ಹಾಲು ಉತ್ಪಾದಕರಿಗೆ ಚಾಮುಲ್‌ನಿಂದ 4 ರು.ಹೆಚ್ಚಳ : ಹೈನುಗಾರರಿಗೆ ಯುಗಾದಿ ಹಬ್ಬದ ಮುನ್ನಾ ಉಡುಗೊರೆ

| N/A | Published : Mar 30 2025, 03:04 AM IST / Updated: Mar 30 2025, 09:17 AM IST

Milk Packet
ಹಾಲು ಉತ್ಪಾದಕರಿಗೆ ಚಾಮುಲ್‌ನಿಂದ 4 ರು.ಹೆಚ್ಚಳ : ಹೈನುಗಾರರಿಗೆ ಯುಗಾದಿ ಹಬ್ಬದ ಮುನ್ನಾ ಉಡುಗೊರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ಜಿಲ್ಲೆಯ ಹೈನುಗಾರರಿಗೆ ಯುಗಾದಿ ಹಬ್ಬದ ಮುನ್ನಾ ದಿನ ಚಾಮುಲ್‌ ಆಡಳಿತ ಮಂಡಳಿ 4 ರುಪಾಯಿ ಹೆಚ್ಚಳ ಮಾಡಿ ಯುಗಾದಿಗೆ ಹೆಚ್ಚಳದ ಉಡುಗೊರೆ ನೀಡಿದೆ.

  ಚಾಮರಾಜನಗರ :  ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್) ಜಿಲ್ಲೆಯ ಹೈನುಗಾರರಿಗೆ ಯುಗಾದಿ ಹಬ್ಬದ ಮುನ್ನಾ ದಿನ ಚಾಮುಲ್‌ ಆಡಳಿತ ಮಂಡಳಿ 4 ರುಪಾಯಿ ಹೆಚ್ಚಳ ಮಾಡಿ ಯುಗಾದಿಗೆ ಹೆಚ್ಚಳದ ಉಡುಗೊರೆ ನೀಡಿದೆ.

ಚಾಮುಲ್‌ ನೂತನ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ಯುಗಾದಿ ಹಬ್ಬದ ಮುನ್ನಾ ದಿನ (ಶನಿವಾರ) ಚಾಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಲೀಟರ್‌ ಹಾಲಿಗೆ ೪ ರು.ಹೆಚ್ಚಳದಲ್ಲಿ ಹಾಲು ಖರೀದಿದಲು ಒಪ್ಪಿಗೆ ದೊರೆತಿದೆ.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ 461 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿ ದಿನ ಸರಾಸರಿ 2.61ಲಕ್ಷ ಕೇಜಿ ಹಾಲು ಸಂಗ್ರಹಿಸುತ್ತಿದೆ. ಪ್ರತಿ ದಿನ ಚಾಮರಾಜನಗರ ಒಕ್ಕೂಟ ತಮಿಳುನಾಡು, ಕೇರಳ ಮಾರುಕಟ್ಟೆ ಸೇರಿ ಪ್ರತಿ ದಿನ ಸರಾಸರಿ ೬೫ ಸಾವಿರ ಲೀಟರ್ ಹಾಲು, 16.845ಕೇಜಿ ಮೊಸರು ಹಾಗೂ ದೇಶದ ವಿವಿಧ ಭಾಗಗಳಿಗೆ 64,789 ಲೀಟರ್ ಯುಎಚ್ ಟಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ.

ಮುಂದುವರೆದು ಚಾಮರಾಜನಗರ ಜಿಲ್ಲೆಯಲ್ಲಿ ಹೈನೋದ್ಯಮದ ಸರ್ವತೋಮುಖ ಬೆಳವಣಿಗೆಗೆ ನಾಂದಿಯಾಗುವಂತೆ ರೈತ ಬಾಂಧವರು ಹಾಗೂ ಹೈನುಗಾರರ ಹಿತದೃಷ್ಠಿಯಿಂದ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ಶನಿವಾರ ನಡೆದ ಜಿಲ್ಲಾ ಹಾಲು ಒಕ್ಕೂಟದ 122 ನೇ ಆಡಳಿತ ಮಂಡಳಿ ಸಭೆಯಲ್ಲಿ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಪ್ರತಿ ಲೀಟ‌ರ್‌ಗೆ ೪ ರು.ಗಳನ್ನು ಬರುವ ಏ.1 ರಿಂದ ಅನ್ವಯವಾಗುವಂತೆ ಹೆಚ್ಚಿಸಿ ಹೊಸ ವರ್ಷಕ್ಕೆ ಯುಗಾದಿ ಹಬ್ಬದ ಉಡುಗೊರೆಯನ್ನು ನೀಡಿದೆ.

ಅದರಂತೆ ಹಾಲು ಉತ್ಪಾದಕರು ಸರಬರಾಜು ಮಾಡುವ ಶೇ.4.0 ಜಿಡ್ಡು ಹಾಗೂ ಶೇ.8.5 ಜಿಡ್ಡೇತರ ಘನಾಂಶದ ಪ್ರತಿ ಲೀಟರ್ ಹಾಲಿಗೆ 35.20 ರು. ಒಕ್ಕೂಟದಿಂದ ಹಾಗೂ ಸರ್ಕಾರದ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ 5 ರು ಸೇರಿ ಉತ್ಪಾದಕರಿಗೆ ಒಟ್ಟು 40.20 ಪೈಸೆ ಸಿಗಲಿದೆ.

ಹಲವು ಸೌಲಭ್ಯ:

ಇತ್ತೀಚಿನ ದಿನಗಳಲ್ಲಿ ಖಾಸಗಿ ಡೈರಿಗಳು ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ಆಮಿಷ ತೋರುತ್ತಿದೆ. ಚಾಮುಲ್‌ನಿಂದ ರೈತರಿಗೆ ರಾಸು ವಿಮೆ, ಪಶು ವೈದ್ಯಕೀಯ ಸೇವೆ, ಸದಸ್ಯರಿಗೆ 1 ಲಕ್ಷ ವಿಮೆ, ಸದಸ್ಯರು ಮರಣ ಹೊಂದಿದರೆ 15 ಸಾವಿರ ಪರಿಹಾರ, ಒಕ್ಕೂಟವು ಕಟ್ಟಡ ನಿರ್ಮಾಣಕ್ಕೆ 3 ಲಕ್ಷ ಅನುದಾನ ಕಹಾಮದಿಂದ 4.5 ಲಕ್ಷ ಅನುದಾನ, ರೈತ ಸದಸ್ಯರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಖಾಸಗಿಯವರ ಆಮಿಷಕ್ಕೆ ಒಳಗಾಗಿ ಸಹಕಾರ ವ್ಯವಸ್ಥೆಗೆ ದಕ್ಕೆ ತರುವಂತಹ ನಿರ್ಧಾರಗಳನ್ನು ರೈತರು ಮಾಡದೆ ನಿರಂತರ ಮಾರುಕಟ್ಟೆ ಒದಗಿಸುವ "ನಂದಿನಿ " ಗೆ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ವ್ಯವಸ್ಥೆಯನ್ನು ಬಲಪಡಿಸುವಂತೆ ಚಾಮುಲ್‌ ಅಧ್ಯಕ್ಷ ಎಂ.ನಂಜುಂಡಸ್ವಾಮಿ,ವ್ಯವಸ್ಥಾಪಕ ನಿರ್ದೇಶಕ ಕೆ.ರಾಜಕುಮಾರ್‌ ಹಾಗೂ ನಿರ್ದೇಶಕರು ಕೋರಿದ್ದಾರೆ.