ಮೆಟ್ರೋಗೆ ಫೀಡರ್‌ ಬಸ್‌ಗಳೇ ಸಮಸ್ಯೆ!

| Published : May 30 2024, 12:45 AM IST

ಮೆಟ್ರೋಗೆ ಫೀಡರ್‌ ಬಸ್‌ಗಳೇ ಸಮಸ್ಯೆ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗ್ಗೆ ಮನೆಯಿಂದ ಮೆಟ್ರೋ ನಿಲ್ದಾಣ ತಲುಪಲು ಹಾಗೂ ಸಂಜೆ ಕಚೇರಿಯಿಂದ ಮೆಟ್ರೋ ನಿಲ್ದಾಣ ತಲುಪಲು ಪ್ರಯಾಣಿಕರಿಗೆ ನಿಯಮಿತ ಬಸ್ಸು ಸೇರಿ ಇತರೆ ವಾಹನ ಸೌಕರ್ಯಗಳ ಲಭ್ಯತೆ ಇಲ್ಲವಾಗಿರುವುದು.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೊದಲ, ಕೊನೆಯ ಗಮ್ಯ ಸಂಪರ್ಕ ಸಮಸ್ಯೆ (ಫಸ್ಟ್‌, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ) ನಿವಾರಣೆಗೆ ವೈಜ್ಞಾನಿಕ ಸರ್ವೆ ನಡೆಸಬೇಕು. ಮುಖ್ಯವಾಗಿ ವರ್ಷಾಂತ್ಯಕ್ಕೆ ಪ್ರಯಾಣಿಕ ಸೇವೆಗೆ ಲಭ್ಯವಾಗುವ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ಮಾರ್ಗಕ್ಕೆ ಈಗಲೇ ಫೀಡರ್‌ ಬಸ್‌ ಒದಗಿಸುವ ಬಗ್ಗೆ ಕ್ರಮ ವಹಿಸುವಂತೆ ಟೆಕ್ಕಿಗಳು, ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಬೆಳಗ್ಗೆ ಮನೆಯಿಂದ ಮೆಟ್ರೋ ನಿಲ್ದಾಣ ತಲುಪಲು ಹಾಗೂ ಸಂಜೆ ಕಚೇರಿಯಿಂದ ಮೆಟ್ರೋ ನಿಲ್ದಾಣ ತಲುಪಲು ಪ್ರಯಾಣಿಕರಿಗೆ ನಿಯಮಿತ ಬಸ್ಸು ಸೇರಿ ಇತರೆ ವಾಹನ ಸೌಕರ್ಯಗಳ ಲಭ್ಯತೆ ಇಲ್ಲ. ಅದೇ ರೀತಿ ಸಂಜೆ ಮೆಟ್ರೋ ನಿಲ್ದಾಣದಿಂದ ಮನೆ ಸೇರಲೂ ಈ ಸಮಸ್ಯೆ ಇದೆ. ಹೀಗಾಗಿಯೇ ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷಿಸಿದಷ್ಟು ಹೆಚ್ಚುತ್ತಿಲ್ಲ.

ಸದ್ಯ ನಮ್ಮ ಮೆಟ್ರೋದ ಹಸಿರು (30.32 ಕಿ.ಮೀ), ನೇರಳೆ ಮಾರ್ಗ (43.49 ಕಿ.ಮೀ) ಸೇರಿ 73.81 ಕಿಮೀ ಮೆಟ್ರೋ ಮಾರ್ಗದ 66 ನಿಲ್ದಾಣಗಳ ಪೈಕಿ 45 ನಿಲ್ದಾಣಗಳಿಗೆ ಬಿಎಂಟಿಸಿ 170ಕ್ಕೂ ಹೆಚ್ಚು ಫೀಡರ್‌ ಬಸ್ಸುಗಳ ಸೇವೆ ಒದಗಿಸುತ್ತಿದೆ. ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ಜನ ಫೀಡರ್‌ ಬಸ್ಸುಗಳನ್ನು ಬಳಸುತ್ತಿದ್ದಾರೆ. ಆದರೆ, ಇದು ಸಮರ್ಪಕವಾಗಿಲ್ಲ. ವಾರಾಂತ್ಯ, ದಟ್ಟಣೆ ಪ್ರಯಾಣದ ವೇಳೆ, ವಿಶೇಷ ಸಂದರ್ಭದಲ್ಲಿ ಬಸ್ಸುಗಳ ಅಗತ್ಯ ಹೆಚ್ಚು, ಕಡಿಮೆಯಾಗುತ್ತದೆ ಎಂಬುದು ಪ್ರಯಾಣಿಕರ ದೂರು.

ಹೀಗಾಗಿ ಯಾವ ಮಾರ್ಗದಲ್ಲಿ ಎಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ದಿನದ ಯಾವ ವೇಳೆ ಫೀಡರ್‌ ಬಸ್ಸುಗಳ ಅಗತ್ಯವಿದೆ ಎಂಬುದರ ವೈಜ್ಞಾನಿಕ ಸರ್ವೆ ಆಗಬೇಕು. ಮುಂದೆ ಇದಕ್ಕೆ ಅನುಗುಣವಾಗಿ ಫೀಡರ್‌ ಬಸ್‌ ಒದಗಿಸಬೇಕು. ಅದೇ ರೀತಿ ಬಿಬಿಎಂಪಿಯಿಂದ ಅಗತ್ಯ ಪಾದಚಾರಿ ಮಾರ್ಗ, ಬೈಸಿಕಲ್‌ ಮಾರ್ಗ ರೂಪಿಸಿಕೊಡಬೇಕು. ಇದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದು ಮೆಟ್ರೋ ಸಾರಿಗೆ ತಜ್ಞರು ಹೇಳುತ್ತಾರೆ.

ಅಕ್ಟೋಬರ್‌, ನವೆಂಬರ್‌ ವೇಳೆಗೆ ಮೆಟ್ರೋದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ಜನಸಂಚಾರಕ್ಕೆ ತೆರೆಯುವ ನಿರೀಕ್ಷೆಯಿದೆ. ಈ ಮಾರ್ಗದ ಪ್ರಮುಖ ಕಾರಿಡಾರ್‌ ಎಲೆಕ್ಟ್ರಾನಿಕ್‌ ಸಿಟಿಗೆ ಉದ್ಯೋಗಕ್ಕೆ ತೆರಳುವ ಟೆಕ್ಕಿಗಳಿಗೆ ಈ ಮೆಟ್ರೋ ಮಾರ್ಗ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಆದರೆ ನೇರಳೆ, ಹಸಿರು ಮಾರ್ಗದಂತೆ ಕನೆಕ್ಟಿವಿಟಿ ತೊಂದರೆಯಾಗುವ ಸಾಧ್ಯತೆಯೂ ಇದೆ.

ಹೀಗಾಗಿ ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಅಥಾರಿಟಿ (ಎಲ್ಸಿಟಾ) ಹಳದಿ ಮಾರ್ಗಕ್ಕೆ ಅಗತ್ಯವಿರುವ ಫೀಡರ್‌ ಬಸ್ಸುಗಳ ಕುರಿತು ಈಚೆಗೆ ಎಲ್ಲ ಕಂಪನಿಗಳ ಜೊತೆಗೂಡಿ ಸರ್ವೆ ನಡೆಸಿ ಬಿಎಂಟಿಸಿಗೆ ಮನವಿ ನೀಡಿದೆ. ಅದರಂತೆ ಈ ಮಾರ್ಗದ ಇನ್ಫೋಸಿಸ್‌ ಹಾಗೂ ಕೋನಪ್ಪನ ಅಗ್ರಹಾರ ನಿಲ್ದಾಣಗಳಿಂದ 15 ಸ್ಥಳಗಳಿಗೆ ಸಂಪರ್ಕ ಕಲ್ಪಿಸುವಂತೆ ಎಲ್ಸಿಟಾದಿಂದ ಕೋರಲಾಗಿದೆ.

ಸದ್ಯ ಎಲೆಕ್ಟ್ರಾನಿಕ್‌ ಸಿಟಿ ಜನತೆ ಮೆಟ್ರೋ ಸಂಪರ್ಕಿಸಬೇಕಾದರೆ 22 ಕಿ.ಮೀ. ಕ್ರಮಿಸಿ ದಕ್ಷಿಣದ ಸಿಲ್ಕ್‌ಬೋರ್ಡ್‌ ತಲುಪಬೇಕಿದೆ. ಪ್ರಸ್ತುತ ಎಲ್ಸಿಟಾ ಟೆಕ್ಕಿಗಳಿಗೆ ಉಚಿತವಾಗಿ ಫೀಡರ್‌ ಬಸ್‌ ಒದಗಿಸುತ್ತಿದ್ದು, 500 ಜನ ಇದನ್ನು ಬಳಸುತ್ತಿದ್ದಾರೆ. ಆರ್‌.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ಜನಸಂಚಾರಕ್ಕೆ ತೆರೆದುಕೊಳ್ಳುವ ಮೊದಲೇ ಬಿಎಂಟಿಸಿ ಸಮೀಕ್ಷೆ ನಡೆಸಿ ಫೀಡರ್‌ ಬಸ್ಸುಗಳನ್ನು ಒದಗಿಸುವ ಕುರಿತು ಕ್ರಮ ವಹಿಸಬೇಕು. ಸುಮಾರು 40 ಫೀಡರ್‌ ಬಸ್ಸುಗಳ ಅಗತ್ಯವಿದೆ ಎಂದು ನಗರ ಸಾರಿಗೆ ತಜ್ಞರು ಹೇಳಿದರು.ಸಮಿಕ್ಷೆಯಾಗಿದೆ: ಬಿಎಂಟಿಸಿ

ಬಿಎಂಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ‘ಹಳದಿ ಮಾರ್ಗಕ್ಕಾಗಿ ಈಗಾಗಲೇ ಪ್ರಾಥಮಿಕವಾಗಿ ಸರ್ವೆ ನಡೆಸಿ ಯಾವ್ಯಾವ ಮಾರ್ಗಕ್ಕೆ ಎಷ್ಟು ಫೀಡರ್‌ ಬಸ್‌ ಒದಗಿಸಬೇಕು ಎಂಬುದನ್ನು ತಿಳಿಯಲಾಗಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಕ್ಕೂ ಮುನ್ನ ಇನ್ನೊಮ್ಮೆ ಅಂತಿಮ ಸರ್ವೆ ನಡೆಸಿ ಬಸ್ಸುಗಳ ಸೇವೆ ಒದಗಿಸಲಾಗುವುದು’ ಎಂದರು.

ನಾವು ಮೆಟ್ರೋ ಫಸ್ಟ್‌, ಲಾಸ್ಟ್‌ ಮೈಲಿ ಕನೆಕ್ಟಿವಿಟಿ ಬಗ್ಗೆ ಪರ್ಸನಲ್‌ 2 ಪಬ್ಲಿಕ್‌ ಎಂಬ ಸರ್ವೆ ನಡೆಸಿದ್ದೆವು. ಬಿಎಂಟಿಸಿ ಅಗತ್ಯ ಫೀಡರ್‌ ಬಸ್ಸುಗಳನ್ನು, ಬಿಬಿಎಂಪಿ ಅಗತ್ಯ ಪಾದಚಾರಿ, ಸೈಕಲ್‌ ಮಾರ್ಗ ಒದದಿಸಿಕೊಟ್ಟಲ್ಲಿ ಖಂಡಿತ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

- ಶ್ರೀವಾಸ ಅಲವಿಲ್ಲಿ, ನಗರ ಸಾರಿಗೆ ತಜ್ಞ