ಸಾರಾಂಶ
ಮೋಹನ್ ವೆರ್ಣೇಕರ್ ಅವರು ಚುಕ್ಕಿ ಚಿತ್ರಗಳನ್ನು ರಚಿಸುವುದರಲ್ಲಿ ಹೆಸರು ಮಾಡಿದ್ದಾರೆ.
ಮೈಸೂರು: ಮೋಹನ್ ವೆರ್ಣೇಕರ್ ಅವರು ಚುಕ್ಕಿ ಚಿತ್ರಗಳನ್ನು ರಚಿಸುವುದರಲ್ಲಿ ಹೆಸರು ಮಾಡಿದ್ದಾರೆ.
ಕರ್ನಾಟಕ ವಿಧಾನಸಭೆಯ ಸಚಿವಾಲಯದಲ್ಲಿ ರೆಕಾರ್ಡಿಂಗ್ ಆಫೀಸರ್ ಆಗಿ ಸೇವೆಸಲ್ಲಿಸಿ ನಿವೃತ್ತರಾಗಿ ಈಗ ಮೈಸೂರಿನಲ್ಲಿ ವಾಸವಾಗಿರುವ ಮೋಹನ್ ವೆರ್ಣೇಕರ್ ಅವರ ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣ ಗ್ರಾಮ. ಜನಿಸಿದ್ದು 22-6-1950 ರಂದು.
ವೃತ್ತಿಯ ಜತೆಗೆ ಹವ್ಯಾಸವಾಗಿ ರೂಢಿಸಿಕೊಂಡಿದ್ದು ಸಾಹಿತ್ಯ ಮತ್ತು ಚಿತ್ರಕಲೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾದಂಬರಿ, ಸಣ್ಣಕತೆ, ಮಕ್ಕಳ ಸಾಹಿತ್ಯ, ಪ್ರಬಂಧ, ಅಂಕಣ ಬರೆಹ-ಮುಂತಾದ ವಿವಿಧ ಪ್ರಕಾರಗಳಲ್ಲದೆ, ಮಾನಸಿಕ ಆರೋಗ್ಯ, ವ್ಯಕ್ತಿತ್ವ ವಿಕಾಸ, ಆರೋಗ್ಯ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 66 ಕೃತಿಗಳು ಪ್ರಕಟವಾಗಿವೆ.
ಸ್ವರ್ಣಮಂದಾರ, ಪ್ರೀತಿಪ್ರೇಮಗಳ ನಡುವೆ, ಸಂಸಾರ ಸ.ರಿ.ಗ.ಮ, ನರಸಿಂಹ ದೇವರಿಗೆ ಚಿನ್ನದ ಕಿರೀಟ, ಜೋಡಿ ಕಿರುಕಾದಂಬರಿಗಳು, ದ್ವೀಪದಲ್ಲಿ ಮಕ್ಕಳು ಮಾನಸಿಕ ಆರೋಗ್ಯ ಸಂಗಾತಿ, ಆತಂಕದಿಂದ ಹೊರಬನ್ನಿ, ಬಯಸದೇ ಬಂದ ಭಾಗ್ಯ, ನಕ್ಕು ಆರೋಗ್ಯವಾಗಿರೋಣ, ಮನಮಂಥನ- ಮುಂತಾದವು ಕೆಲವು ಪ್ರಮುಖ ಕೃತಿಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಇವರು ನಿಷ್ಣಾತರು. ಈ ಪ್ರಕಾರದಲ್ಲಿ ಇದುವರೆಗೆ ಇವರ 14 ಕೃತಿಗಳು ಪ್ರಕಟವಾಗಿವೆ. ಇವರ ಸಾಹಸಪ್ರಧಾನ ಮಕ್ಕಳ ಕಾದಂಬರಿ ದ್ವೀಪದಲ್ಲಿ ಮಕ್ಕಳು ಇದೀಗ ಚಲನಚಿತ್ರವಾಗುತ್ತಿದೆ.
ಇದರ ಜತೆಗೆ ಮೋಹನ್ ವೆರ್ಣೇಕರ್ ಅವರು ಹೆಚ್ಚು ಹೆಸರು ಮಾಡಿರುವುದು ಚುಕ್ಕಿಚಿತ್ರ ಕಲಾವಿದರಾಗಿ. ಚಿತ್ರಕಲೆಯಲ್ಲಿನ ಆಸಕ್ತಿಯೊಡನೆ ಚಿತ್ರಗಳನ್ನು ರಚಿಸುತ್ತಿದ್ದಾಗ ಹೊಸತೇನಾದರೂ ಸಾಧಿಸಬೇಕೆನ್ನುವ ಹಂಬಲ ಕಾಡಿದಾಗ ಆರಿಸಿಕೊಂಡಿದ್ದು ಚುಕ್ಕಿಚಿತ್ರಕಲಾ ಪ್ರಕಾರವನ್ನು. ಯಾರ ಮಾರ್ಗದರ್ಶನವೂ ಇಲ್ಲದೆ ಸ್ವತಃ ಈ ಕಲೆಯನ್ನು ರೂಢಿಸಿಕೊಂಡು ಮುನ್ನಡೆದದ್ದು ಇವರ ಅಗ್ಗಳಿಕೆ.
ಚುಕ್ಕಿಚಿತ್ರ ಕಲೆಯ ಬಗ್ಗೆ....
ಬರೇ ಚುಕ್ಕಿಗಳನ್ನು ಉಪಯೋಗಿಸಿ ಚಿತ್ರಗಳನ್ನು ಮೂಡಿಸುವುದು ಈ ಕಲೆಯ ವೈಶಿಷ್ಟ್ಯ. ಚಿತ್ರಕಲೆಯ ವಿವಿಧ ಪ್ರಕಾರಗಳಲ್ಲಿ ಚುಕ್ಕಿಚಿತ್ರಕಲೆಯೂ ಒಂದು ವಿಶಿಷ್ಟ ಬಗೆಯಾಗಿದ್ದು ಇದನ್ನು ''''''''ಸ್ಟಿಪ್ಲಿಂಗ್ ಆರ್ಟ್'''''''' ಎಂದು ಕರೆಯಲಾಗುತ್ತದೆ. ಬರೇ ಚುಕ್ಕಿಗಳನ್ನು ಮಾತ್ರ ಉಪಯೋಗಿಸಿ ಇಲ್ಲಿ ಚಿತ್ರ ರಚನೆ ಮಾಡಬೇಕಾಗಿದ್ದು ನೆರಳು-ಬೆಳಕು ಸಂಯೋಜನೆಯಲ್ಲಿ ಅಪಾರ ತಾಳ್ಮೆ ಮತ್ತು ಏಕಚಿತ್ತಾಗ್ರತೆಯಿಂದ ಕಲಾವಿದ ತನ್ನ ಕಲಾಕೌಶಲ್ಯ, ಪರಿಣಿತಿಯನ್ನು ಮೆರೆಯುತ್ತಾನೆ. ಬಿಂದುಬಿಂದು ಸೇರಿ ಸಿಂಧು ಎಂಬಂತೆ ಇಲ್ಲಿ ಎಲ್ಲವೂ ಚುಕ್ಕಿಮಯವಾಗಿ ಈ ವಿಭಿನ್ನ ಪ್ರಮಾಣದ ಚುಕ್ಕಿಗಳೇ ಪೂರ್ತಿಯಾಗಿ ಚಿತ್ರವನ್ನು ಆವರಿಸಿಕೊಳ್ಳುತ್ತವೆ. ಆದ್ದರಿಂದ ಈ ಚುಕ್ಕಿಗಳನ್ನು ಇಡುವಾಗ ಎಚ್ಚರಿಕೆ, ಶ್ರದ್ಧೆ ಅತ್ಯಗತ್ಯ.
ಗಿಡಮರ, ಪಶುಪಕ್ಷಿ, ನಿಸರ್ಗದ ಚಿತ್ರಗಳನ್ನು ಚುಕ್ಕಿಗಳಿಟ್ಟು ರಚಿಸಲು ಪರಿಶ್ರಮ ಬೇಕೇಬೇಕಾದರೂ ವ್ಯಕ್ತಿಯ ರೂಪಚಿತ್ರಗಳನ್ನು ಈ ಮಾಧ್ಯಮದಲ್ಲಿ ರಚಿಸಬೇಕೆಂದರೆ ಇನ್ನೂ ಹೆಚ್ಚಿನ ಶ್ರಮ ಮತ್ತು ಮುತುವರ್ಜಿ ಅತ್ಯವಶ್ಯಕ. ಮುಖದ ವಿವಿಧ ಭಾಗಗಳನ್ನು ಒಳಗೊಂಡಂತೆ ಒಟ್ಟಾರೆ ಚಹರೆಯನ್ನು ಮೂಲಚಿತ್ರಕ್ಕೆ ಸರಿಸಮವಾಗಿ ಹೋಲುವಂತೆ ಈ ಮಾಧ್ಯಮದಲ್ಲಿ ರಚಿಸಬೇಕೆಂದರೆ ಕೈಚೆನ್ನಾಗಿ ಪಳಗಿದರೆ ಮಾತ್ರ ಇದರಲ್ಲಿ ಯಶಸ್ಸು ಕಾಣಲು ಸಾಧ್ಯ. ಭಾವಚಿತ್ರದಲ್ಲಿ ಭಾವವೇ ಪ್ರಧಾನವಾಗುವುದರಿಂದ ಚುಕ್ಕಿಗಳಲ್ಲೇ ಇವೆಲ್ಲವನ್ನೂ ವ್ಯಕ್ತಪಡಿಸುವಾಗ ಏಕಾಗ್ರಚಿತ್ತತೆ ಇಲ್ಲಿ ಮುಖ್ಯ ಪರಿಕರವಾಗುತ್ತದೆ. ಈ ಕಾರಣಕ್ಕೆ ಒಂದು ಚಿತ್ರರಚನೆಗೆ ಗಂಟೆಗಟ್ಟಲೆ ತೊಡಗಿಸಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಈ ಕಲಾಪ್ರಕಾರದಲ್ಲಿ ಸಾಧನೆಗೈಯಲು ಸಾಮಾನ್ಯವಾಗಿ ಕಲಾವಿದರು ಹಿಂದೇಟುಹಾಕುತ್ತಾರೆ. ಆದರೆ ಮೋಹನ್ ವೆರ್ಣೇಕರ್ ಚುಕ್ಕಿಗಳಲ್ಲಿ ಭಾವಚಿತ್ರ ರಚನೆಯನ್ನೇ ಮುಂದುವರೆಸಲು ನಿರ್ಧರಿಸಿದರು. ಅದೂ ಕನ್ನಡದ ಹಿರಿಯ ಕವಿ,ಸಾಹಿತಿಗಳ ಭಾವಚಿತ್ರಗಳನ್ನು! ಕನ್ನಡದ ಆಸ್ತಿಯೆಂದು ಕರೆಯಲ್ಪಡುವ ಹಿರಿಯ ಸಾಹಿತಿ ಮಾಸ್ತಿಯವರ ಚುಕ್ಕಿಚಿತ್ರ ರಚನೆಯಿಂದ ಶುರುವಾದ ಸಾಹಿತಿಗಳ ಚುಕ್ಕಿಚಿತ್ರಗಳ ರಚನೆ ಕಳೆದ ಐದು ದಶಕಗಳಿಂದ ಅವ್ಯಾಹತವಾಗಿ ಮುಂದುವರೆದಿದೆ. ಆರು ಸಾವಿರಕ್ಕೂ ಹೆಚ್ಚು ಗಂಟೆಗಳನ್ನು ಇವರು ಇದಕ್ಕಾಗಿ ವ್ಯಯಿಸಿದ್ದು ನೂರಾರು ಕನ್ನಡದ ಹಿರಿಯ ಸಾಹಿತಿಗಳ ಚುಕ್ಕಿಚಿತ್ರಗಳನ್ನು ರಚಿಸಿದ್ದಾರೆ. ಇವುಗಳನ್ನು ನೋಡಿ ಮೆಚ್ಚದವರಿಲ್ಲ.
ಹಿರಿಯ ಸಾಹಿತಿಗಳಾದ ಕುವೆಂಪು, ಶಿವರಾಮ ಕಾರಂತ, ಪು.ತಿ.ನರಸಿಂಹಾಚಾರ್ಯ, ಎಂ. ಗೋಪಾಲಕೃಷ್ಣ ಅಡಿಗ, ಗೌರೀಶ್ ಕಾಯ್ಕಿಣಿ, ಜಿ.ವೆಂಕಟಸುಬ್ಬಯ್ಯ, ಎಂ.ಕೆ.ಇಂದಿರಾ, ವ್ಯಾಸರಾಯ ಬಲ್ಲಾಳ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಎಚ್ಚೆಸ್ಕೆ, ದೇಜಗೌ, ಎಸ್.ಎಲ್.ಭೈರಪ್ಪ, ಎಲ್.ಎಸ್. ಶೇಷಗಿರಿರಾವ್, ಶಂಕರ ಮೊಕಾಶಿ ಪುಣೇಕರ್, ಯಶವಂತ ಚಿತ್ತಾಲ, ಹಾ.ಮಾ. ನಾಯಕ, ಟಿ.ವಿ. ವೆಂಕಟಾಚಲ ಶಾಸ್ತ್ರಿ, ಅನುಪಮಾ ನಿರಂಜನ, ಕೆ.ಎಸ್.ನಿಸಾರ್ ಅಹಮದ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಆದಿಯಾಗಿ ಅನೇಕ ಹಿರಿಯ ಸಾಹಿತಿಗಳು ಇವುಗಳನ್ನು ವೀಕ್ಷಿಸಿ ಮೆಚ್ಚುಮಾತುಗಳನ್ನಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ವರನಟ ಡಾ. ರಾಜಕುಮಾರ್ ಮುಂತಾದವರು ಕೂಡ ಇವರ ಚುಕ್ಕಿಚಿತ್ರಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ-ಪುರಸ್ಕಾರಗಳು
ಮೋಹನ್ ವೆರ್ಣೇಕರ್ ಅವರು ರಚಿಸಿದ ಅನೇಕ ಸಾಹಿತಿಗಳ ಚುಕ್ಕಿಚಿತ್ರಗಳು ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು 1998 ರಲ್ಲಿ ಕನಕಪುರದಲ್ಲಿ ನಡೆದ 68ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ 31 ಸಾಹಿತಿಗಳ ಚುಕ್ಕಿಚಿತ್ರಗಳನ್ನು ಕಾರ್ಡುಗಳ ರೂಪದಲ್ಲಿ ಪ್ರಕಟಿಸಿದೆ. 1999 ರಲ್ಲಿ ಪ್ರಕಟವಾದ ಇವರ ಚುಕ್ಕಿಚಿತ್ರಗಳಲ್ಲಿ ಶತಸಾಹಿತ್ಯ ಪ್ರತಿಭೆ ಈ ಗ್ರಂಥವು ಕನ್ನಡದ ನೂರು ಮಂದಿ ಪ್ರಸಿದ್ಧ ಸಾಹಿತಿಗಳ ಚುಕ್ಕಿಿಭಾವಚಿತ್ರಗಳನ್ನು ಒಳಗೊಂಡಿದ್ದು ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿತ್ತು. ತದನಂತರ 2017ರಲ್ಲಿ ಚುಕ್ಕಿಚಿತ್ರಗಳಲ್ಲಿ 108 ಸಾಹಿತ್ಯ ಚೇತನಗಳು ಶೀರ್ಷಿಕೆಯಲ್ಲಿ ಮತ್ತೊಂದು ಗ್ರಂಥ ಪ್ರಕಟವಾಗಿದ್ದು ಇದರಲ್ಲಿ ನೂರೆಂಟು ಮಂದಿ ಸಾಹಿತಿಗಳ ಕಿರುಪರಿಚಯವೂ ಇದ್ದು, ಪೂರ್ತಿಯಾಗಿ ಆರ್ಟ್‌ಪೇಪರ್‌ನಲ್ಲಿ ಮುದ್ರಣವಾಗಿರುವ ಈ ಕೃತಿ ಅಪಾರ ಜನಮನ್ನಣೆ ಗಳಿಸಿದೆ.
ಇದೀಗ ಮತ್ತೊಂದು ಸಾಹಿತಿಗಳ ಚುಕ್ಕಿಚಿತ್ರಗಳ ಪುಸ್ತಕವನ್ನು ಹೊರತರುವ ಸಿದ್ಧತೆಯಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದು ಭಾಷೆಯ ಸಾಹಿತಿಗಳಿಗೆ ಸಂಬಂಧಪಟ್ಟಂತೆ ಹೀಗೆ ಚುಕ್ಕಿಚಿತ್ರಗಳ ರಚನೆ ಬಹುಶಃ ಕನ್ನಡ ಬಿಟ್ಟು ಬೇರಾವ ಭಾಷೆಯಲ್ಲೂ ನಡೆದಿಲ್ಲವೆನ್ನುವುದು ಮೋಹನ್ ವೆರ್ಣೇಕರ್ ಅವರ ಅಗ್ಗಳಿಕೆ. ನ್ಯೂಯಾರ್ಕಿನ ಕನ್ನಡ ಕೂಟ, ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ, ಮೈಸೂರು ಆರ್ಟ್‌ಗ್ಯಾಲರಿ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಇವರ ಚುಕ್ಕಿಚಿತ್ರಗಳ ಪ್ರದರ್ಶನ ನಡೆದಿದ್ದು ಸರ್ವತ್ರ ಮೆಚ್ಚುಗೆ ಪ್ರಾಪ್ತವಾಗಿದೆ.
ಗೊರೂರು ಸಾಹಿತ್ಯ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ರೋಟರಿ ಎಕ್ಸಲೆನ್‌ಸ್ ಅವಾರ್ಡ್, ಕನ್ನಡಸಿರಿ-2007, ದೈವಜ್ಞ ಭೂಷಣ, ಡಾ. ರಾಜಕುಮಾರ್ ಸದ್ಭಾವನಾ ಪುರಸ್ಕಾರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕೊಂಕಣಿ ನಕ್ಷತ್ರ ಗೌರವ ಪುರಸ್ಕಾರ, ಸೂರಜ್ ಸೇವಾಪ್ರಶಸ್ತಿ, ವಿದ್ಯಾಾರಣ್ಯ ರಾಜ್ಯೋತ್ಸವ ಪ್ರಶಸ್ತಿ ದೊರೆತಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕರ್ನಾಟಕ ವಿಧಾನ ಮಂಡಲ, ಸಚಿವಾಲಯ ತರಬೇತಿ ಸಂಸ್ಥೆ, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣರ ಸಂಘ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, ಡಿ.ವಿ.ಜಿ.ಬಳಗ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಮುದ್ಯತಾ ಶೋತೃಬಳಗ ಸೇರಿದಂತೆ ನೂರಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಆಸಕ್ತರು, ಮೋಹನ್ ವೆರ್ಣೇಕರ್, ಮೊ. 98440 75512 ಸಂಪರ್ಕಿಸಬಹುದು.