೆ ಕ್ರಮ:
ದಾವಣಗೆರೆ ನಗರದ ಅರುಣ ಚಿತ್ರ ಮಂದಿರ ಮುಂಭಾಗದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶೀಘ್ರವೇ ಕಿತ್ತೂರು ಚನ್ನಮ್ಮನ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಪಾಲಿಕೆಯಿಂದ ಈಗಾಗಲೇ ₹1 ಕೋಟಿ ವೆಚ್ಚದಲ್ಲಿ ಚೆನ್ನಮ್ಮನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಪಂಚಮಸಾಲಿ ಸಮಾಜದ ಬಹುವರ್ಷಗಳ ಬೇಡಿಕೆಯಾದ ಚೆನ್ನಮ್ಮನ ಪುತ್ಥಳಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಅನಾವರಣಗೊಳ್ಳಲಿದೆ ಎಂದು ಡಾ.ಪ್ರಭಾ, ಪಂಚಮಸಾಲಿ ಸಮಾಜದವರೂ ಚೆನ್ನಮ್ಮಳಂತೆ ಗಟ್ಟಿ ನಿಲುವು ತೆಗೆದುಕೊಂಡು, ಸರ್ಕಾರದ ನೀತಿ ನಿಯಮಗಳ ವಿರುದ್ಧ ಧ್ವನಿ ಎತ್ತಿದರೆ ನಿಮ್ಮ ಅಹವಾಲನ್ನು ಸರ್ಕಾರ ಆಲಿಸುತ್ತದೆ. ಬೇಡಿಕೆಗಳಿಗೂ ಸ್ಪಂದಿಸುತ್ತದೆ ಎಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, 1764ರಲ್ಲಿ ಬಕ್ಸಾರ್ ಕದನದೊಂದಿಗೆ ಬ್ರಿಟಿಷರು ಭಾರತದೊಳಗೆ ಕಾಲಿಡಲು ಸಾಧ್ಯವಾಯಿತು. ಅಂದು ಕೆಲವರ ಸ್ವಾರ್ಥ, ಮೋಸದಿಂದಾಗಿ ಬ್ರಿಟಿಷರು ಭಾರತದಲ್ಲಿ ಬೇರೂರಲು ಅವಕಾಶ ಮಾಡಿಕೊಟ್ಟಂತಾಯಿತು. ಅನಂತರ 1824ರಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೊದಲ ಕಿಡಿ ಹೊತ್ತಿಸಿದ್ದು ವೀರರಾಣಿ ಕಿತ್ತೂರು ಚೆನ್ನಮ್ಮ. ಆದರೆ, ಇತಿಹಾಸದ ಪುಟದಲ್ಲಿ ಚೆನ್ನಮ್ಮನ ಹೆಸರು ಸರಿಯಾಗಿ ದಾಖಲಾಗಲಿಲ್ಲ ಎಂದರು.
ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿ ಕಿತ್ತೂರು ಸಂಸ್ಥಾನವನ್ನು ಚೆನ್ನಮ್ಮ ಆಳಲಿಲ್ಲ. ಬದಲಿಗೆ ಪ್ರತಿಯೊಬ್ಬರನ್ನೂ ಒಟ್ಟಿಗೆ ಸೇರಿಸಿ, ಸಂಸ್ಥಾನವನ್ನು ಮುನ್ನಡೆಸಿದರು. ಸುದೀರ್ಘ ಕಾಲ ಕಿತ್ತೂರು ಸಂಸ್ಥಾನ ಆಳಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.ಹರಿಹರ ಪೀಠದ ಪ್ರಧಾನ ಧರ್ಮದರ್ಶಿ, ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ, ಉಪ ಮೇಯರ್ ಶಾಂತಕುಮಾರ ಸೋಗಿ, ಯುವ ಮುಖಂಡ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ತಹಸೀಲ್ದಾರ್ ಅಶ್ವತ್ಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹೊರವಲಯದ ಎಸ್.ಎಸ್. ಹೈಟೆಕ್ ಆಸ್ಪತ್ರೆ ಸಮೀಪದ ಗಾಂಧಿ ಭವನದ ಬಳಿಯಿಂದ ಬೃಹತ್ ಬೈಕ್ ರ್ಯಾಲಿ ಆರಂಭವಾಗಿ ಜಿಲ್ಲಾ ಕೇಂದ್ರದ ವಿವಿಧೆಡೆ ಸಂಚರಿಸಿ, ಸಮಾರಂಭ ಸ್ಥಳ ತಲುಪಿತು.- - -
ಕೋಟ್ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಡಿ.9ರಂದು ಪಂಚಮಸಾಲಿ ಮಾಡು, ಇಲ್ಲವೇ ಮಡಿ ಹೋರಾಟ ನಡೆಸಲಾಗುತ್ತಿದೆ. ರಾಜ್ಯವ್ಯಾಪಿ ಇರುವ ಪಂಚಮಸಾಲಿ ಸಮಾಜ ಬಾಂಧವರು ಕಿತ್ತೂರು ಚನ್ನಮ್ಮನ ನೆಲವಾದ ಬೆಳಗಾವಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಒಗ್ಗಟ್ಟನ್ನು ಪ್ರದರ್ಶಿಸಬೇಕು- ಅಶೋಕ್ ಗೋಪನಾಳು, ಜಿಲ್ಲಾಧ್ಯಕ್ಷ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ
- - -ಬಾಕ್ಸ್ * ಚೆನ್ನಮ್ಮ ಹೋರಾಟಗಳ ಸಂಶೋಧನೆ ಅಗತ್ಯ: ಸಿಇಒ ಜಿಪಂ ಸಿಇಒ ಡಾ.ಸುರೇಶ ಇಟ್ನಾಳ್ ಮಾತನಾಡಿ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ 1824ರಲ್ಲೇ ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹೊತ್ತಿಸಿದ ಪ್ರಪ್ರಥಮ ವೀರನಾರಿ ವೀರರಾಣಿ ಕಿತ್ತೂರು ಚೆನ್ಮಮ್ಮ. ಆದರೆ, ಇತಿಹಾಸದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರಷ್ಟು ಪ್ರಚಾರ ಈ ನೆಲದ ಚೆನ್ನಮ್ಮನ ಬಗ್ಗೆ ಆಗಲಿಲ್ಲ. ಕಿತ್ತೂರು ಸಂಸ್ಥಾನ ಬಗ್ಗೆಯೂ ಇತಿಹಾಸದಲ್ಲಿ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಹಾಗೂ ವಿಜಯಪುರದ ಸಂಶೋಧನಾ ಕೇಂದ್ರದಿಂದ ಕಿತ್ತೂರು ಸಂಸ್ಥಾನ ಹಾಗೂ ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಬಗ್ಗೆ ಸಂಶೋಧನೆ ಮಾಡಿ, ಇತಿಹಾಸದ ಪುಟಗಳಲ್ಲಿ ಕಿತ್ತೂರು ಚೆನ್ನಮ್ಮನ ಹೆಸರನ್ನು ಅಜರಾಮರಗೊಳಿಸುವ ಕೆಲಸ ಮಾಡಬೇಕು.
- - - - (ಫೋಟೋ ಬರಲಿವೆ)