ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಮಾಧ್ಯಮಗಳು ಸೇತುವೆ: ಡಾ. ಸೋಮಣ್ಣ

| Published : Aug 10 2024, 01:39 AM IST

ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಮಾಧ್ಯಮಗಳು ಸೇತುವೆ: ಡಾ. ಸೋಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಿರಿ ಸ್ನೇಹ ಬಳಗ ಮತ್ತು ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ‘ಏಕೀಕರಣದಲ್ಲಿ ಮಾಧ್ಯಮಗಳ ಪಾತ್ರ’ ವಿಚಾರಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕರ್ನಾಟಕ ಏಕೀಕರಣದಲ್ಲಿ ಪತ್ರಿಕೆ ಹಾಗೂ ಇತರ ಮಾಧ್ಯಮಗಳ ಪಾತ್ರ ಪ್ರಮುಖವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಜೆ.ಎ. ಸೋಮಣ್ಣ ಅಭಿಪ್ರಾಯಪಟ್ಟರು.

ಕನ್ನಡ ಸಿರಿ ಸ್ನೇಹ ಬಳಗ ಮತ್ತು ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ‘ಏಕೀಕರಣದಲ್ಲಿ ಮಾಧ್ಯಮಗಳ ಪಾತ್ರ’ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸೇತುವೆಯಾಗಿದ್ದು ಜನರ ಬದುಕು ಹಸನಾಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಆರಂಭದಲ್ಲಿ ಧರ್ಮ ಪ್ರಚಾರಕ್ಕಾಗಿ ಪ್ರಾರಂಭಗೊಂಡ ಪತ್ರಿಕಾ ರಂಗ ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸರ್ಕಾರಗಳ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿ ಆಗುತ್ತಿದೆ. ಪತ್ರಿಕೆಗಳ ಮೂಲಕ ಬರಹಗಾರರ ಸೃಷ್ಟಿ ಸಾಧ್ಯವಾಗಿದೆ ಎಂದ ಅವರು, ಪತ್ರಿಕಾ ರಂಗ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕೆಲಸ ಮಾಡಬೇಕು ಪ್ರಜಾಪ್ರತಿನಿಧಿಗಳು ದಾರಿ ತಪ್ಪಿದ ಸಂದರ್ಭ ಎಚ್ಚರಿಕೆ ಗಂಟೆಯನ್ನು ನೀಡುವಂತಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಎಸಿ ವಲಯ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಏಕೀಕರಣ ಬಗ್ಗೆ ಮಾಹಿತಿ ನೀಡಿ ಇತಿಹಾಸ ತಿಳಿಯದೆ ಸಾಧನೆ ಅಸಾಧ್ಯ. ಸಮಾಜದ ಹಾಗೂ ಹೋಗುಗಳ ಬಗ್ಗೆ ದಿನನಿತ್ಯ ವರದಿ ಮಾಡುವ ಪತ್ರಕರ್ತರ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್‌, ಮಾಧ್ಯಮ ಮತ್ತು ಇಂದಿನ ವಿದ್ಯಾರ್ಥಿಗಳು ವಿಷಯದ ಮೇಲೆ ವಿಷಯ ಮಂಡಿಸಿದರು.

ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಬಳಗದ ವತಿಯಿಂದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ 29 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಏಕೀಕರಣ ಬಗ್ಗೆ ಹಾಗೂ ಮಾಧ್ಯಮಗಳ ಪಾತ್ರದ ವಿಷಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಕುಶಾಲನಗರ ಪ್ರೆಸ್ ಕ್ಲಬ್ ಅಧ್ಯಕ್ಷ ಎಚ್ಎಂ.ರಘು. ಮತ್ತು ಕೊಡಗು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್, ಎಚ್ಎಂ. ರಘು ಮತ್ತು ವಿಘ್ನೇಶ್ ಭೂತನಕಾಡು ಅವರುಗಳನ್ನು ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿನಿ ತನ್ಸೀರಾ ಪ್ರಾರ್ಥಿಸಿದರು. ಉಪನ್ಯಾಸಕರಾದ ಮಂಜುನಾಥ್ ಸ್ವಾಗತಿಸಿದರು. ಎಚ್.ಎಸ್. ಅನಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.