ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿ 2023ನೇ ಕ್ಯಾಲೆಂಡರ್ ವರ್ಷ ಸರಿದು, 2024ನೇ ಇಸವಿಯ ಹೊಸ ವರ್ಷ ಆರಂಭವಾಗಿದೆ. ಕಳೆದ ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸಿಕೊಂಡು ಬರುತ್ತಿರುವ ಕೊಡಗು ಜಿಲ್ಲೆಯಲ್ಲಿ ಈ ವರ್ಷದಲ್ಲಿ ಹಲವು ಸಮಸ್ಯೆಗಳು ಬಗೆಯರಿಯಬೇಕಿದೆ. ಜಿಲ್ಲೆಯಲ್ಲಿ ಆಡಳಿತ ಯಂತ್ರ ಮತ್ತಷ್ಟು ಚುರುಕುಗೊಳ್ಳಬೇಕಿದೆ.ಕೊಡಗು ಜಿಲ್ಲೆಗೆ ಇಬ್ಬರು ಯುವ ಶಾಸಕರು ಕೆಲಸ ಮಾಡುತ್ತಿದ್ದು, ಜನರ ಹಾಗೂ ಶಾಸಕರ ಬೇಡಿಕೆಯಂತೆ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಮುಂದಾಗಬೇಕಿದೆ. ಕಾವೇರಿ ನದಿ ಉಗಮಿಸುವ ಕೊಡಗಿನಲ್ಲಿ ಸರ್ಕಾರದಿಂದ ಮಲತಾಯಿ ಧೋರಣೆ ಆಗದೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗಬೇಕಿದೆ.
ಹೆಚ್ಚಿನ ಅರಣ್ಯ ಪ್ರದೇಶದಿಂದ ಕೂಡಿಕೊಂಡಿರುವ ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ವನ್ಯ ಪ್ರಾಣಿಗಳಿಂದ ಸಂಘರ್ಷ ಉಂಟಾಗುತ್ತಿದೆ. ಒಂದು ಕಡೆ ಆನೆ ಹಾವಳಿ ಹೆಚ್ಚಾದರೆ ಮತ್ತೊಂದೆಡೆ ಹುಲಿ ಹಾವಳಿ. ಇದಕ್ಕೆ ಶಾಶ್ವತ ಪರಿಹಾರ ಇಂದಿಗೂ ಆಗಿಲ್ಲ. ಆದ್ದರಿಂದ ಈ ಬಗ್ಗೆ ತಜ್ಞರ ಸಲಹೆಯನ್ನು ಪಡೆದು ಇದಕ್ಕೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ.ಹೆಚ್ಚು ಮಳೆ ಬಂದ ಸಂದರ್ಭ ಮಡಿಕೇರಿಯಲ್ಲಿ ಭೂಕುಸಿತ, ಸಿದ್ದಾಪುರ, ಕುಶಾಲನಗರ, ನಾಪೋಕ್ಲು ಮತ್ತಿತರ ಕಡೆಗಳಲ್ಲಿ ಪ್ರವಾಹ ಉಂಟಾಗುವುದು ಸಾಮಾನ್ಯವಾಗಿದ್ದು, ಇದರ ಬಗ್ಗೆ ಕೂಡ ಕಾಳಜಿ ವಹಿಸಿ ಸಂಬಂಧಿಸಿದವರು ಕೆಲಸ ಮಾಡಬೇಕಿದೆ. ಕಾವೇರಿ ನದಿ ತೀರದಲ್ಲಿ ಒತ್ತುವರಿಯನ್ನು ತೆರವುಗೊಳಿಸಿ ಅಂಥರಿಗೆ ಶಾಶ್ವತ ಮನೆ ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ಕೃಷಿ ಸಮಸ್ಯೆಗೆ ಪರಿಹಾರ ಅಗತ್ಯ: ಕೊಡಗಿನಲ್ಲಿ ಕಾಫಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಕಾಫಿ ಬೆಳೆಗಾರರು ಹಾಗೂ ಭತ್ತದ ಕೃಷಿಕರು ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ಕಾಡು ಪ್ರಾಣಿಗಳ ಹಾವಳಿ, ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದಾರೆ. ಕಾಫಿ ಬೆಳೆಗಾರರಿಗೆ ಸರ್ಕಾರ ಪಂಪ್ ಸೆಟ್ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ ಭತ್ತ ಬೆಳೆಯುವ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬ ಕೂಗು ಎಲ್ಲರಲ್ಲೂ ಇದೆ. ಇದಕ್ಕೆ ಈ ಹಿಂದೆ ದೊಡ್ಡ ಮಟ್ಟದಲ್ಲಿ ಅಭಿಯಾನ ಕೂಡ ಆಗಿದೆ. ಈಗಲೂ ಕೂಡ ಪ್ರಮುಖ ಚಿಕಿತ್ಸೆಗಳಿಗೆ ಕೊಡಗಿನವರು ಪಕ್ಕದ ಜಿಲ್ಲೆಗಳನ್ನು ಅವಲಂಬಿಸಬೇಕಿದೆ. ಈಗಿರುವ ಜಿಲ್ಲಾಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯೇ ವಿವಿಧ ಕಾರಣಗಳಿಂದ ವಿಳಂಬವಾಗುತ್ತಿದೆ. ಆದ್ದರಿಂದ ಕೊಡಗಿನ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಉತ್ತಮ ಗುಣಮಟ್ಟದ ಆಸ್ಪತ್ರೆಯನ್ನು ನಿರ್ಮಿಸಿ ಕೊಡಗಿನಲ್ಲಿನ ಆರೋಗ್ಯ ಕ್ಷೇತ್ರದ ಸುಧಾರಣೆ ಮಾಡಬೇಕಿದೆ.ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕೊಡವ ಹೆರಿಟೇಜ್ ಸೆಂಟರ್, ಕನ್ನಡ ಸಮುಚ್ಚ ಭವನ, ಭಾಗಮಂಡಲದಲ್ಲಿ ಮೇಲು ಸೇತುವೆ, ಮಡಿಕೇರಿಯಲ್ಲಿ ತಾಲೂಕು ಸೌಧ ಸೇರಿದಂತೆ ಹಲವು ಕಟ್ಟಡಗಳ ಕಾಮಗಾರಿ ಈ ವರ್ಷದಲ್ಲಿ ಪೂರ್ಣಗೊಳ್ಳಬೇಕಿದೆ. 2021ರಲ್ಲಿ ಮಡಿಕೇರಿ ರಾಜರ ಕೋಟೆಯ ನವೀಕರಣ ಕಾಮಗಾರಿ ಆರಂಭಿಸಲಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಇದಲ್ಲದೆ ಕೊಡಗಿನ ಹಲವು ಗ್ರಾಮೀಣ ರಸ್ತೆಗಳು ತೀರಾ ಹದಗೆಟ್ಟಿದ್ದು, ರಸ್ತೆಗಳ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮಡಿಕೇರಿ ನಗರಸಭೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ ಸಾಕಷ್ಟು ಕಾಡುತ್ತಿದ್ದು, ಇದನ್ನು ನೀಗಿಸಲು ಸಂಬಂಧಿಸಿದವರು ಕ್ರಮ ತೆಗೆದುಕೊಳ್ಳಬೇಕಿದೆ.
ಬಾಕ್ಸ್...ಕ್ರೀಡಾಪಟುಗಳ ತವರು ಜಿಲ್ಲೆಗೆ ಬೇಕು ಸುಸಜ್ಜಿತ ಮೈದಾನ ಇಡೀ ರಾಜ್ಯದಲ್ಲಿಯೇ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ಹಲವು ಪ್ರಮುಖ ಕ್ರೀಡೆಗಳಲ್ಲಿ ಕೊಡಗಿನ ಕ್ರೀಡಾ ಪಟುಗಳು ಸಾಧನೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೆ ಕೊಡಗಿನ ಜಿಲ್ಲಾ ಕ್ರೀಡಾಂಗಣದ ಪರಿಸ್ಥಿತಿ ನೋಡಿದರೆ ತೀರಾ ಶೋಚನೀಯವಾಗಿದೆ. ತಾಲೂಕು ಮೈದಾನಗಳು ಕೂಡ ಇದೇ ಪರಿಸ್ಥಿತಿ. ಕ್ರೀಡೆಯಲ್ಲಿ ಸಾಧನೆ ಮಾಡಿದ ಕೊಡಗಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಸುಸಜ್ಜಿತವಾದ ಕ್ರೀಡಾಂಗಣವನ್ನು ನಿರ್ಮಾಣ ಮಾಡಿ ಕೊಡುಗೆಯಾಗಿ ನೀಡಿದರೆ ಕ್ರೀಡಾಪಟುಗಳ ತವರು ಜಿಲ್ಲೆಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ---ಪ್ರವಾಸೋದ್ಯಮ ಅಭಿವೃದ್ಧಿ
ಕೊಡಗು ಜಿಲ್ಲೆ ನೈಸರ್ಗಿಕವಾಗಿಯೇ ಹಲವು ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಹೆಚ್ಚು ಆಕರ್ಷಣೀಯವಾಗಿದೆ. ಆದರೆ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಕೊರತೆ ಎದ್ದು ಕಾಣುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಇದನ್ನು ಅವಲಂಭಿಸಿಕೊಂಡಿರುವವರ ಆದಾಯವನ್ನು ಹೆಚ್ಚಿಸಬಹುದಾಗಿದೆ. ಆದ್ದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸರ್ಕಾರ ಮತ್ತಷ್ಟು ಅಭಿವೃದ್ಧಿ ಮಾಡುವುದರೊಂದಿಗೆ ಕೊಡಗಿಗೆ ಬರುವ ಪ್ರವಾಸಿಗರಿಗೆ ವಿವಿಧ ಸೌಲಭ್ಯಗಳನ್ನು ನೀಡಬೇಕಿದೆ.---ಕೊಡಗು ವಿ.ವಿ.ಗೆ ಅನುದಾನ ಸಿಗಲಿ
ನೂತನವಾಗಿ ಕಾರ್ಯಾರಂಭ ಮಾಡಿರುವ ಕೊಡಗು ವಿಶ್ವ ವಿದ್ಯಾನಿಲಯಕ್ಕೆ ಸರ್ಕಾರ ಅನುದಾನ ನೀಡುವ ಮೂಲಕ ಕೊಡಗಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ನೆರವಾಗವೇಕಿದೆ. ಈಗಾಗಲೇ ಹಲವು ಕೊರತೆಗಳ ನಡುವೆ ನೂತನ ವಿಶ್ವ ವಿದ್ಯಾನಿಲಯ ಮುಂದುವರೆಯುತ್ತಿದೆ. ಆದರೆ ಅನುದಾನ ಇಲ್ಲದೆ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ. ಅಲ್ಲದೆ ಉಪನ್ಯಾಸಕರು ವೇತನ ಇಲ್ಲದೆ ಪರಿತಪಿಸುವಂತಾಗಿದೆ. ಸರ್ಕಾರ ರಾಜಕೀಯ ಮರೆತು ಕೆಲಸ ಮಾಡಬೇಕಿದೆ.