ಸಾರಾಂಶ
ಹಳ್ಳಿಯಲ್ಲಿದ್ದು ಬೇಸಾಯ ಮಾಡುತ್ತಿರುವ ರೈತನ ಮಗ ನಿರಂತರ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 4ನೇ ಬಾರಿಗೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾನೆ.
ಕಲಬುರಗಿ : ಹಳ್ಳಿಯಲ್ಲಿದ್ದು ಬೇಸಾಯ ಮಾಡುತ್ತಿರುವ ರೈತನ ಮಗ ನಿರಂತರ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 4ನೇ ಬಾರಿಗೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದ್ದಾನೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋರಜಂಬಗಾ ಗ್ರಾಮದ ಯುವಕ ಮೋಹನ್ ಪಾಟೀಲ್ ಅವರು ಮಂಗಳವಾರ ಪ್ರಕಟವಾದ ಯುಪಿಎಸ್‌ಸಿ ಫಲಿತಾಂಶದಲ್ಲಿ 984ನೇ ರಾಂಕ್ ಪಡೆದಿದ್ದಾರೆ. ಇವರ ತಂದೆ ಸಂಗಣ್ಣ ಪಾಟೀಲ್, ತಾಯಿ ಸವಿತಾ ಪಾಟೀಲ್, ಈ ದಂಪತಿಯದ್ದು ಮೂಲತಃ ಕೃಷಿ ಕುಟುಂಬ, ಬೇಸಾಯವೇ ಕಾಯಕ.
ಸರ್ಕಾರಿ ಶಾಲೆಯ ವಿದ್ಯಾರ್ಥಿ:
ಮೋಹನ್ ಪಾಟೀಲ್ ಸ್ವಗ್ರಾಮದ ಡೋರ್ ಜಂಬಗಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದಾರೆ. ಪಿಯುಸಿ ಶಿಕ್ಷಣವನ್ನು ಶ್ರೀ ಗುರು ಇಂಡಿಪೆಂಡೆಂಟ್ ಕಾಲೇಜಿನಲ್ಲಿ ಪೂರೈಸಿದ್ದು, ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.
ನಾಲ್ಕು ವರ್ಷದಿಂದ ಪ್ರಯತ್ನ: ಐಎಎಸ್ ಮಾಡಬೇಕೆಂಬ ಕನಸು ಕಂಡಿದ್ದ ಮೋಹನ್ ಪಾಟೀಲ್ ಕಳೆದ ನಾಲ್ಕು ವರ್ಷದಿಂದ ನಿರಂತರವಾಗಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆದಿದ್ದಾರೆ. ನಾಲ್ಕು ಬಾರಿ ಯುಪಿಎಸ್ಸಿ ಪ್ರಿಲಿಮ್ಸ್ ಉತ್ತೀರ್ಣರಾಗಿ ಮೂರು ಬಾರಿ ಸಂದರ್ಶನ ನೀಡಿದ್ದಾರೆ. ಕೊನೆಗೆ ನಾಲ್ಕನೇ ಬಾರಿ ಯುಪಿಎಸ್‌ಸಿ 984ನೇ ರ್‍ಯಾಂಕ್ ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ.
ಯುಪಿಎಸ್‌ಸಿ ಕ್ಲಿಯರ್ ನಿರೀಕ್ಷೆ: ಸತತ ಮೂರು ಬಾರಿ ಸಂದರ್ಶನಕ್ಕೆ ಆಯ್ಕೆಯಾಗಿದ್ದ ಅವರು, ಈ ಬಾರಿ ಯುಪಿಎಸ್‌ಸಿ ಉತ್ತೀರ್ಣರಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಕೊನೆಗೂ ಪಟ್ಟಿಯಲ್ಲಿ ಹೆಸರು ಹೊಂದುವ ಮೂಲಕ ಜಿಲ್ಲೆಗೆ ಹೆಸರು ತಂದಿದ್ದಾರೆ.