ಜ್ಞಾನದ ಮೇರು ಪರ್ವತ ಶ್ರೀಅಲ್ಲಮರು: ರಾಜಯೋಗೀಂದ್ರ ಶ್ರೀ

| Published : Nov 11 2024, 11:49 PM IST

ಜ್ಞಾನದ ಮೇರು ಪರ್ವತ ಶ್ರೀಅಲ್ಲಮರು: ರಾಜಯೋಗೀಂದ್ರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ತೇರದಾಳದ ಶೂನ್ಯಸಿಂಹಾಸನಾಧೀಶ್ವರ ಶ್ರೀಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಎಲ್ಲ ೯ ಕಳಶಗಳನ್ನು ಶಾಸ್ತ್ರೋಕ್ತ ವಿಧಿ-ವಿಧಾನಗಳಿಂದ ವಿದ್ಯುಕ್ತವಾಗಿ ಉಪಸ್ಥಿತ ಶ್ರೀಗಳ, ನಾಡೋಜ ಜಗದೀಶ ಗುಡಗುಂಟಿ ಸೇರಿದಂತೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೂಜಿಸಿ ಗೋಪುರಗಳ ಕಳಸಾರೋಹಣ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಜಗತ್ತಿನ ಎಲ್ಲ ದಾರ್ಶನಿಕರನ್ನು ಒಟ್ಟುಗೂಡಿಸಿದರೂ ಶ್ರೀಅಲ್ಲಮಪ್ರಭುಗಳಿಗೆ ಸಾಟಿಯಾಗಲು ಸಾಧ್ಯವಿಲ್ಲ. ಅಂಥ ಮೇರು ಜ್ಞಾನದ ಪರ್ವತವೆ ಅಲ್ಲಮರು. ಐದೂ ಇಂದ್ರೀಯಗಳಿಗೆ ಮೀರಿದವರು, ಕಂಡೂ ಕಾಣದಂತಿರುವವರು. ಇದ್ದೂ ಇಲ್ಲದಂತಿರುವವರು ಅಲ್ಲಮಪ್ರಭುಗಳಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಜಿ ಹೇಳಿದರು.

ಸೋಮವಾರ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ನೂತನ ದೇವಸ್ಥಾನಕ್ಕೆ ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಬಳಿಕ ಜರುಗಿದ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಂದಿನ ಶರಣರ ಉಗಮಕ್ಕೆ ಹಾಗೂ ಎಲ್ಲರಲ್ಲಿಯ ಸಮಾಜೋದ್ಧಾರದ ಹೊಂಬೆಳಕನ್ನು ಹೊರಚೆಲ್ಲುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಅಹಿರ್ನಿಶಿ ಶ್ರಮಿಸುವ ಶರಣರ ಜ್ಞಾನಸಾಗರಕ್ಕೆ ಮೂಲಕಾರಣರಾದವರು ಅಲ್ಲಮರು. ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶರಾದ ಅಲ್ಲಮರು ಬಯಲಿನಲ್ಲೆ ಬಯಲಾಗಿದ್ದವರು. ಅಂತಹ ಶ್ರೇಷ್ಠ ದೇವನಿಗೆ ಜೀರ್ಣೋದ್ಧಾರಗೊಳಿಸಿ ನಿರ್ಮಿಸಿದ ಭವ್ಯ ಮಂದಿರ ಅತ್ಯಂತ ಸುಂದರ ಮತ್ತು ಸುಭದ್ರವಾಗಿದ್ದು ತಮ್ಮೆಲ್ಲರ ಭಕ್ತಿಯ ಗಟ್ಟಿತನದ ಪ್ರತೀಕವಾಗಿದೆ ಎಂದರು.

ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಶಿವಮೊಗ್ಗದ ಬಳ್ಳಿಗಾವೆಯಲ್ಲಿ ಜನಿಸಿದ ಅಲ್ಲಮರು ಕಲ್ಯಾಣಾರ್ಥವಾಗಿ ಕನ್ನಡ ನಾಡು ಮಾತ್ರವಲ್ಲ ಹಿಮಾಲಯದವರೆಗೂ ಸಂಚರಿಸಿ, ಶ್ರೀಶೈಲಕ್ಕೆ ಬಂದರು. ಅಲ್ಲಿಂದ ಕಲ್ಯಾಣಕ್ಕೆ, ಸೊಲ್ಲಾಪೂರ ಸೇರಿದಂತೆ ನಾಡಿನ ಉದ್ದಗಲಕ್ಕೂ ಸಂಚರಿಸಿ ಭಕ್ತಿಯ ಹಾಗೂ ಜ್ಞಾನದ, ಸಮಸಮಾಜದ ತಮ್ಮ ಕನಸನ್ನು ನನಸಾಗಿಸಲು ಜಾಗೃತಿ ಮೂಡಿಸಿದರು ಎಂದ ಅವರು, ಅಲ್ಲಮನೆಂದರೆ ಹಾಗೂ ಗುಹೇಶ್ವರನೆಂದರೆ ಏನೆಂಬುದನ್ನು ಮತ್ತು ಎಲ್ಲವೂ ತನ್ನಲ್ಲಿದ್ದು ಅದನ್ನು ಜಾಗೃತಗೊಳಿಸುವ ಚಿಂತನೆ ಮಾಡುವ ಬಗ್ಗೆ ವಿವರಿಸಿದರು.

ನಿಡಸೋಸಿ ಸಿದ್ಧಸಂಸ್ಥಾನಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಶ್ರೀಗಳು, ಹಿಪ್ಪರಗಿ ಸಂಗಮೇಶ್ವರ ಆಶ್ರಮದ ಪೂಜ್ಯ ಪ್ರಭು ಮಹಾರಾಜರು, ಕಾರ್ಯಕ್ರಮದ ರುವಾರಿಗಳಾದ ಹಂದಿಗುಂದದ ಶಿವಾನಂದ ಶ್ರೀಗಳು, ಶೇಗುಣಸಿಯ ಡಾ.ಮಹಾಂತಪ್ರಭು ಶ್ರೀಗಳು, ಚಿಮ್ಮಡದ ಪ್ರಭು ಶ್ರೀ, ಕುರುಹಿನಶೆಟ್ಟಿ ಸಮಾಜದ ಜಗದ್ಗುರು ಶಿವಶಂಕರ ಶಿವಾಚಾರ್ಯರು ಸೇರಿದಂತೆ ವಿವಿಧ ಪೂಜ್ಯರು, ನಾಡೋಜ ಜಗದೀಶ ಗುಡಗುಂಟಿಮಠ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಮಾತನಾಡಿದರು. ಹಿರೇಮಠದ ಗಂಗಾಧರ ದೇವರು, ತೆಲಂಗಾನದ ವಿರುಪಾಕ್ಷ ದೇವರು, ಶಾಸಕ ಸಿದ್ದು ಸವದಿ ಸೇರಿದಂತೆ ಪೂಜ್ಯರು, ಗಣ್ಯರು ಉಪಸ್ಥಿತರಿದ್ದರು.

ದೇವಸ್ಥಾನದ ಶಿಲ್ಪಿ ಉಡುಪಿಯ ರಾಜಶೇಖರ ಹೆಬ್ಬಾರ ದಂಪತಿಗೆ, ಪುಷ್ಪಾತಾಯಿ ಗುಡಗುಂಟಿಮಠ ಹಾಗೂ ದಾನಿಗಳು, ಬೆಳ್ಳಿ-ಬಂಗಾರ ಸೇವೆ ಸಲ್ಲಿಸಿದ ಮಲ್ಲಪ್ಪಣ್ಣ ಜಮಖಂಡಿ, ಚಂದ್ರವ್ವ ಜಗದಾಳ, ಡಾ.ಶಂಕರ ಅಥಣಿ, ಅಜಿತ ದೇಸಾಯಿ, ಭಾರತಿ ಆಸಂಗಿ, ಪ್ರಭುಗೌಡ ಪಾಟೀಲ, ಭೀಮಗೊಂಡ ಸದಲಗಿ, ಶಿವಶಂಕರ ಮುಕರಿ, ಶಿವಾನಂದ ಬಡಿಗೇರ, ನಾಗಪ್ಪ ಸನದಿ, ಪ್ರಕಾಶ ಕಾಲತಿಪ್ಪಿ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಹಾಪ್ರಸಾದ ವಿತರಣೆಯಾಯಿತು.

ಪ್ರಾತಃಕಾಲದಲ್ಲಿ ಕರ್ತೃಗದ್ದುಗೆಗೆ ರುದ್ರಾಭಿಷೇಕ, ಬೆಳಗ್ಗೆ ಎಲ್ಲ ಮಠಾಧೀಶರಿಂದ ಪ್ರಧಾನ ದೊಡ್ಡ ಕಳಸ ಸೇರಿದಂತೆ ನವಕಳಸಗಳ ಆರೋಹಣ ಜರುಗಿತು. ಬಳಿಕ ಪೂಜ್ಯರಿಂದ ದೇವಸ್ಥಾನದ ಒಳಗೆ-ಹೊರಗೆ ಜ್ಯೋತಿ ಬೆಳಗಿಸುವ ಮೂಲಕ ಜೀರ್ಣೋದ್ಧಾರಗೊಂಡ ಅಲ್ಲಮಪ್ರಭು ದೇವಸ್ಥಾನವು ಲೋಕಾರ್ಪಣೆಗೊಂಡಿತು. ಬಳಿಕ ಪಂಚ ನಂದಿಕೋಲು ಸಮೇತ ಪಲ್ಲಕ್ಕಿ ಉತ್ಸವ ಜರುಗಿತು. ಪ್ರಾತಃಕಾಲದಿಂದ ರಾತ್ರಿವರೆಗೂ ಪಟ್ಟಣ, ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸಹಸ್ರಾರು ಭಕ್ತಾಧಿಗಳು ಸೇರಿದ್ದರು.