ಸಾರಾಂಶ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ತೀವ್ರ ಕುತೂಹಲ ಮೂಡಿಸಿದ್ದ ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಎರಡನೇ ಬಾರಿಯೂ ಬಿಜೆಪಿ ಅಧಿಪತ್ಯ ಸಾಧಿಸಿದೆ. ಅಧ್ಯಕ್ಷರಾಗಿ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ. ಅಧಿಕಾರ ಹಿಡಿಯಲು ತೆರೆ ಮರೆಯಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಕಾಂಗ್ರೆಸ್ ಕಡೇ ಗಳಿಗೆಯಲ್ಲಿ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ತೀರ್ಮಾನಿಸಬೇಕಾಯಿತು. ಸಂಸದ ಗೋವಿಂದ ಕಾರಜೋಳ ಮತ ಚಲಾಯಿಸಿ ತಮ್ಮವರ ಗೆಲ್ಲಿಸಿಕೊಂಡರೆ, ಶಾಸಕ ಎನ್.ವೈ.ಗೋಪಾಲಕೃಷ್ಣ ಮತ ಚಲಾಯಿಸುವ ಉಸಾಬರಿಗೆ ಹೋಗಲಿಲ್ಲ.16 ಸದಸ್ಯ ಬಲ ಹೊಂದಿರುವ ಪಟ್ಟಣ ಪಂಚಾಯಿತಿಯಲ್ಲಿ 6 ಕಾಂಗ್ರೆಸ್, 8 ಬಿಜೆಪಿ, 2 ಪಕ್ಷೇತರ ಸದಸ್ಯರು ಗೆದ್ದಿದ್ದರು. ಇಬ್ಬರು ಪಕ್ಷೇತರರು ಬಿಜೆಪಿಯಿಂದ ಬಂಡಾಯವೆದ್ದು ಸ್ಪರ್ಧಿಸಿ ಗೆದ್ದಿದ್ದರು. ಪಕ್ಷೆತರರ ಸಹಾಯದಿಂದಲೇ ಮೊದಲ ಬಾರಿ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿದಿದ್ದ ಬಿಜೆಪಿ ಈ ಬಾರಿ ಮತ್ತೊಮ್ಮೆ ಅಧಿಕಾರ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಬ್ಬರು ಪಕ್ಷೇತರರ ಜೊತೆಗೆ ಒಂದಿಬ್ಬರು ಬಿಜೆಪಿ ಸದಸ್ಯರಿಗೆ ಗಾಳ ಹಾಕಿದ್ದ ಕಾಂಗ್ರೆಸ್ ಯಶ ಸಿಗಲಿಲ್ಲ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಗುಂಪಿಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಲೀಲಾವತಿ ಸಿದ್ದಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ತಿಪ್ಪೇಸ್ವಾಮಿ, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಎಂ ಅಬ್ದುಲ್ಲಾ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿಗಳಿಗೆ ಇಬ್ಬರು ಪಕ್ಷೇತರರ ಬೆಂಬಲದೊಂದಿಗೆ ಗೋವಿಂದ ಕಾರಜೋಳ ಸೇರಿ 11 ಮತ ಚಲಾವಣೆಯಾದವು. ಕಾಂಗ್ರೆಸ್ ಅಭ್ಯರ್ಥಿಗಳು ಕೇವಲ ಆರು ಮತಕ್ಕಷ್ಟೇ ತೃಪ್ತಿ ಪಟ್ಟುಕೊಂಡರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಜಗದೀಶ್ ಕಾರ್ಯ ನಿರ್ವಹಿಸಿದರು.ಹಿಂದೊಮ್ಮೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಟ್ಟಣ ಪಂಚಾಯಿತಿ ರಾಮುಲು ಹವಾದಿಂದ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ವಿಧಾನ ಸಬಾ ಚುನಾವಣೆಯಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ನ ಗೋಪಾಲಕೃಷ್ಣ ಆಯ್ಕೆಯಾಗಿದ್ದರು. ಹಾಗಾಗಿ ಪಕ್ಷೇತರರ ತನ್ನತ್ತ ಸೆಳೆದುಕೊಂಡು ಕಾಂಗ್ರೆಸ್ ಅಧಿಕಾರ ನಡೆಸುತ್ತದೆ ಎಂದೇ ಭಾವಿಸಲಾಗಿತ್ತು. ಕಾಂಗ್ರೆಸ್ ಆಟ ನಡೆಯದೇ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಭರ್ಜರಿ ಮೆರವಣಿಗೆ:ಪಟ್ಟಣ ಪಂಚಾಯಿತಿ ಮರಳಿ ವಶಕ್ಕೆ ಪಡೆದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮೊಳಕಾಲ್ಮುರು ಪಟ್ಟಣದಲ್ಲಿ ಭರ್ಜರಿ ಮೆರವಣಿಗೆ ನಡೆಸಿದರು. ಪಟ್ಟಣ ಪಂಚಾಯಿತಿ ಆವರಣದಿಂದ ಡೊಳ್ಳು ವಾದ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿತು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಅಂಬೇಡ್ಕರ್ ವೃತ್ತ ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ, ಮಂಡಲ ಅಧ್ಯಕ್ಷ ಡಾ .ಪಿ.ಎಂ ಮಂಜುನಾಥ್ , ನಗರ ಘಟಕದ ಅಧ್ಯಕ್ಷ ಕಿರಣ್ ಗಾಯಕ್ವಾಡ್ ಸಿದ್ದಾರ್ಥ, ಹಿರಿಯ ಮುಖಂಡ ಚಂದ್ರಶೇಖರಗೌಡ, ಮುಖಂಡ ಸಿದ್ದಣ್ಣ, ಡಿಶ್ ರಾಜು ಸೇರಿದಂತೆ ಹಲವರು ಇದ್ದರು.ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ:
ಪಟ್ಟಣದ ಅಭಿವೃದ್ಧಿ ಕಾರ್ಯದಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಒಟ್ಟು ಗೂಡಿಸಿಕೊಂಡು ಆಡಳಿತ ನಡೆಸುವಂತೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸಂಸತ್ ಸದಸ್ಯ ಗೋವಿಂದ ಎಂ ಕಾರಜೋಳ ಕಿವಿ ಮಾತು ಹೇಳಿದರು.ಚುನಾವಣೆ ನಂತರ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಾತನಾಡಿ, ಪಟ್ಟಣ ಅಭಿವೃದ್ಧಿ ಕಾರ್ಯದಲ್ಲಿ ಪಕ್ಷ ಬೇಧ ಮಾಡದೆ ಎಲ್ಲಾರೂ ಒಟ್ಟಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರುವಂತ ಅನುದಾನಗಳನ್ನು ಎಲ್ಲಾ ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಪಾರದರ್ಶಕ ಆಡಳಿತ ನಡೆಸಿ ಜನರ ಮನಸನ್ನು ಗೆಲ್ಲಬೇಕು. ನಿತ್ಯವೂ ವಾರ್ಡಡ್‌ಗಳಿಗೆ ಬೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ತಿಳಿದುಕೊಂಡು ಬೀದಿ ದೀಪ ಸ್ವಚ್ಛತೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಿಸುವತ್ತ ಮುಂದಾಗಬೇಕು ಎಂದರು.
₹5300 ಕೋಟಿ ಬಿಡುಗಡೆಗೆ ಪ್ರಯತ್ನಮೊಳಕಾಲ್ಮುರು: ಬಯಲು ಸೀಮೆಯ ಜನರ ಜೀವನಾಡಿಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿರುವ ₹5300 ಕೋಟಿ ಅನುದಾನವನ್ನು ಶೀಘ್ರ ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂದ ಗೋವಿಂದ ಎಂ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ₹5300 ಕೋಟಿ ಅನುದಾನ ಬಿಡುಗಡೆಯಾಗಲು ಕೆಲ ತಾಂತ್ರಿಕ ತೊಡಕುಗಳು ಎದುರಾಗಿದ್ದವು. ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರದ ಸಚಿವರೊಟ್ಟಿಗೆ ಈಗಾಗಲೇ ಕೇಂದ್ರದ ಜಲಸಂಪನ್ಮೂಜಲ ಸಚಿವರಿಗೆ ಮನವಿ ಸಲ್ಲಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸಭೆ ನಡೆಸಿ ಯೋಜನೆಯ ಕುರಿತು ಮನವರಿಕೆ ಮಾಡಲಾಗಿದೆ. ರಾಷ್ಟ್ರೀಯ ಯೋಜನೆಯನ್ನಾಗಿಸಲು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ ಗೊಳಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಕೇಂದ್ರ ಸರ್ಕಾರವು ಕೂಡ ಯೋಜನೆಗೆ ಅನುದಾನ ಬಿಡುಗಡೆಗೊಳಿಸಲು ಸಿದ್ಧವಿದೆ. ಪ್ರಧಾನಿಯವರಿಗೆ ಮತ್ತೊಮ್ಮೆ ಮನವರಿಕೆ ಮಾಡಿ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಅನುದಾನ ತಂದು ಯೋಜನೆಯನ್ನು ಪೂರ್ಣಗೊಳಿಸುತ್ತೇನೆ ಎಂದರು.