ಕುಡಿಯುವ ನೀರು ಯೋಜನೆ ಮಾದರಿಯಾಗಿ ಜಾರಿಗೊಳಿಸಲು ಶಾಸಕ ಭೀಮಣ್ಣ ನಾಯ್ಕ ಸೂಚನೆ

| Published : Oct 19 2024, 12:27 AM IST

ಕುಡಿಯುವ ನೀರು ಯೋಜನೆ ಮಾದರಿಯಾಗಿ ಜಾರಿಗೊಳಿಸಲು ಶಾಸಕ ಭೀಮಣ್ಣ ನಾಯ್ಕ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಯೋಜನೆಯ ಜಾರಿ ವಾಟರ್ ಬೋರ್ಡ್ ಅಥವಾ ಶಾಸಕರಿಗೆ ಮಾತ್ರ ಜವಾಬ್ದಾರಿಯಲ್ಲ. ನಗರದಭೆ ಪ್ರತಿ ಸದಸ್ಯನೂ ತನ್ನ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಹಾಕುವಾಗ ಸ್ಥಳದಲ್ಲಿ ನಿಂತು ಗುಣಮಟ್ಟದ ಕಾಮಗಾರಿ ಆಗುತ್ತಿರುವುದನ್ನು ದೃಢಪಡಿಸಿಕೊಳ್ಳಬೇಕು.

ಶಿರಸಿ: ಅಮೃತ ೨.೦ ಯೋಜನೆಯಲ್ಲಿ ನಗರದ ಕುಡಿಯುವ ನೀರು ಪೂರೈಕೆಗಾಗಿ ಮಂಜೂರು ಮಾಡಿರುವ ₹೬೭.೯೨ ಕೋಟಿ ಯೋಜನೆ ಈಗ ಅನುಷ್ಠಾನದ ಹಂತದಲ್ಲಿದೆ. ನಗರದಲ್ಲಿ ಈಗಾಗಲೇ ಇರುವ ಕುಡಿಯುವ ನೀರಿನ ವ್ಯವಸ್ಥೆಯಲ್ಲಿಯ ಲೋಪದೋಷಗಳನ್ನು ಸರಿಪಡಿಸಿ, ಯೋಜನೆ ಮಾದರಿಯಾಗುವ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.ಶುಕ್ರವಾರ ನಗರಸಭೆಯ ಅಟಲ್‌ಜೀ ಸಭಾಭವನದಲ್ಲಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕುಡಿಯುವ ನೀರಿನ ಯೋಜನೆಗಳ ಜಾರಿಯಲ್ಲಿ ಈ ಹಿಂದೆ ಏನೇನಾಗಿದೆ ಎಂದು ಚರ್ಚೆ ಮಾಡುತ್ತಿರುವ ಬದಲು, ಸರ್ಕಾರದಿಂದ ಮಂಜೂರಾಗಿರುವ ಈ ಬೃಹತ್ ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಬೇಕು. ಈ ಯೋಜನೆ ೨೦೫೫ರ ವರೆಗಿನ ನಗರ ಬೆಳವಣಿಗೆಯನ್ನು ದೃಷ್ಟಿಕೋನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗಿದೆ. ಪ್ರಸಕ್ತ ೭೭ ಸಾವಿರವಿರುವ ನಗರ ಜನಸಂಖ್ಯೆ ೨೦೫೫ರ ವೇಳೆ ೧.೧೨ ಲಕ್ಷಕ್ಕೇರುವ ಸಾಧ್ಯತೆ ಇದೆ. ನಗರದ ೩೧ ವಾರ್ಡ್‌ಳಲ್ಲಿ ೬ ವಾರ್ಡ್‌ಳಿಗೆ ಈ ಯೋಜನೆಯಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಈ ವಾರ್ಡ್‌ಗಳಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗುವುದು ಎಂದರು.ಯೋಜನೆಯ ಜಾರಿ ವಾಟರ್ ಬೋರ್ಡ್ ಅಥವಾ ಶಾಸಕರಿಗೆ ಮಾತ್ರ ಜವಾಬ್ದಾರಿಯಲ್ಲ. ನಗರದಭೆ ಪ್ರತಿ ಸದಸ್ಯನೂ ತನ್ನ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಹಾಕುವಾಗ ಸ್ಥಳದಲ್ಲಿ ನಿಂತು ಗುಣಮಟ್ಟದ ಕಾಮಗಾರಿ ಆಗುತ್ತಿರುವುದನ್ನು ದೃಢಪಡಿಸಿಕೊಳ್ಳಬೇಕು. ಪೈಪ್ ಅಳವಡಿಸಿಯಾದ ಬಳಿಕ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಕ್ಷಣವೇ ಮುಚ್ಚುವ ವ್ಯವಸ್ಥೆ ಆಗಬೇಕು. ಅಲ್ಲದೇ, ನಗರದ ಕೆಲ ಮುಖ್ಯ ರಸ್ತೆಯ ಅಡಿಭಾಗದಲ್ಲಿಯೇ ಈ ಪೈಪ್‌ಲೈನ್‌ಗಳು ಸಾಗುವುದರಿಂದ ಮರು ಡಾಂಬರೀಕರಣವನ್ನೂ ಸಮರ್ಪಕವಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಕಳೆದ ವರ್ಷ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಈ ವರ್ಷ ನಗರಸಭೆ ಮುಂಚಿತವಾಗಿಯೇ ಈ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಗರ ವ್ಯಾಪ್ತಿಯಲ್ಲಿ ಕೆಲ ವರ್ಷಗಳ ಹಿಂದೆ ಕೊರೆದಿದ್ದ ಬೋರ್‌ವೆಲ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸಿ. ನೀರು ಗುಣಮಟ್ಟ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನೀರು ಪೋಲಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ನಗರದಲ್ಲಿ ನಳಗಳಿಗೆ ಅಳವಡಿಸಿರುವ ಮೀಟರ್ ಕಾರ್ಯಕ್ಷಮತೆ ಕಳಪೆ ಆಗಿರುವ ಬಗ್ಗೆ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಗಮನ ಸೆಳೆದಾಗ ಶಾಸಕ ಭೀಮಣ್ಣ ಪ್ರತಿಕ್ರಿಯಿಸಿ, ಈಗಾಗಲೇ ಅಳವಡಿಸಲಾಗಿರುವ ಮೀಟರ್‌ಗಳು ಸರಿ ಇರದಿದ್ದರೆ ಅವುಗಳನ್ನು ಬದಲಾಯಿಸಿ ಬೇರೆ ಅಳವಡಿಸಿ. ಸಂಗ್ರಹ ಟ್ಯಾಂಕ್‌ಗಳಿಂದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ವೇಳೆ ನಗರಸಭೆ ಎಂಜಿನಿಯರ್‌ಗಳು ಸ್ಥಳದಲ್ಲಿಯೇ ಇದ್ದು ಪರಿಶೀಲಿಸಬೇಕು ಎಂದು ಸೂಚಿಸಿದರು. ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಸೇರಿದಂತೆ ನಗರಸಭೆಯ ಸದಸ್ಯರು ಇದ್ದರು.

೧೮.೬೮ ಎಂಎಲ್‌ಡಿ ನೀರು ಅಗತ್ಯ

ಈ ಯೋಜನೆಗೆ ೨೦೨೩ರ ಡಿಸೆಂಬರ್ ತಿಂಗಳಿನಲ್ಲಿ ಅಂತಿಮ ಅನುಮೋದನೆ ಸಿಕ್ಕಿದೆ. ನಗರದ ಈಗಿನ ಜನಸಂಖ್ಯೆಗೆ ೧೨.೮೫ ಎಂಎಲ್‌ಡಿ ನೀರು ಅಗತ್ಯವಾಗಿದ್ದರೂ, ಯೋಜನೆ ಮುಂದಿನ ಮೂವತ್ತು ವರ್ಷದ ನೀಲನಕ್ಷೆ ಹೊಂದಿದ್ದು, ೧೮.೬೮ ಎಂಎಲ್‌ಡಿ ನೀರು ಅಗತ್ಯವಿದೆ. ಕೆಂಗ್ರೆ ಹೊಳೆ ಮತ್ತು ಅಘನಾಶಿನಿ ನದಿಯ ಮಾರಿಗದ್ದೆಯ ನೀರನ್ನು ಅವಲಂಬಿಸಲು ಯೋಜನೆಯಲ್ಲಿ ನಿರ್ಧರಿಸಲಾಗಿದ್ದು, ೨೪ ತಿಂಗಳ ಅವಧಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಅಮೃತ ೨.೦ ಯೋಜನೆ ಅನುಷ್ಠಾನದ ಕುರಿತು ವಾಟರ್ ಬೋರ್ಡ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.