ಸಾರಾಂಶ
ಕಾರವಾರ:
ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಹಿಳೆಯರಿಗೆ ಅಧಿಕಾರದ ಅವಕಾಶ ಒದಗಿಸಿ, ಭದ್ರತೆ, ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮೋದಿ ಈ ದೇಶದ, ವಿಶ್ವದ ಆಶಾಕಿರಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಬಣ್ಣಿಸಿದರು.ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ನಾರಿಶಕ್ತಿ ವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮಿಸಲಾತಿ ನೀಡಿದ ಬಗ್ಗೆ ಒಬ್ಬ ಮಹಿಳೆಯಾಗಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹೆಣ್ಣುಮಕ್ಕಳಿಗೆ ಶಕ್ತಿ ನೀಡಲು ಮೊದಲ ಬಾರಿಗೆ ಈ ಮಸೂದೆ ಜಾರಿಗೆ ತಂದಿದ್ದಾರೆ. ಕಾಡಿಗೆ ಹೋಗಿ ಕಟ್ಟಿಗೆ ತರುವುದನ್ನು ತಪ್ಪಿಸಿ ಮಹಿಳೆಯರ ಕಣ್ಣೀರು ಒರೆಸಲು ಉಜ್ವಲ್ ಯೋಜನೆ ಜಾರಿಗೆ ತಂದು 8 ಕೋಟಿ ಜನರಿಗೆ ಅಡುಗೆ ಅನಿಲ ಸೌಲಭ್ಯ ಒದಗಿಸಿದ್ದಾರೆ ಎಂದರು.ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಮಹತ್ವ, ರೈತ ಕಲ್ಯಾಣ ಯೋಜನೆ ಜಾರಿ, ಕೋಟ್ಯಂತರ ಜನರ ಕನಸಾಗಿದ್ದ ಪ್ರಭು ಶ್ರೀ ರಾಮ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡುವ ಮೂಲಕ ಜನರ ಹೃದಯಕ್ಕೆ ಹತ್ತಿರವಾಗಿದ್ದಾರೆ. ಕಾಶಿ, ಮಥುರಾ, ವಾರಣಾಸಿ... ಹೀಗೆ ವಿವಿಧ ಸ್ಥಳಗಳ ದೇವಾಲಯಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಅಲ್ಲದೇ, ಭಕ್ತರಿಗೆ ತೆರಳಲು ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ರೂಪಾಲಿ ಹೇಳಿದರು.ಮೋದಿಯೇ ಗ್ಯಾರಂಟಿ:ನಮ್ಮೆಲ್ಲರಿಗೂ ಮೋದಿಯೇ ಗ್ಯಾರಂಟಿ. ಬೇರೆ ಯಾವುದೇ ಗ್ಯಾರಂಟಿಗೆ ವಾರಂಟಿಗಳಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿಯ ಹೆಸರಿನಲ್ಲಿ ಬಡ ಜನರಿಗೆ ತೊಂದರೆ ಕೊಡುತ್ತಿದೆ. ಕೆಲವರಿಗೆ ಮಾತ್ರ ವಿದ್ಯುತ್ ಶುಲ್ಕ ವಿನಾಯಿತಿ ಮಾಡಿದಂತೆ ತೋರಿಸಿ, ಹಿಂಬಾಗಿಲಿನಿಂದ ಇತರರಿಗೆ ವಿದ್ಯುತ್ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮೂರು ದಿನ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಂದು ಮ್ಯಾರಥಾನ್ ಪೂರ್ಣಗೊಂಡಿದ್ದು, ವಿಧಾನಸಭಾ ಕ್ಷೇತ್ರವಾರು ಮಂಗಳವಾರ ಬೈಕ್ ರ್‍ಯಾಲಿ ಮತ್ತು ಮೂರನೆಯ ದಿನ ಮೋದಿ ಮಾತನಾಡುವ ಮೂಲಕ ಸಮಾರೋಪಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಮೋದಿ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಮಹಿಳೆಯರು ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸುವಂತೆ ವಿನಂತಿಸಿದರು. ಕಾರವಾರ ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೇಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಮೋರ್ಚಾ ಪ್ರಮುಖರು, ಯುವ ಮೋರ್ಚಾ ಸೇರಿದಂತೆ ಮತ್ತಿತರ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮ್ಯಾರಾಥಾನ್ ಯಶಸ್ವಿಕಾರವಾರ ನಗರದ ಮಾಲಾದೇವಿ ಮೈದಾನದಿಂದ ಶ್ರೀಸಿದ್ದಿ ವಿನಾಯಕ ದೇವಾಲಯ ವರೆಗಿನ ಬೃಹತ್ ಮ್ಯಾರಾಥಾನ್ ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯ ವಿವಿಧೆಡೆಯಿಂದ ಮಹಿಳೆಯರು ಆಗಮಿಸಿದ್ದರು. ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ವಿವಿಧ ವಿಭಾಗದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.