ನಮ್ಮ ನೆಲಕ್ಕೆ ಪ್ರತಿಭಾವಂತರು ಕೊಡುಗೆ ನೀಡುವಂತಾಗಲಿ: ಸುಚೇತ್ ಬಾಳಕಲ್

| Published : Oct 26 2025, 02:00 AM IST

ನಮ್ಮ ನೆಲಕ್ಕೆ ಪ್ರತಿಭಾವಂತರು ಕೊಡುಗೆ ನೀಡುವಂತಾಗಲಿ: ಸುಚೇತ್ ಬಾಳಕಲ್
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಪುರದ ಪಟ್ಟಣದ ಅಡಕೆ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ರಂಗಸಮೂಹ ಮಂಚೀಕೇರಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಐಎಫ್‌ಎಸ್‌ ನೂತನ ಅಧಿಕಾರಿ ಸುಚೇತ್ ಬಾಳಕಲ್ ಅವರನ್ನು ಗೌರವಿಸಲಾಯಿತು.

ಯಲ್ಲಾಪುರ: ಇಂದು ನಮ್ಮ ತಲೆಮಾರಿನ ಅನೇಕ ಯುವಕರು ತಮ್ಮ ಉದ್ಯೋಗ, ಬದುಕಿಗಾಗಿ ವಿದೇಶಗಳಿಗೆ ಹೋಗುವ ಬದಲು ನಮ್ಮ ನೆಲದಲ್ಲೇ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬುದು ನನ್ನ ಚಿಂತನೆ. ಜತೆಯಲ್ಲಿ ನಮ್ಮ ನೆಲಕ್ಕೆ ನಮ್ಮಿಂದಾದ ಅನೇಕ ಕೊಡುಗೆಗಳನ್ನು ನೀಡಬಹುದಲ್ಲ ಎಂಬುದು ನನ್ನ ವಾದ ಎಂದು ಐಎಫ್‌ಎಸ್‌ ನೂತನ ಅಧಿಕಾರಿ ಸುಚೇತ್ ಬಾಳಕಲ್ ಹೇಳಿದರು.

ಪಟ್ಟಣದ ಅಡಕೆ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ರಂಗಸಮೂಹ ಮಂಚೀಕೇರಿ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿಭಾವಂತರು ಬೇರೆ ಕ್ಷೇತ್ರಗಳಿಗೆ ಹೋಗದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಅಧಿಕಾರ ಪಡೆಯುವ ಮೂಲಕ ನಮ್ಮ ದೇಶದ ವ್ಯವಸ್ಥೆಯನ್ನು ಉತ್ತಮಪಡಿಸಬಹುದಾಗಿದೆ. ಈ ಕುರಿತು ನಮ್ಮ ಪಾಲಕರು ಮತ್ತು ಯುವಜನಾಂಗ ಚಿಂತನೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಪ್ರಮೋದ ಹೆಗಡೆ ಮಾತನಾಡಿ, ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚಿಸಲು ಇಂದು ಜಾಗತಿಕ ಮಟ್ಟದಲ್ಲಿ ಜಗತ್ತಿನ ಎಲ್ಲ ಮುಖ್ಯಸ್ಥರು ಸೇರಿ ಶೃಂಗಸಭೆ ಏರ್ಪಡಿಸಿದ್ದಾರೆ. ಇಲ್ಲಿಯವರೆಗಿನ ಅಧ್ಯಯನದ ಪ್ರಕಾರ ಹೀಗೆಯೇ ಇರುವ ಅಭಿವೃದ್ಧಿಗಳು ಮುಂದುವರಿದರೆ ೨೦೩೦ಕ್ಕೆ ಜಗತ್ತಿನ ಸ್ಥಿತಿ ತೀವ್ರ ತೊಂದರೆಗೆ ಸಿಲುಕುತ್ತದೆ. ಈ ಕುರಿತು ಗಂಭೀರ ಚಿಂತನೆ ನಡೆಯಲಿದೆ. "ಎಲ್ಲ ಅಭಿವೃದ್ಧಿ, ಎಲ್ಲರ ಜತೆ ಅಭಿವೃದ್ಧಿ " ಮಾಡಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.

ರಾಜ್ಯ ವಾಣಿಜ್ಯ ತೆರಿಗೆ ಉಪ ಆಯುಕ್ತೆ ಸಹನಾ ಬಾಳಕಲ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಮುನ್ನಡೆಯಬೇಕಿದೆ. ಅದಕ್ಕೆ ಮನೆಯವರ ಬೆಂಬಲ ಅಷ್ಟೇ ಸಮರ್ಥವಾಗಿ ದೊರೆತಾಗ ನಾವು ಯಾವ ಸಾಧನೆಯನ್ನಾದರೂ ಮಾಡಲು ಸಾಧ್ಯ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಮಾತನಾಡಿ, ಉನ್ನತ ಸ್ಥಾನಕ್ಕೇರಿದ ಮೇಲೆ ಕಾನೂನಿನ ಮಿತಿಯೊಳಗೆ ಮಾನವೀಯ ನೆಲೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡಬೇಕು ಎಂದರು.

ರಂಗ ಸಮೂಹದ ಅಧ್ಯಕ್ಷ ಆರ್.ಎನ್. ಭಟ್ಟ ಧುಂಡಿ ಸನ್ಮಾನಿತರನ್ನು ಅಭಿನಂದಿಸಿ, ಮಾತನಾಡಿದರು. ಶಾಸಕ ಶಿವರಾಮ ಹೆಬ್ಬಾರ, ಶಿವಾನಂದ ಕಳವೆ, ಡಾ. ಕೇಶವ ಕೂರ್ಸೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ವಿಶ್ವದರ್ಶನ ಪಿಯು ಕಾಲೇಜು ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ವಂದಿಸಿದರು.