ಜಿಲ್ಲಾದ್ಯಂತ ಸಡಗರದ ನಾಗರಪಂಚಮಿ ಆಚರಣೆ

| Published : Aug 10 2024, 01:39 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಭ್ರಮ ಸಡಗರದಿಂದ ಮಹಿಳೆಯರು ನಾಗರ ಪಂಚಮಿ ಆಚರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ/ ಸೊರಬ/ ತೀರ್ಥಹಳ್ಳಿ

ನಗರದ ವಿವಿಧೆಡೆ ಶುಕ್ರವಾರ ಸಂಭ್ರಮ ಸಡಗರದಿಂದ ಮಹಿಳೆಯರು ನಾಗರ ಪಂಚಮಿ ಆಚರಿಸಿದರು ನಾಗರಪಂಚಮಿ ಅಂಗವಾಗಿ ವಿವಿಧ ದೇವಾಲಯಗಳ ಆವರಣದಲ್ಲಿದ್ದ ನಾಗರ ಕಲ್ಲಿಗೆ ಮಹಿಳೆಯರು ಹಾಲೆದರು.

ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಮಹಿಳೆಯರು ಮತ್ತು ಕುಟುಂಬ ಸದಸ್ಯರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿಷೇಕ ಮಾಡಿದರು.

ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ನಾಗರ ಕಲ್ಲಿಗೆ ಹಾಲೆರೆದರು. ಇನ್ನು ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಹಾಲೆರೆದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.

ಪಂಚಮಿ ಹೆಣ್ಣುಮಕ್ಕಳ ಹಬ್ಬವಾದ್ದರಿಂದ ಮಹಿಳೆಯರಲ್ಲಿ ವಿಶೇಷ ಸಂಭ್ರಮ ಮನೆಮಾಡಿತ್ತು. ಹೊಸ ಬಟ್ಟೆ ತೊಟ್ಟ ಹೆಣ್ಣು ಮಕ್ಕಳು ಬೆಳಿಗ್ಗೆಯೇ ದೇವಸ್ಥಾನಕ್ಕೆ ತೆರಳಿದರು. ಮನೆ ಮುಂದೆ ವಿಶೇಷ ಬಣ್ಣಗಳ ರಂಗೋಲಿ ಹಾಕಲಾಗಿತ್ತು. ಮನೆಯನ್ನು ತಳಿರುತೋರಣಗಳಿಂದ ಅಲಂಕರಿಸಿದ್ದರು. ಚಂದ್ರಗುತ್ತಿಯಲ್ಲಿ ಶ್ರದ್ಧಾಭಕ್ತಿಯ ಪಂಚಮಿ

ಸೊರಬ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಚಂದ್ರಗುತ್ತಿ ಗ್ರಾಮದಲ್ಲಿ ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಮಹಿಳೆಯರು ಬೆಳಗಿನ ಜಾವದಿಂದಲೇ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಂಡಿದ್ದರು. ಕೆಲವರು ಸಮೀಪದ ನಾಗರಕಟ್ಟೆಗೆ ತೆರಳಿ ನಾಗಮೂರ್ತಿಗೆ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಶ್ರೀ ರೇಣುಕಾಂಬ ದೇವಸ್ಥಾನದ ಆವರಣದಲ್ಲಿರುವ ನಾಗದೇವತೆಗೆ ಭಕ್ತರು ಹಾಲು ನೈವೇದ್ಯ ಅರ್ಪಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು. ಹಿಂದೂ ಪಂಚಾಂಗದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಾಗಿ ನಾಗರ ಪಂಚಮಿ ಹಬ್ಬವಾಗಿದ್ದು, ಶ್ರಾವಣ ಶುದ್ಧ ಪಂಚಮಿಯಂದು ಆಚರಿಸಲ್ಪಡುವ ಈ ಹಬ್ಬವು ಮುಂದಿನ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಇತ್ಯಾದಿ ಹಲವು ಹಬ್ಬದ ಶುಭ ಆಚರಣೆಗಳಿಗೆ ಮುನ್ನುಡಿಯಾಗಿದೆ.ತೀರ್ಥಹಳ್ಳಿ: ನಾಗದೇವರ ಗುಡಿಯಲ್ಲಿ ಪೂಜೆ

ತೀರ್ಥಹಳ್ಳಿ: ನಾಗರಪಂಚಮಿಯ ಅಂಗವಾಗಿ ಶುಕ್ರವಾರ ತಾಲೂಕಿನ ನಂಟೂರು ನಾಗ ದೇವಸ್ಥಾನ ಸೇರಿದಂತೆ ತಾಲೂಕಿನಾದ್ಯಂತ ಭಕ್ತರು ನಾಗನಿಗೆ ತನುವನ್ನು ಎರೆದು ಸಂಭ್ರಮಿಸಿದರು. ಪಟ್ಟಣದ ರಾಮೇಶ್ವರ ದೇವಸ್ಥಾನದ ಬಳಿ ಇರುವ ಪುರಾಣ ಪ್ರಸಿದ್ಧವಾದ ನಾಗದೇವರ ಗುಡಿ ಹಾಗೂ ಸೊಪ್ಪುಗುಡ್ಡೆಯ ನಾಗಬನದಲ್ಲಿ ಪೂಜೆ ಸಲ್ಲಿಸಲು ಬೆಳಗಿನಿಂದಲೇ ಉದ್ದನೆಯ ಸಾಲು ನಿರ್ಮಾಣವಾಗಿತ್ತು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸಹಿತರಾಗಿ ಅತ್ಯಂತ ಸಡಗರದಿಂದ ಪಾಲ್ಗೊಂಡಿದ್ದರು.ನಾಗರ ಕಲ್ಲಿಗೆ ಹಾಲೆರೆದು ಭಕ್ತರ ಸಂಭ್ರಮ

ಸೊರಬ: ನಾಗರ ಪಂಚಮಿ ಅಂಗವಾಗಿ ಶುಕ್ರವಾರ ತಾಲೂಕಿನ ಉರಗನಹಳ್ಳಿ ಗ್ರಾಮದ ಶ್ರೀ ಕಾಳಿಂಗೇಶ್ವರ ದೇವರಿಗೆ ಸಹಸ್ರಾರು ಭಕ್ತರು ಪೂಜೆ ಸಲ್ಲಿಸಿ, ದೇವಸ್ಥಾನದ ಮುಂಭಾಗ ನಾಗರ ಕಲ್ಲುಗಳಿಗೆ ಹಾಲೆರೆದು ಸಂಭ್ರಮಿಸಿದರು.

ಇಲ್ಲಿನ ದೇವರಿಗೆ ಹರಕೆ ಹೊತ್ತ ಸುತ್ತಲಿನ ತಾಲ್ಲೂಕು, ಜಿಲ್ಲೆಗಳ ಭಕ್ತರು ನಾಗರ ಪಂಚಮಿಯಂದು ಹರಕೆ ಒಪ್ಪಿಸುವುದು ರೂಢಿಯಲ್ಲಿದೆ. ಶ್ರೀ ಕಾಳೀಂಗೇಶ್ವರ ದೇವಸ್ಥಾನದ ಮುಂಭಾಗದ ನಾಗರ ಕಲ್ಲುಗಳಿಗೆ ಹಾಲೆಯುವುದರ ಜೊತೆಗೆ ಕಾಳಿಂಗೇಶ್ವರ ದೇವರಿಗೆ ಅರ್ಚನೆ, ನೈವೇದ್ಯ, ಮಂಗಳಾರತಿ ಮಾಡಿಸುವುದಕ್ಕೆ ಈ ಬಾರಿ ಭಕ್ತರು ಕಿಕ್ಕಿರಿದು ಸೇರಿರುವುದು ವಿಶೇಷವಾಗಿತ್ತು.ಆಗಮಿಸಿದ ಭಕ್ತರು ದೇವರಿಗೆ ಹಾಲು, ಎಳ್ಳು ಉಂಡೆ, ಶೆಂಗಾ ಉಂಡೆ, ರವೆ ಉಂಡೆ, ಪಾಯಿಸ, ಕೇಸರಿ ಬಾತ್, ಚಿತ್ರಾನ್ನ ಸೇರಿದಂತೆ ಹಲವು ಭಕ್ಷ್ಯಗಳನ್ನು ನೈವೇದ್ಯ ನೀಡಿದರು.

ಸಮರ್ಪಕ ಬಸ್ಸಿನ ವ್ಯವಸ್ಥೆ ಇಲ್ಲದ ಕಾರಣ ಭಕ್ತರು ಮುಖ್ಯ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಮಳೆಯಲ್ಲಿಯೇ ೨ ಕಿ.ಮೀ ನಡೆದು ಬಂದು ಪೂಜೆ ಸಲ್ಲಿಸಿ ಸಂಭ್ರಮಿಸಿದರು.ಅಲ್ಲದೇ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ, ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ಹಲವರು ಮನೆಯಲ್ಲಿಯೇ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಹುತ್ತ, ನಾಗರ ಮೂರ್ತಿಗೆ ಹಾಲೆರೆದರು.

ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು.ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಅರ್ಪಿಸಲಾಯಿತು.

ದಂಡಾವತಿ ತೀರದ ಅಶ್ವತ್ಥ ಮರದ ಕೆಳಗಿರುವ ನಾಗರ ಮೂರ್ತಿಗೆ ಮಹಿಳೆಯರು ಹಾಲೆರೆದರು. ಕಾನುಕೇರಿಯ ನಾಗರ ಕಟ್ಟೆಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ಮರೂರು ರಸ್ತೆಯ ನಾಗಚೌಡೇಶ್ವರಿ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಇರುವ ನಾಗರ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಶ್ರೀ ರಂಗನಾಥ ದೇವಸ್ಥಾನದ ಆವರಣ, ಹಿರೇಶಕುನದ ಅರಳಿ ಮರದ ಸಮೀಪದಲ್ಲಿರುವ ನಾಗರ ಮೂರ್ತಿಗೂ ಪೂಜೆ ನಡೆಯಿತು.