ಸಾರಾಂಶ
ಹಾನಗಲ್ಲ: ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗೋವಿನಜೋಳದ ಬೆಳೆಹಾನಿ ಸಮೀಕ್ಷೆ ಕೈಗೊಳ್ಳುವಲ್ಲಿ ಮೀನ-ಮೇಷ ಎಣಿಸುತ್ತಿರುವುದರಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ಮುಂಗಾರು ಆರಂಭದಿಂದಲೂ ಸತತ ಮಳೆ ಸುರಿಯುತ್ತಿರುವುದು ಇಲಾಖೆಗಳಿಗೆ ಮಾಹಿತಿಯಿದ್ದರೂ ರೈತರಿಗೆ ಅನ್ಯಾಯಮಾಡುತ್ತಿವೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ೩೦೦ಕ್ಕೂ ಅಧಿಕ ಟ್ರ್ಯಾಕ್ಟರ್ ರ‍್ಯಾಲಿಯೊಂದಿಗೆ ವಿರಕ್ತಮಠದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಲೆನಾಡಿನ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಹಾನಗಲ್ಲ ತಾಲೂಕಿನಲ್ಲಿ ಸತತ ಮಳೆ ಬಿದ್ದಿರುವುದರಿಂದ ಗೋವಿನಜೋಳ, ಸೋಯಾಅವರೆ, ಹತ್ತಿ ಸೇರಿದಂತೆ ಹಲವು ಬೆಳೆಗಳು ಹಾನಿಗೊಳಪಟ್ಟಿವೆ. ಇಲಾಖೆ ಸಿಬ್ಬಂದಿಗಳು ಗುಂಟೆವಾರು ಹಾನಿಯನ್ನು ದಾಖಲಿಸುತ್ತಿದ್ದಾರೆ. ಹಾನಿಯಾಗಿರುವುದು ಕಣ್ಣಿಗೆ ಕಂಡಿದ್ದರೂ ಸರ್ಕಾರ ಅದನ್ನು ದಾಖಲಿಸದಂತೆ ಅವರ ಕೈ ಕಟ್ಟಿ ಹಾಕಿದೆ ಎಂಬ ಮಾಹಿತಿಯಿದೆ. ತನ್ಮೂಲಕ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ತಾಲೂಕಿನಲ್ಲಿ ರೈತರ ಕೃಷಿಗೆ ಸಂಬಂಧಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಾಗದಂಥ ಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಇದನ್ನು ಸರಿಪಡಿಸಲು ಮುಂದಾಗುತ್ತಿಲ್ಲ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತಪರ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ಹಾವೇರಿಯಲ್ಲಿ ಇನ್ನಷ್ಟು ತೀವ್ರ ಗತಿಯ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಕೆಂಚಳ್ಳೇರ ಎಚ್ಚರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೆಳೆಹಾನಿ ಪರಿಶೀಲನೆಯಲ್ಲಿ ಶೇ. ೩೩ರಷ್ಟು ಹಾನಿಯಾಗಿದ್ದರೆ ಇಡೀ ಕ್ಷೇತ್ರವನ್ನು ಹಾನಿ ಎಂದು ಪರಿಗಣಿಸಬೇಕಿದೆ. ಆದರೆ ಅಧಿಕಾರಿಗಳು ಹಾನಿಯಾದ ಪ್ರದೇಶದಲ್ಲಿ ಕಣ್ಣಿಗೆ ಕಂಡಷ್ಟನ್ನು ಮಾತ್ರ ದಾಖಲೀಕರಣ ಮಾಡುತ್ತಿರುವುದು ಖಂಡನೀಯ. ಅಡಕೆ, ಮಾವು, ಶುಂಠಿ, ಹಸಿಮೆಣಸಿನಕಾಯಿಯ ಬೆಳೆವಿಮಾ ಕಂತು ಪಾವತಿಸಿ ವರ್ಷ ಕಳೆದಿದ್ದರೂ ಕಳೆದ ವರ್ಷದ ಪರಿಹಾರವನ್ನು ನೀಡದೇ ವಿಮಾ ಕಂಪನಿ ಹಾಗೂ ಸರ್ಕಾರದ ಅಧಿಕಾರಿಗಳು ಲೆಕ್ಕಾಚಾರದಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸಕಾಲಕ್ಕೆ ಪರಿಹಾರ ನೀಡದಿದ್ದರೆ ಶೇ. ೧೨ರಷ್ಟು ಬಡ್ಡಿ ಆಕರಿಸಿ ರೈತರಿಗೆ ಪಾವತಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದರೂ ಅಧಿಕಾರಿಗಳು ವಿಳಂಬ ಮಾಡಿದ್ದಾರೆ. ಈ ವರ್ಷ ಬಡ್ಡಿ ಸಹಿತ ಹಣ ನೀಡದಿದ್ದರೆ ರೈತರ ಪ್ರತಿಭಟನೆ ನಿಶ್ಚಿತ ಎಂದು ಹೇಳಿದರು. ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ತಾಲೂಕು ಆಡಳಿತಕ್ಕೆ ಬೆಳೆಹಾನಿಯ ಕುರಿತು ಸಮೀಕ್ಷೆ ಕೈಗೊಳ್ಳಲು ಹಲವು ಬಾರಿ ಮನವಿ ಸಲ್ಲಿಸಿದರೂ ಗಂಭೀರವಾಗಿ ಪರಿಗಣಿಸಲಿಲ್ಲ. ರೈತರು ಎಲ್ಲದಕ್ಕೂ ಪ್ರತಿಭಟನೆಗಿಳಿದೇ ಕೆಲಸ ಮಾಡಿಸಿಕೊಳ್ಳುವ ಪರಿಪಾಠ ಎದುರಾಗುತ್ತಿರುವುದು ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಕೃಷಿ-ಕಂದಾಯ ಅಧಿಕಾರಿಗಳು ತಾಲೂಕಿನೆಲ್ಲೆಡೆ ಸಂಪೂರ್ಣ ಸರ್ವೆ ಪೂರ್ಣಗೊಳಿಸಿ ನಂತರ ಜಿಲ್ಲಾಡಳಿತಕ್ಕೆ ಸಲ್ಲಿಸಲಿ. ಸರ್ಕಾರ ಬೆಳೆಹಾನಿಯ ವಸ್ತುಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರಾಣಿಗಳ ದಾಳಿಗೆ ಹಾನಿಯಾದ ಬೆಳೆಗಳಿಗೆ ಇಳುವರಿ ಮತ್ತು ಮಾರುಕಟ್ಟೆ ದರವನ್ನಾಧರಿಸಿ ಪರಿಹಾರ ನಿಗದಿಪಡಿಸಬೇಕು. ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್.ಮುಲ್ಲಾ, ಮಹ್ಮದಗೌಸ ಪಾಟೀಲ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ಕಾರ್ಯದರ್ಶಿಗಳಾದ ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ ಮಾತನಾಡಿದರು. ಮಹೇಶ ವಿರುಪಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ಸೋಮಣ್ಣ ಜಡೆಗೊಂಡರ, ಷಣ್ಮುಖ ಅಂದಲಗಿ, ಅಜ್ಜನಗೌಡ ಕರೆಗೌಡರ, ಮಲ್ಲನಗೌಡ ಮತ್ತಿಗಟ್ಟಿ, ಶಂಭುಗೌಡ ಪಾಟೀಲ, ಶ್ರೀಧರ ಮಲಗುಂದ, ನಿಂಗನಗೌಡ ಪಾಟೀಲ, ರವಿ ಸಂಕಪಾಳೆ, ಮಂಜು ತೆಲಗಡ್ಡಿ, ರುದ್ರಗೌಡ ಪಾಟೀಲ, ಮಂಜು ಪವಾರ, ಶಿವಪ್ಪ ಹುಲ್ಲಮನಿ, ವೀರಭದ್ರಗೌಡ ಪಾಟೀಲ, ಮೂಕಯ್ಯ ಗುರುಲಿಂಗಮ್ಮನವರ, ಮಾಲತೇಶ ಕಲ್ಲಿಕರೆಣ್ಣನವರ, ಯಶೋಧರ ವೀರಾಪುರ, ಗಂಗಾಧರ ಕೊಪ್ಪದ, ರಿಯಾಜಅಹ್ಮದ ಸವಣೂರ, ಅಲ್ತಾಫ್‌ಅಹ್ಮದ ಅಂಚಿ, ಅನಿಲ ಚಿಕ್ಕಾಂಶಿ, ನಾಗರಾಜ ಕಬ್ಬೂರ, ಸಂಜೀವಗೌಡ ಪಾಟೀಲ, ವಿನಾಯಕ ಕಮಡೊಳ್ಳಿ, ಕರಬಸಪ್ಪ ಮಾಕೊಪ್ಪದ, ಶಿವಯೋಗಿ ಬಾಳಿಹಳ್ಳಿ, ರುದ್ರೇಶ ಗೊಂದಿ ಇತರರು ಪಾಲ್ಗೊಂಡಿದ್ದರು. ಅಧಿಕಾರಿಗಳಾದ ಸಂಗಮೇಶ ಹಕ್ಲಪ್ಪನವರ, ಮಂಜುನಾಥ ಬಣಕಾರ, ಎಸ್.ಆನಂದ್, ವಿಮಾ ಕಂಪನಿಯ ಅಧಿಕಾರಿ ಬಸವರಾಜ ಹಿರೇಮಠ, ಗಿರೀಶ ಚೌಗಲೆ ಮೊದಲಾದವರು ಸಭೆಯಲ್ಲಿ ಹಾಜರಿದ್ದರು. ತಾಲೂಕಿನಲ್ಲಿನ ಕೃಷಿಗೆ ಸಂಬಂಧಿಸಿದ ಬೆಳೆಹಾನಿ, ಪರಿಹಾರ ವಿಳಂಬದ ಸಮಸ್ಯೆಗಳಿಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಬೆಳೆಹಾನಿಯಾದ ಕ್ಷೇತ್ರಗಳ ಸಂಪೂರ್ಣ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ. ಹಿಂದಿನ ಕೆಲವು ಪರಿಹಾರಗಳು ತಾಂತ್ರಿಕ ಸಮಸ್ಯೆಗಳಿಂದ ನೆನೆಗುದಿಗೆ ಬಿದ್ದಿವೆ. ದಾಖಲೆಗಳನ್ನು ಪರಿಶೀಲಿಸಿ, ಇತ್ಯರ್ಥಪಡಿಸಲಾಗುವುದು. ತಾಲೂಕು ಆಡಳಿತದ ಗಮನಕ್ಕೆ ಬಂದಿರುವ ಸಮಸ್ಯೆಗಳನ್ನು ನಮ್ಮ ಹಂತದಲ್ಲಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದೇವೆ ಎಂದು ತಹಸೀಲ್ದಾರ್ ಎಸ್. ರೇಣುಕಮ್ಮ ಹೇಳಿದರು.