ಸಾರಾಂಶ
ಇದು ಮಹಾತ್ಮಾಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಕರ್ಮಕಾಂಡ
ಹತ್ತು ವರ್ಷಗಳಿಂದ ಪ್ರತಿ ವರ್ಷವೂ ಕೆರೆ ಹೂಳೆತ್ತಲು ಕೋಟಿ ಕೋಟಿ ಖರ್ಚುಐದು ಗ್ರಾಮ ಪಂಚಾಯಿತಿಗಳಿಂದ ಒಂದೇ ಕೆರೆಯಲ್ಲಿ ಕಾಮಗಾರಿ
ಹತ್ತು ವರ್ಷಗಳಿಂದ ಕೆರೆ ಆಳವೂ ಆಗಿಲ್ಲ, ಅಗಲವೂ ಆಗಿಲ್ಲಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕೆರೆಯಂಗಳದ ಹೂಳು ತೆಗೆದು, ಕೆರೆಯಲ್ಲಿಯೇ ಚೆಲ್ಲಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಹೀಗೆ ಮಾಡುತ್ತಲೇ ಹತ್ತಾರು ಕೋಟಿ ರುಪಾಯಿ ವ್ಯಯ ಮಾಡಲಾಗಿದೆ.ಅಧಿಕಾರಿಗಳ ಈ ಹುಚ್ಚಾಟದಿಂದ ಕೆರೆಯು ಆಳವೂ, ಆಗಿಲ್ಲ, ಅಗಲವೂ ಆಗಿಲ್ಲ. ಆದರೆ, ಕೋಟಿ ಕೋಟಿ ರುಪಾಯಿ ಮಾತ್ರ ಮಣ್ಣುಪಾಲಾಗಿದೆ.
ಹೌದು, ಇದು ಕೊಪ್ಪಳ ತಾಲೂಕಿನ ಬಿ. ಹೊಸಳ್ಳಿ (ಬಹದ್ದೂರಬಂಡಿ ಹೊಸಳ್ಳಿ) ಗ್ರಾಮದ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕರ್ಮಕಾಂಡ.ಕೆರೆಯ ಹೂಳು ತೆಗೆದು ಕೆರೆಯ ದಡಕ್ಕೆ ಹಾಕಿದರೆ ಕೆರೆಯೂ ಆಳವಾಗುತ್ತದೆ. ಕೆರೆಯಲ್ಲಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚುತ್ತದೆ. ಆದರೆ, ಈ ಕೆರೆಯಲ್ಲಿ ಕೆರೆಯಂಗಳದಲ್ಲಿಯೇ ಹೂಳು ತೆಗೆದು, ಕೆರೆಯ ಅಂಗಳದಲ್ಲಿಯೇ ಹಾಕಲಾಗುತ್ತದೆ. ಮಳೆಗಾಲದಲ್ಲಿ ನೀರು ಬಂದು ಮತ್ತೆ ಅದೇ ಕೆರೆಯಲ್ಲಿ ಹೂಳು ಸಮತಟ್ಟಾಗುತ್ತದೆ. ಹೀಗೆ ಸಮತಟ್ಟಾದ ಹೂಳನ್ನು ಮತ್ತೆ ಮತ್ತೆ ತೆಗೆದು, ಕೆರೆಯಂಗಳದಲ್ಲಿಯೇ ಹಾಕಲಾಗುತ್ತದೆ.
ಮುನಿರಾಬಾದ್, ಹುಲಿಗಿ, ಶಿವಪುರ, ಬಹದ್ದೂರುಬಂಡಿ ಹಾಗೂ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿಯಿಂದ ಇದೇ ಕೆರೆಯಲ್ಲಿಯೇ ಕಳೆದ ಹತ್ತು ವರ್ಷಗಳಿಂದ ಉದ್ಯೋಗ ಖಾತ್ರಿಯೋಜನೆಯ ಅಡಿಯಲ್ಲಿ ಹೂಳು ತೆಗೆಯುವ ಕಾಮಗಾರಿ ಮಾಡಲಾಗುತ್ತಿದೆ.ಸಾವಿರ ಕಾರ್ಮಿಕರು:
ಈ ಕೆರೆಯಲ್ಲಿ ನಿತ್ಯವೂ ಸಾವಿರಕ್ಕೂ ಅಧಿಕ ಕಾರ್ಮಿಕರು ಹೂಳು ತೆಗೆಯುತ್ತಾರೆ.ಪ್ರತಿ ನಿತ್ಯವೂ ಒಂದೊಂದು ಗ್ರಾಮ ಪಂಚಾಯಿತಿಯಿಂದ 200-250 ಕಾರ್ಮಿಕರು ಆಗಮಿಸುತ್ತಾರೆ. ದೂರದ ಊರಿಂದ ಇಲ್ಲಿಗೆ ಆಗಮಿಸಲು ಟ್ರ್ಯಾಕ್ಟರಿ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿಯೂ ಖಾತ್ರಿ ಯೋಜನೆಯಲ್ಲಿ ಖರ್ಚು ಹಾಕಲಾಗುತ್ತದೆ.
ಕಳೆದ ವರ್ಷ ಒಂದೊಂದು ಗ್ರಾಪಂ ವ್ಯಾಪ್ತಿಯಲ್ಲಿ ₹50 ಲಕ್ಷದಿಂದ 1 ಕೋಟಿ ರುಪಾಯಿಯನ್ನೂ ಇದೇ ಕೆರೆ ಹೂಳೆತ್ತಲು ವ್ಯಯ ಮಾಡಲಾಗಿದೆ. ಅಂದರೆ ಕಳೆದ ಹತ್ತು ವರ್ಷಗಳಿಂದಲೂ ಹೀಗೆ ಪ್ರತಿ ವರ್ಷವೂ ₹2-3 ಕೋಟಿಯನ್ನು ಬಿ. ಹೊಸಳ್ಳಿ ಕೆರೆಯ ಹೂಳೆತ್ತಲು ಬಳಕೆ ಮಾಡಲಾಗಿದೆ. ಹತ್ತು ವರ್ಷಗಳ ಅಂದಾಜು ಲೆಕ್ಕಚಾರ ಮಾಡಿದರೂ ಬರೋಬ್ಬರಿ ₹ 20-30 ಕೋಟಿ ಈ ಕೆರೆಯ ಹೂಳೆತ್ತಲು ವ್ಯಯ ಮಾಲಾಗಿದೆ ಎನ್ನುವುದಕ್ಕಿಂತ ಮಣ್ಣುಪಾಲು ಮಾಡಿದ್ದಾರೆ ಎನ್ನುವುದು ಸ್ಥಳೀಯರ ಆಕ್ರೋಶ.ಟೆಂಡರ್ ಕರೆಯುವಂತಿಲ್ಲ:
ಕೆರೆಯ ಹೂಳು ತೆಗೆದು, ಕೆರೆಯಂಗಳದಲ್ಲಿಯೇ ಹಾಕುವುದು ಯಾಕೆ ಎಂದು ಕೆರೆಯಂಗಳದಲ್ಲಿದ್ದ ಗ್ರಾಪಂ ಅಧಿಕಾರಿಗಳನ್ನು ಕೇಳಿದರೆ, ಕೆರೆಯ ಹೂಳೆತ್ತಿದ್ದನ್ನು ಟ್ರ್ಯಾಕ್ಟರ್ ಮೂಲಕ ಹೊರಹಾಕಬೇಕು. ಆದರೆ, ಅದಕ್ಕೆ ಟೆಂಡರ್ ಕರೆಯಬೇಕು. ಈಗ ಅದಕ್ಕೆ ಅವಕಾಶ ಇಲ್ಲದಿರುವುದರಿಂದ ಕೆರೆಯಂಗಳದಲ್ಲಿಯೇ ಹೂಳು ಹಾಕಲಾಗುತ್ತದೆ ಎನ್ನಲಾಗುತ್ತದೆ.ಮತ್ತೊಂದು ಕೆರೆಯಾಗುತ್ತಿತ್ತು:
ಹಾಗೆ ನೋಡಿದರೇ ಬಿ. ಹೊಸಳ್ಳಿ ಕೆರೆಯಲ್ಲಿ ಖಾತ್ರಿ ಯೋಜನೆ ಪ್ರಾರಂಭವಾದ 2008ರಿಂದಲೇ ಹೂಳು ತೆಗೆಯಲಾಗುತ್ತದೆ. ಆಗ ಅತೀ ಕಡಿಮೆ ವೆಚ್ಚ ಮಾಡುವುದಕ್ಕೆ ಅವಕಾಶ ಇರುತ್ತಿತ್ತು. ಈಗ ಪ್ರತಿ ವರ್ಷವೂ ಕೋಟಿ ಕೋಟಿ ವೆಚ್ಚ ಮಾಡಲಾಗುತ್ತದೆ. ಹೊಸ ಕೆರೆಯೊಂದನ್ನು ನಿರ್ಮಾಣ ಮಾಡಿದ್ದರೂ ಇದಕ್ಕಿಂತಲೂ ದೊಡ್ಡ ಕೆರೆ ನಿರ್ಮಾಣವಾಗುತ್ತಿತ್ತು ಎಂದು ಕೆರೆಯ ಸುತ್ತಮುತ್ತಲ ಗ್ರಾಮಸ್ಥರು ವ್ಯಂಗ್ಯವಾಡುತ್ತಾರೆ.ಕೆರೆಯ ಹೂಳನ್ನು ಪ್ರತಿ ವರ್ಷ ತೆಗೆಯಲೇಬೇಕು. ಅದನ್ನೇ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಸಮಸ್ಯೆಯಾಗಿದ್ದರೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಪಡೆದು, ದೂರು ನೀಡಿ. ತಪ್ಪಾಗಿದ್ದರೆ ಕ್ರಮಕೈಗೊಳ್ಳಲಾಗುತ್ತದೆ. ಈಗಂತೂ ಅಲ್ಲಿ ಚೆನ್ನಾಗಿಯೇ ಕೆಲಸ ನಡೆದಿದೆ ಎಂದು
ಜಿಪಂ ಸಿಇಒ ರಾಹುಲ್ ರತ್ನ ಪಾಂಡೆಯ ತಿಳಿಸಿದ್ದಾರೆ.