ಸಾರಾಂಶ
ಕಳೆದ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಿ ಆಮಿಷವೊಡ್ಡಿದ ಆರೋಪ ಸಂಬಂಧ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಳೆದ ವಿಧಾನಸಭೆ ಚುನಾವಣೆ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಿ ಆಮಿಷವೊಡ್ಡಿದ ಆರೋಪ ಸಂಬಂಧ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.ಪ್ರಕರಣ ರದ್ದು ಕೋರಿ ಶಶಿಕಲಾ ಜೊಲ್ಲೆ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 2023ರ ಮೇ 10ರಂದು ನಿಪ್ಪಾಣಿಯಲ್ಲಿ ಕೆಲ ವ್ಯಕ್ತಿಗಳು ಮತದಾರರಿಗೆ ಹಣ ಹಂಚಿಕೆ ಮಾಡಿ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಚುನಾವಣಾಧಿಕಾರಿ ದೂರು ನೀಡಿದ್ದರು. ಅದನ್ನು ಆಧರಿಸಿ ನಿಪ್ಪಾಣಿ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಸೇರಿದ್ದ ಜನರ ಬಳಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸೇರಿದ್ದ ಕೆಲವು ಚುನಾವಣಾ ಸಾಮಾಗ್ರಿಗಳು, ವ್ಯಕ್ತಿಯೊಬ್ಬರ ಬಳಿ 10 ಸಾವಿರ ನಗದು ದೊರೆತಿತ್ತು.ಇದರಿಂದ ಜೊಲ್ಲೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಜೊಲ್ಲೆ ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ತಮ್ಮ ಚುನಾವಣಾ ಏಜೆಂಟ್ ಬಳಿ 10 ಸಾವಿರ ನಗದು ಸಿಕ್ಕಿರುವುದಕ್ಕೆ ಪ್ರಕರಣ ದಾಖಲಿಸಲಾಗಿದೆ. ಆದರೆ. ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ಆರೋಪ ಸಾಬೀತುಪಡಿಸುವಂತ ಅಂಶಗಳು ಎಫ್‌ಐಆರ್‌ನಲ್ಲಿ ಇಲ್ಲ. ಪ್ರಕರಣ ದಾಖಲಿಸಿರುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಜೊಲ್ಲೆ ಆಕ್ಷೇಪಿಸಿದ್ದರು.