ಸಾರಾಂಶ
ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸಹಕಾರಿ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಿಲ್ಲೆಯಲ್ಲಿ ಸಾಕಷ್ಟು ವಿಶಿಷ್ಟ ಪ್ರತಿಭೆಗಳಿವೆ. ಪ್ರತಿಭೆಗಳ ಅನಾವರಣಕ್ಕೆ ಯುವಜನೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಾಸಕ ಎಚ್. ವೈ.ಮೇಟಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷಿಯ ನುಡಿಗಳನ್ನು ಆಡಿದ ಅವರು ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆಗಳಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತರಾಗಿರದೆ ಕ್ರೀಡೆ, ಸಂಗೀತ, ನೃತ್ಯ, ಜಾನಪದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಲಾಖೆಯವರು ಇಂತಹ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಯುವ ಸಮೂಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅಂದಾಗ ಮಾತ್ರ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಜಿಲ್ಲಾ ಮಟ್ಟದಲ್ಲಿ ಅಯ್ಕೆಯಾಗಿ ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುವಂತಾಗಬೇಕು ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಯುವ ಉತ್ಸವ ಎಂಬುದು ಯುವಕರು ಹುರುಪು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸುವ ಕಾರ್ಯಕ್ರಮವಾಗಿದೆ. ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ವೇದಿಕೆಯಲ್ಲಿ ಉತ್ತಮವಾಗಿದೆ. ನಮ್ಮ ದೇಶ ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಕಲೆ, ಸಾಹಿತ್ಯ, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅದ್ಬುತ ಭಾಷಣದ ಮೂಲಕ ದೇಶದ ಪರಂಪರೆ ಸಾರಿದರು ಎಂದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಷ್ಮಾ ಗವಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಇದ್ದರು. ಶಾರದಾ ಹೊಸಮನಿ ಪ್ರಾರ್ಥನೆ ಗೀತೆ ಹಾಡಿದರು. ಕ್ರೀಡಾ ಇಲಾಖೆಯ ಅಧೀಕ್ಷಕ ರಂಗನಾಥ ಕಾವಲಗೊಂಡ ವಂದಿಸಿದರು. ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಜನಪದ ಗೀತೆ, ಕಥೆ ಬರೆಯುವದು, ಪೋಸ್ಟರ ಮೇಕಿಂಗ್, ಘೋಷಣೆ, ಛಾಯಾಚಿತ್ರ ಸ್ಪರ್ಧೆಗಳನ್ನು ನಡೆದವು.