ಧಾರವಾಡ ಸೌಂದರ್ಯ ಹೆಚ್ಚಿಸಿದ ಮೇ ಫ್ಲವರ್ !

| Published : May 23 2024, 01:03 AM IST / Updated: May 23 2024, 01:04 AM IST

ಸಾರಾಂಶ

ಕಡು ಕೆಂಪು ಬಣ್ಣದ ಹೂಗಳನ್ನು ಹೊದ್ದುಕೊಂಡು ಸಂಭ್ರಮಿಸುತ್ತಿದೆ ಮರ. ಈ ತಿಂಗಳಲ್ಲಿ ಮದುವೆ ಚಪ್ಪರ ಅಲಂಕರಿಸಲು ಈ ಹೂವುಗಳ ಬಳಕೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಹೂಗಳು ಬರೀ ನೋಡಲು ಮಾತ್ರ ಸುಂದರ.

ಬಸವರಾಜ ಹಿರೇಮಠ

ಧಾರವಾಡ:

ಮುಂಗಾರು ಪೂರ್ವ ಮಳೆಯಾಗುವ ಹಿನ್ನೆಲೆ ಮೇ ತಿಂಗಳಲ್ಲಿ ಬಹುತೇಕ ಗಿಡ-ಮರಗಳು ಹೂ ಬಿಡುತ್ತವೆ. ಆದರೆ, ಮೇ-ಫ್ಲವರ್ ಎಂದೇ ಹೆಸರಾದ ಗುಲ್‌ ಮೊಹರ್ ಮರದಲ್ಲಿ ಈ ತಿಂಗಳು ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ ನೋಡುವುದು ಕಣ್ಣಿಗೆ ಹಬ್ಬ. ಬೇಸಿಗೆಯ ರಜೆಯ ಮಕ್ಕಳ ಆಟಕ್ಕೆ ಸಾಥ್‌ ನೀಡುವ ಗುಲ್ ಮೊಹರಿನ ಮೊಗ್ಗುಗಳು, ಹೂವಿನ ಕೇಸರದ ಭಾಗಗಳು ದೊಡ್ಡವರಿಗೆಲ್ಲ ಬಾಲ್ಯದ ನೆನಪು ತರುತ್ತಿವೆ.

ಗುಲ್‌ ಮೊಹರ್‌ ಗಿಡಗಳು ಧಾರವಾಡದ ಸೌಂದರ್ಯ ಹೆಚ್ಚಿಸಿವೆ. ಕರ್ನಾಟಕ ವಿವಿ ಆವರಣ, ಕೋರ್ಟ್ ವೃತ್ತ, ಕರ್ನಾಟಕ ಕಾಲೇಜಿನಿಂದ ಹಳಿಯಾಳ ನಾಕಾ ಮಾರ್ಗವಾಗಿ ಜರ್ಮನ್‌ ಆಸ್ಪತ್ರೆ, ಕೆ.ಸಿ. ಪಾರ್ಕ, ಆಜಾದ ಪಾರ್ಕ, ಜಿಲ್ಲಾಧಿಕಾರಿ ಕಚೇರಿ ಆವರಣ, ಮಾಳಮಡ್ಡಿ, ಕಲ್ಯಾಣನಗರ ಸೇರಿದಂತೆ ಇಡೀ ಧಾರವಾಡದಲ್ಲಿ ಈಗ ಗುಲ್‌ ಮೋಹರ್‌ ಹೂವಿನದ್ದೇ ಆಕರ್ಷಣೆ. ಮೇ ತಿಂಗಳಲ್ಲಿ ಅರಳುವ ಈ ಹೂಗಳ ಆಡಂಬರ ನೋಡಲು ಎರಡು ಕಣ್ಣುಗಳು ಸಾಲದು.

ಕಣ್ಮನ ಸೆಳೆಯುವ ಹೂ:

ಕಡು ಕೆಂಪು ಬಣ್ಣದ ಹೂಗಳನ್ನು ಹೊದ್ದುಕೊಂಡು ಸಂಭ್ರಮಿಸುತ್ತಿದೆ ಮರ. ಈ ತಿಂಗಳಲ್ಲಿ ಮದುವೆ ಚಪ್ಪರ ಅಲಂಕರಿಸಲು ಈ ಹೂವುಗಳ ಬಳಕೆ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ಈ ಹೂಗಳು ಬರೀ ನೋಡಲು ಮಾತ್ರ ಸುಂದರ. ಮರದಲ್ಲಿ ನಾನಾ ಚಿತ್ತಾಕರ್ಷಕ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತಿವೆ. ಕೆಲವು ಆಕರ್ಷಣೆ ಜತೆಗೆ ಸುಗಂಧವನ್ನೂ ಬೀರುವುದರಿಂದ ಇನ್ನಷ್ಟು ಸವಿಯಬೇಕೆನಿಸುತ್ತದೆ. ಗುಲ್‌ ಮೊಹರ್ ಮಾತ್ರವಲ್ಲದೇ ಮೇ ತಿಂಗಳಲ್ಲಿ ಬಣ್ಣ ಬಣ್ಣದ ಅಪರೂಪದ ಗಿಡಗಳಲ್ಲಿ ಹೂವುಗಳು ಅರಳಿ ನಿಲ್ಲುವುದು ಧಾರವಾಡ ನಗರಾದ್ಯಂತ ಕಣ್ಮನ ಸೆಳೆಯುತ್ತಿದೆ.

ಏನಿದು ಗುಲ್‌ ಮೊಹರ:

ಲೆಗ್ಯೂಮ್ ಗುಂಪಿಗೆ ಸೇರಿದ ಗುಲ್ ಮೊಹರ್ ಸಸ್ಯವು ಫ್ಯಾಬೇಸಿಯೆ ಕುಟುಂಬದ ಸದಸ್ಯ ಎಂಬ ಮಾಹಿತಿ ಇದೆ. ಹಾಗಾಗಿ ಇದರಿಂದಲೂ ನೆಲಕ್ಕೆ ಸಾರಜಕನದ ಲಭ್ಯತೆಯಿದ್ದು, ಮಣ್ಣಿನ ರಕ್ಷಣೆಗೆ ಇದು ಸಹಕಾರಿಯಾಗಿದೆ. ಸಸ್ಯ ತಜ್ಞರು ಹೇಳುವಂತೆ ಗುಲ್‍ ಮೊಹರ್‌ ಪರ್ಷಿಯನ್‍ ಮೂಲದ ಹೆಸರು. ಗುಲ್ ಎಂದರೆ ಗುಲಾಬಿ ಹೂ ಎಂದೂ, ಮೊಹರ್ ಎಂದರೆ ಗುರುತು ಅಥವಾ ಛಾಪ. ಹಾಗಾಗಿ ಗುಲಾಬಿಯ ಗುರುತು ಹೊಂದಿರುವ ಎಂಬುದಾಗಿದೆ. ಗುಲ್‍ ಮೊಹರಿನ ಹೂವಿನಲ್ಲಿ ಅದರ ದಳಗಳು ಉದ್ದವಾಗಿದ್ದು ಕೈಬೆರಳಂತಿದ್ದು ಆಕರ್ಷಣೀಯವಾಗಿದ್ದು ಎಲ್ಲರ ಕಣ್ಸೆಳೆಯುತ್ತವೆ. ಈ ಮರದ ಮತ್ತೊಂದು ಸೊಗಸು ಕಾಯಿಗಳು. ಸುಮಾರು 60 ಸೆಂಟಿಮೀಟರ್ ಉದ್ದ ಹಾಗೂ 5-6 ಸೆಮೀ ಅಗಲವಾದ ಕಾಯಿಗಳು ಕತ್ತಿ ಅಥವಾ ಖಡ್ಗವನ್ನು ಹೋಲುತ್ತವೆ. ಆದ್ದರಿಂದಲೇ ಇದನ್ನು ಕತ್ತಿಕಾಯಿ ಮರ ಎಂದೂ ಕೆಲವಡೆಗಳಲ್ಲಿ ಕರೆಯುತ್ತಾರೆ. ಮೊಗ್ಗಾಗಿದ್ದಾಗ ಹಸಿರು ಬಣ್ಣದ ಪುಟ್ಟ-ಪುಟ್ಟ ಕಾಯಿಗಳಂತೆ ಕಂಡರೂ ಅರಳಿದಾಗ ಅದರೊಳಗಿನ ದಟ್ಟ ಕೆಂಪು ಬಣ್ಣದ ದಳಗಳು, ಕೇಸರದ ಭಾಗಗಳು ಹೊರ ಬೀಳುತ್ತವೆ. ಇನ್ನೇನು ಅರಳುತ್ತವೆ ಎನ್ನುವ ಮೊಗ್ಗುಗಳ ತೆರೆದು ಅದರೊಳಗಿನ ಕೇಸರಗಳ ಬಿಡಿಸಿ ಅದರ ತುದಿಯಲ್ಲಿನ ಟೋಪಿಯಂತಹಾ ಭಾಗವನ್ನು ಬಿಡಿಸುವ ಆಟವಾಡುವುದು ಸಾಮಾನ್ಯ. ಕೆಲವು ಬಾರಿ ಕೆಂಪು ದಳಗಳನ್ನು ಕೈ-ಕಾಲು ಬೆರಳಿನ ಉಗುರಿಗೆ ಅಂಟಿಸಿಕೊಂಡವರೂ ಹೆಚ್ಚು.

ಮೇ ತಿಂಗಳಲ್ಲಿ ಬರೀ ಗುಲ್‌ ಮೊಹರ್‌ ಅಲ್ಲದೇ ಫುಟ್‌ಬಾಲ್ ಲಿಲ್ಲಿ ಎಂಬ ಹೂ ಸಹ ಗಮನ ಸೆಳೆಯುತ್ತಿದೆ. ಜತೆಗೆ ಸ್ವದೇಶಿ, ವಿದೇಶಿಯ ಕೆಲವು ಕೆಂಪು, ಹಳದಿ ಬಣ್ಣದ ಹೂ ಬಿಡುಗಳು ಸಹ ಧಾರವಾಡದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳ ಕಾಲವೂ ತನ್ನ ಸೊಬಗನ್ನು ಬೀರುತ್ತವೆ. ಒಟ್ಟಾರೆ ಮೇ ತಿಂಗಳಲ್ಲಿ ಬಿಡುವ ಹೂಗಳನ್ನು ಧಾರವಾಡದಲ್ಲಿ ನೋಡುವುದು ಒಂದು ಸೌಭಾಗ್ಯವೇ ಸರಿ.ಪೋಷಿಸುವ ಅಗತ್ಯ..

ವರ್ಷಕ್ಕೊಮ್ಮೆ ಮೇ ತಿಂಗಳಲ್ಲಿ ಮಾತ್ರ ಹೂ ಬಿಡುವ ಹಾಗೂ ಚರ್ಚೆಗೆ ಬರುವ ಈ ಗಿಡಮರಗಳ ಟೊಂಗೆಗಳು ಬಲು ಸಡಿಲು. ಮಳೆಗಾಳಿಗೆ ಮುರಿದು ಬೀಳುವುದೇ ಹೆಚ್ಚು. ಹೀಗಾಗಿ ಈ ಮೊದಲು ಇಡೀ ಧಾರವಾಡ ಆವರಿಸಿಕೊಂಡಿದ್ದ ಗುಲ್‌ ಮೊಹರ್‌ ಇತ್ತೀಚೆಗೆ ಕೆಲವು ಕಡೆಗಳಲ್ಲಿ ಮಾತ್ರ ಕಾಣಸಿಗುತ್ತಿದೆ. ಮೇ ಫ್ಲವರ್ ಅರಳುವ ಆಡಂಬರ ಬಹಳಷ್ಟು ಸುಂದರ ಎನ್ನುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಪೋಷಿಸುವ ನಿಟ್ಟಿನಲ್ಲಿ ಕೆಲಸ ಆಗುವ ಅವಶ್ಯಕತೆ ಇದೆ. ವಿದ್ಯಾಕಾಶಿ ಹೂವಿನಕಾಶಿ ಎಂಬಂತೆ ಹೊಸ ಅಧ್ಯಾಯ ಸೃಷ್ಟಿಸಲು ಸಣ್ಣದೊಂದು ಪ್ರಯತ್ನವಾಗಬೇಕಿದೆ ಎನ್ನುತ್ತಾರೆ ನೇಚರ್‌ ರೀಸರ್ಚ್ ಸೆಂಟರ್‌ನ ಹರ್ಷವರ್ಧನ ಶೀಲವಂತ.