ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಊಹೆಗೂ ನಿಲುಕದ ಸಾಲಲ್ಲಿರುವ ಡಾ.ಸರ್ವಪಲ್ಲಿ ರಾಧಕೃಷ್ಣರವರ ಆದರ್ಶಗಳನ್ನು ಶಿಕ್ಷಕರು ವೃತ್ತಿ ಬದುಕಲ್ಲಿ ಅಳವಡಿಸಿಕೊಂಡು ಗಡಿ ಭಾಗದ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಗುರುಗಳ ಪಾತ್ರ ಅವಿಸ್ಮರಣೀಯ. ಪವಿತ್ರವಾದ ಶಿಕ್ಷಕರ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆ ಮುಖ್ಯ. ನಿವೃತ್ತಿ ನಂತರವೂ ವೇತನ ವಿಲ್ಲದೆ ಮಕ್ಕಳಿಗೆ ಪಾಠ ಮಾಡುವಂತ ಅನೇಕ ಗುರುಗಳು ಇದ್ದಾರೆ. ಅದೊಂದು ಅಂತಃಕರಣದ ಸೇವೆ. ಗುರುಶಿಷ್ಯರ ನಡುವಿನ ಬಂಧನ ಮರೆಯಲಾರದ್ದು ಎಂದು ಹೇಳಿದರು.ಸರ್ವಪಲ್ಲಿ ರಾಧಕೃಷ್ಣ ಅವರ ಆದರ್ಶಗಳು ಪ್ರತಿ ಶಿಕ್ಷಕರಿಗೂ ಮಾದರಿಯಾಗಬೇಕು. ಪ್ರಸ್ತುತ ಆಧುನಿಕ ಸಮಾಜದಲ್ಲಿ ಶಿಕ್ಷಕರು ವಿಷಯಗಳನ್ನು ಹೆಚ್ಚು ತಿಳಿದುಕೊಳ್ಳುವತ್ತ ಮುಂದಾಗಬೇಕು. ತಜ್ಞರೊಂದಿಗೆ ಚರ್ಚೆ ನಡೆಸುವ ಮೂಲಕ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ ಅವರನ್ನು ವಿದ್ಯಾವಂತರನ್ನಾಗಿಸಿ ಹಿಂದುಳಿದ ಪ್ರದೇಶವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಬೇಕು. ಶಾಲೆಗಳ ಹಾಗೂ ಅಂಗನವಾಡಿ ದುರಸ್ತಿಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು ಪ್ರಸಕ್ತ ವರ್ಷದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕಾಗಿ 7 ಕೋಟಿ ರು. ಅನುದಾನ ನೀಡಿದ್ದೇನೆ ಎಂದು ಇದೇ ಸಂದರ್ಬದಲ್ಲಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಸೇವೆ ಬಹುಮುಖ್ಯವಾದದು. ಹಲವು ಸವಾಲುಗಳ ನಡುವೆ ಶಿಕ್ಷಕರು ಸೇವೆ ಸಲ್ಲಿಸುವಂತ ಸ್ಥಿತಿ ಎದುರಾಗಿದೆ. ಶಾಕಸಕರು ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿದೆ. ಶಿಕ್ಷಕರು ಇನ್ನಷ್ಟು ಶ್ರಮವಹಿಸಿ ಗಡಿ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.ಈ ವೇಳೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಸಂದರ್ಭದಲ್ಲಿ ತಹಸೀಲ್ದಾರ್ ಜಗದೀಶ್, ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಸಿದ್ದಣ್ಣ, ಸದಸ್ಯರಾದ ಮಂಜಣ್ಣ, ಖಾದರ್, ಅಬ್ದುಲ್ಲಾ, ಉಪನ್ಯಾಸಕ ಡಾ.ಯೋಗಾನಂದ, ಮುಖಂಡರಾದ ಬಡೋಬಯ್ಯವಿ.ಮಾರನಾಯಕ, ನೌಕರರ ಸಂಘದ ಮಾಜಿ ಅಧ್ಯಕ್ಷ ಈರಣ್ಣ, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಂ.ಅಶೋಕ, ಮಾಜಿ.ಅಧ್ಯಕ್ಷರಾದ ಅಶೋಕ್ ಸುಜಾತಾ, ಮುಖ್ಯಶಿಕ್ಷಕ ಎಂ.ಮಲ್ಲಿಕಾರ್ಜುನ, ಕರಿಬಸಪ್ಪ, ಪ್ರಾಂಶುಪಾಲ ಗೋವಿಂದಪ್ಪ, ಎಸ್.ಬಿ.ರಾಮಚಂದ್ರಯ್ಯ, ನಿವೃತ್ತ ಶಿಕ್ಷಕ ಸಣ್ಣ ಯಲ್ಲಪ್ಪ, ಪಶು ಇಲಾಖೆಯ ಡಾ.ರಂಗಪ್ಪ ಇದ್ದರು.