ಬೆಳಗಾವಿ ಅಧಿವೇಶನ ಸದುಪಯೋಗವಾಗಲಿ: ಹೊರಟ್ಟಿ

| Published : Nov 27 2023, 01:15 AM IST

ಸಾರಾಂಶ

ಸರ್ಕಾರ ಅಧಿವೇಶನಕ್ಕೂ ಮುನ್ನ ಸಚಿವರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸುವ ಮೂಲಕ ಅಧಿವೇಶನದ ಸಮಯದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ಜರುಗದಂತೆ ನೋಡಿಕೊಳ್ಳಬೇಕು. ಸದನದಲ್ಲಿ ಅಜೆಂಡಾದ ಪ್ರಕಾರ ಎಲ್ಲ ಪ್ರಶ್ನೋತ್ತರಗಳು ಮುಗಿದ ಬಳಿಕ ಡಿ. 5 ಮತ್ತು 6ನೇ ತಾರೀಕಿನಂದು ಉತ್ತರ ಕರ್ನಾಟಕ ಭಾಗದ ವಿವಿಧ ಸಮಸ್ಯೆಗಳ ಕುರಿತು ಶಾಸಕರಿಗೆ ಧ್ವನಿ ಎತ್ತಲು ವಿಶೇಷ ಅವಕಾಶ ಕಲ್ಪಿಸಲಾಗುವುದು

ಕನ್ನಡಪ್ರಭ ವಾರ್ತೆ ಕಂಪ್ಲಿ

ಬೆಳಗಾವಿಯ ಚಳಿಗಾಲದ ಅಧಿವೇಶನ ವ್ಯರ್ಥವಾಗದಂತೆ ರಾಜ್ಯದಲ್ಲಿನ ವಿವಿಧ ಸಮಸ್ಯೆಗಳು ಹಾಗೂ ಅದರ ಪರಿಹಾರೋಪಾಯಗಳ ಕುರಿತು ಚರ್ಚೆಯಾಗುವ ಮೂಲಕ ಸದನ ಸದುಪಯೋಗಗೊಳ್ಳುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಪಟ್ಟಣಧಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ₹20ರಿಂದ ₹25 ಕೋಟಿ ವ್ಯಯಿಸಲಾಗುತ್ತದೆ. ಆದರೆ ಪ್ರತಿ ಬಾರಿ ಅಧಿವೇಶನದ ಸಮಯದಲ್ಲಿ ವಿವಿಧ ರೀತಿಯ ಪ್ರತಿಭಟನೆಗಳು, ಪರ- ವಿರೋಧ ಚರ್ಚೆಗಳ ಮೂಲಕ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ರಾಜ್ಯದ ವಿವಿಧೆಡೆಗಳಲ್ಲಿನ ನಾನಾ ರೀತಿಯ ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳ ಕುರಿತು ಸೂಕ್ತ ಚರ್ಚೆಯಾಗುತ್ತಿಲ್ಲ.

ಸರ್ಕಾರ ಅಧಿವೇಶನಕ್ಕೂ ಮುನ್ನ ಸಚಿವರ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸುವ ಮೂಲಕ ಅಧಿವೇಶನದ ಸಮಯದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ಜರುಗದಂತೆ ನೋಡಿಕೊಳ್ಳಬೇಕು. ಸದನದಲ್ಲಿ ಅಜೆಂಡಾದ ಪ್ರಕಾರ ಎಲ್ಲ ಪ್ರಶ್ನೋತ್ತರಗಳು ಮುಗಿದ ಬಳಿಕ ಡಿ. 5 ಮತ್ತು 6ನೇ ತಾರೀಕಿನಂದು ಉತ್ತರ ಕರ್ನಾಟಕ ಭಾಗದ ವಿವಿಧ ಸಮಸ್ಯೆಗಳ ಕುರಿತು ಶಾಸಕರಿಗೆ ಧ್ವನಿ ಎತ್ತಲು ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದರು.

ಸುವರ್ಣಸೌಧಕ್ಕೆ ಸಂಬಂಧಿಸಿದ 20 ಎಕರೆ ಜಮೀನಿದ್ದು, ಅದರಲ್ಲಿ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಶಾಸಕರ ಭವನ ನಿರ್ಮಿಸುವ ಕುರಿತು ಚರ್ಚಿಸಲಾಗಿದೆ ಎಂದರು.

ರಾಜ್ಯದ ಶಾಲಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ತರಗತಿಗೆ ಒಬ್ಬ ಶಿಕ್ಷಕನನ್ನು ನೇಮಿಸಲು ಸರ್ಕಾರ ಮುಂದಾಗಬೇಕು. ಅಲ್ಲದೆ ಶಿಕ್ಷಕರನ್ನು ಚುನಾವಣೆ ಸೇರಿದಂತೆ ಅನ್ಯ ಕಾರ್ಯಗಳಿಗೆ ನಿಯೋಜಿಸಿಕೊಳ್ಳದೆ ಎಲ್ಲ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಶೇಕಡಾವಾರು ನಿಯೋಜಿಸಿಕೊಳ್ಳಬೇಕು. 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರನ್ನೇ ಈ ಭಾಗಕ್ಕೆ ನಿಯುಕ್ತಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹಾಗೂ ಕೆಸಿಬಿ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಸ್. ಚಾಂದ್ ಭಾಷಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಲು, ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಕೆಸಿಬಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಶಾರುಖ್, ಮುಖಂಡರಾದ ಬಿ. ಸಿದ್ದಪ್ಪ, ಭಾಸ್ಕರ್ ರೆಡ್ಡಿ, ಬಾಲಕೃಷ್ಣ, ದೇವೇಂದ್ರ, ವೆಂಕಟರಮಣ, ಸುಧಾಕರ್, ಕರೆಕಲ್ ಮನೋಹರ ಬಿ. ರಮೇಶ್, ಮೆಹಬೂಬ್, ಶೇಕ್ಷ ವಲಿ, ಎಚ್. ಕುಮಾರಸ್ವಾಮಿ, ಅಕ್ಕಿ ಜಿಲಾನ್, ಬಡಿಗೇರ್ ಜಿಲಾನ್ ಸೇರಿದಂತೆ ಇತರರಿದ್ದರು.