ಸಾರಾಂಶ
ಎಲ್ಲೆಡೆ ತನ್ನ ಬೆಲೆಯಿಂದ ಮನೆಮಾತಾಗಿರುವ ಜಪಾನಿನ ಮೀಯಾಜಾಕಿ ಮಾವಿನ ಹಣ್ಣು ಇದೀಗ ವಿಜಯಪುರದಲ್ಲಿಯೂ ಬೆಳೆಯಲಾಗಿದೆ.
ಶಶಿಕಾಂತ ಮೆಂಡೆಗಾರ
ವಿಜಯಪುರ: ಎಲ್ಲೆಡೆ ತನ್ನ ಬೆಲೆಯಿಂದ ಮನೆಮಾತಾಗಿರುವ ಜಪಾನಿನ ಮೀಯಾಜಾಕಿ ಮಾವಿನ ಹಣ್ಣು ಇದೀಗ ವಿಜಯಪುರದಲ್ಲಿಯೂ ಬೆಳೆಯಲಾಗಿದೆ. ಈ ಮೂಲಕ ಜಿಲ್ಲೆಯೂ ಎಲ್ಲರ ಗಮನ ಸೆಳೆದಿದೆ. ವಿಜಯಪುರದ ನಿವಾಸಿ ಸದ್ಯ ಬಾಗಲಕೋಟೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಅಶ್ಪಾಕ್ ಪಾಟೀಲ ಜಪಾನ್ ಮೂಲದ ಮೀಯಾಜಾಕಿ ತಳಿಯ ಮಾವು ಬೆಳೆದಿದ್ದಾರೆ.
ಪಶ್ಚಿಮ ಬಂಗಾಳದಿಂದ ಬಂದ ಮೀಯಾಜಾಕಿ ಸಸಿ:
2020ರಲ್ಲಿ ಮೀಯಾಜಾಕಿ ಮಾವಿನ ಬಗ್ಗೆ ಮಾಹಿತಿ ಗೊತ್ತಾಗಿದ್ದು, ಒಂದು ಮಾವಿನ ಸಸಿಗೆ ₹1800 ನೀಡಿ ಪಶ್ಚಿಮ ಬಂಗಾಳದಿಂದ ಏಜೆನ್ಸಿಯೊಂದರ ಮೂಲಕ 4 ಸಸಿಗಳನ್ನು ತರಿಸಲಾಗಿತ್ತು. ಅದರಲ್ಲಿ ಒಂದು ಮಾತ್ರ ಮನೆಯ ಗಾರ್ಡನ್‌ನಲ್ಲಿ ನೆಡಲಾಗಿದ್ದು, ಉಳಿದ ಮೂರು ಸಸಿಗಳನ್ನು ನೆಡಲು ವಿಳಂಬವಾದ ಹಿನ್ನೆಲೆ ಅವುಗಳು ಒಣಗಿ ಹೋಗಿವೆ.
ಹಣ್ಣು ಬಿಟ್ಟ ಮೀಯಾಜಾಕಿ:
ಸಸಿ ನೆಟ್ಟು ಯಾವುದೇ ರಾಸಾಯನಿಕ ಬಳಸದೆ ಕೇವಲ ಕೊಟ್ಟಿಗೆ ಗೊಬ್ಬರ ಹಾಕಿದ್ದು, ನಾಲ್ಕು ವರ್ಷಗಳ ಬಳಿಕ ಈ ಬಾರಿ ಮೊದಲ ಬಾರಿಗೆ ಮೀಯಾಜಾಕಿ ಮಾವಿನ ಗಿಡ 12 ಹಣ್ಣುಗಳನ್ನು ಬಿಟ್ಟಿದೆ. ಒಂದೊಂದು ಹಣ್ಣು ಅಂದಾಜು 250ರಿಂದ 300 ಗ್ರಾಂ ತೂಕ ಹೊಂದಿವೆ. ಮೀ ತಳಿಯ ಹಣ್ಣಿಗೆ ಭಾರೀ ಬೇಡಿಕೆ ಇದ್ದು ಒಂದು ಕೆಜಿ ಮಾವು ಸುಮಾರು ಒಂದೂವರೆಯಿಂದ ಎರಡೂವರೆ ಲಕ್ಷದವರೆಗೆ ಮಾರಾಟವಾಗಲಿದೆ.
ಹಣ್ಣಿನ ವಿಶೇಷತೆ:
ಜಪಾನ್ ದೇಶದ ಮೀಯಾಜಾಕಿ ಎಂಬ ಪ್ರದೇಶದಲ್ಲಿ ಇದರ ಮುಖ್ಯ ಉತ್ಪಾದನೆ ಇರುವುದರಿಂದ ಇದಕ್ಕೆ ಮೀಯಾಜಾಕಿ ಎಂದು ಹೆಸರು ಬಂದಿದೆ. ಇದನ್ನು ಇಲ್ಲಿನ ವಾತಾವರಣದಂತೆ ಬಿಸಿಲು, ಗಾಳಿ, ನೀರು ಇರುವ ವಿಜಯಪುರದಲ್ಲೂ ಬೆಳೆಯಬಹುದಾಗಿದೆ. ಇದು ವಿಟಮಿನ್ ಎ, ವಿಟಮಿನ್ ಸಿ, ಮಿನರಲ್ಸ್, ಫೈಬರ್ ಅಂಶ, ಸಕ್ಕರೆ ಅಂಶ ಸೇರಿದಂತೆ ಔಷಧೀಯ ಗುಣಗಳನ್ನು ಹೆಚ್ಚಾಗಿ ಹೊಂದಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಈ ಹಣ್ಣು ತಿಂದರೆ ಕ್ಯಾನ್ಸರ್ ತಡೆಯಲು ಸಹಾಯ ಆಗಲಿದೆ. ಹೊಟ್ಟೆಯೊಳಗಿನ ಅನೇಕ ಸಮಸ್ಯೆಗಳು ನಿವಾರಣೆ ಆಗಲಿವೆ.
ಎಗ್ ಆಫ್ ಸನ್ ಎಂದು ಕರೆಯಲಾಗುತ್ತದೆ: ಮೀಯಾಜಾಕಿ ಮಾವಿನ ಹಣ್ಣು ನೋಡಲು ಮೊಟ್ಟೆಯ ಆಕಾರದಲ್ಲಿದ್ದು, ತತ್ತಿಯೊಳಗಿನ ತಿಳಿ ಹಳದಿ ಬಣ್ಣ ಹೊಂದಿರುತ್ತದೆ. ಹಾಗಾಗಿ ಇದಕ್ಕೆ ಸನ್ ಆಫ್ ಎಗ್ ಎಂತಲೂ ಕರೆಯಲಾಗುತ್ತದೆ.
ಹಣ್ಣಿನ ಮಾರಾಟಕ್ಕೆ ಪ್ಲಾನ್:
ಮನೆಯ ಆವರಣದಲ್ಲೇ ಒಂದು ಗಿಡದಿಂದ 12 ಹಣ್ಣುಗಳನ್ನು ಬೆಳೆದಿರುವ ಸಹಾಯಕ ಎಂಜಿನಿಯರ್ ಅಶ್ಪಾಕ್ ಪಾಟೀಲ ಅವರಿಗೆ ಈಗಾಗಲೇ ಅಪೇಡಾ (ಅಗ್ರಿಕಲ್ಚರ್ ಆಂಡ್ ಪ್ರೊಸೆಸ್ಡ್ ಫುಡ್ ಪ್ರಾಡೆಕ್ಟ್ ಎಕ್ಸ್‌ಪೋರ್ಟ್ ಡೆವಲಪಮೆಂಟ್ ಅಥಾರಿಟಿ)ಯಿಂದ ಕರೆ ಬಂದಿದ್ದು, ಹಣ್ಣುಗಳನ್ನು ಹೊರದೇಶಕ್ಕೆ ಮಾರಾಟ ಮಾಡಲು ಪ್ಲಾನ್ ಮಾಡಲಾಗಿದೆ.
ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಾಹಿತಿ ಗೊತ್ತಾಯಿತು. ಆಗ ನಾನು ನಮ್ಮಲ್ಲೇಕೆ ಈ ಹಣ್ಣು ಬೆಳೆಯಬಾರದು ಎಂದು ಪ್ರಯತ್ನಿಸಿ ಸಸಿಯನ್ನು ತರಿಸಿ, ಬೆಳೆಸಿದ್ದೇನೆ. ಈ ಹಣ್ಣಿನಲ್ಲಿ ಸಾಕಷ್ಟು ಔಷಧೀಯ ಗುಣಗಳು ಇರುವುದರಿಂದ ಇದು ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಇದರ ಬಗ್ಗೆ ತಿಳಿದುಕೊಂಡವರು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಖರೀದಿಸುತ್ತಾರೆ. ಪ್ರಾಯೋಗಿಕ ಮುಗಿದಿದ್ದು, ಈ ಬಾರಿ ನಾನು ನಮ್ಮ ತೋಟದಲ್ಲಿ ಒಂದು ಎಕರೆ ಈ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಲಿದ್ದೇನೆ.
-ಅಶ್ಪಾಕ್ ಪಾಟೀಲ, ಮೀಯಾಜಾಕಿ ಮಾವು ಬೆಳೆದವರು.
ಈ ಮೀಯಾಜಾಕಿ ಮಾವಿನ ಹಣ್ಣು ನೋಡಲು ಆಕರ್ಷಕವಾಗಿದ್ದು, ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ. ಈಗಾಗಲೇ ವಿಜಯಪುರದಲ್ಲಿ ಅಶ್ಪಾಕ್ ಪಾಟೀಲ ಹಿತ್ತಲುಮನೆಯ ಗಾರ್ಡನ್‌ನಲ್ಲಿ ಮಾವು ಬೆಳೆದಿದ್ದಾರೆ. ಈ ಭಾಗಕ್ಕೆ ಹೊಂದಿಕೊಳ್ಳುವುದರಿಂದ ಇಲ್ಲಿನ ರೈತರು ಸಹ ಬೆಳೆಯಬಹುದು. ಆದರೆ ಜಪಾನನಲ್ಲಿ ಕೆಜಿಗೆ ಸಿಗುವಷ್ಟು ಬೆಲೆ ಇಲ್ಲಿ ಸಿಗುವುದಿಲ್ಲ. ಒಂದು ಕೆಜಿ ಮೀಯಾಜಾಕಿ ಮಾವಿಗೆ ಒಂದು ಸಾವಿರದಿಂದ ಒಂದೂವರೆ ಸಾವಿರ ಬೆಲೆ ಸಿಗಬಹುದು.
-ರಾಹುಲಕುಮಾರ ಬಾವಿದೊಡ್ಡಿ, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ.