ಸಾರಾಂಶ
ಧಾರವಾಡ:
ಮುಂಗಾರು ಮಳೆ ಜಿಲ್ಲೆಯನ್ನು ಪೂರ್ಣ ಆವರಿಸಿದ್ದು ದಿನದಿಂದ ದಿನಕ್ಕೆ ಮಳೆ ತೀವ್ರಗೊಳ್ಳುತ್ತಿದೆ. ಹೀಗಾಗಿ ಅಲರ್ಟ್ ಆಗಿರುವ ಜಿಲ್ಲಾಡಳಿತ ಮಳೆ ಹೆಚ್ಚಾದರೆ ಯಾವ ರೀತಿ ಮುನ್ನಚ್ಚರಿಕಾ ಕ್ರಮಕೈಗೊಳ್ಳಬೇಕು ಎಂಬುದರ ಕುರಿತು ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.ತುಪ್ಪರಿ ಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹದ ಬಗ್ಗೆ ನಿರಂತರ ನಿಗಾ ವಹಿಸಿ, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಈ ಎರಡು ಹಳ್ಳಗಳಿಗೆ ಸಂಬಂಧಿಸಿದ ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನ-ಜಾನುವಾರ ಜೀವ ಹಾನಿ ಆಗದಂತೆ ಮುಂಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ತಕ್ಷಣ ಬಾಧಿತ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸ್ಥಳ ಗುರುತಿಸಿ, ಸಿದ್ಧತೆ ಮಾಡಿಕೊಳ್ಳುವಂತೆ ತಹಸೀಲ್ದಾರ್‌ರಿಗೆ ಸೂಚಿಸಿದ ಜಿಲ್ಲಾಧಿಕಾರಿ, ನೀರಿನ ಪ್ರಮಾಣದ ಬಗ್ಗೆ ತಾಲೂಕು, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.
ನಿರಂತರ ಮಳೆಯಿಂದಾಗಿ ಕೆರೆಗಳು ತುಂಬುತ್ತಿವೆ. ಕೆರೆಯ ಒಡ್ಡು ಒಡೆಯದಂತೆ ಮತ್ತು ಸುಸ್ಥಿತಿಯ ಗೇಟ್ ಇರುವಂತೆ ಕೆರೆ ಮಾಲೀಕತ್ವ ಹೊಂದಿರುವ ಇಲಾಖೆಗಳು ಕ್ರಮವಹಿಸಬೇಕು. ಕೆರೆಗೆ ಜನರು ಇಳಿಯದಂತೆ ಎಚ್ಚರಿಕೆ ಫಲಕ ಹಾಕಬೇಕು. ಹಳ್ಳಗಳು ತುಂಬಿ ಹರಿಯುವಾಗ ಗಿಡ-ಗಂಟಿ, ತ್ಯಾಜ್ಯ ವಸ್ತುಗಳು ಹಳ್ಳದಲ್ಲಿ ಅಡ್ಡಲಾಗಿ ನಿಂತು ನೀರು ಹರಿದು ಹೋಗಲು ತಡೆವೊಡ್ಡುತ್ತವೆ. ಹೀಗಾಗಿ ಅವುಗಳನ್ನು ತೆರವುಗೊಳಿಸಬೇಕು ಎಂದರು.ಮಳೆ ಹಾಗೂ ಪ್ರವಾಹದಿಂದ ನೀರು ಹೆಚ್ಚಾಗಿ ಸೇತುವೆ ಮುಳುಗುತ್ತವೆ. ಈ ವೇಳೆ ಗ್ರಾಪಂ ಹಾಗೂ ಪೊಲೀಸ್ ಕಾವಲು ಹಾಕಿ ಜನರು ಸಂಚರಿಸದಂತೆ ತಡೆಯಬೇಕು. ಅಗತ್ಯವಾದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಬೇಕು ಎಂದ ಜಿಲ್ಲಾಧಿಕಾರಿ, ಜಮೀನಿಗೆ ತೆರಳಿದ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಗಿಡ-ಮರ ಆಶ್ರಯಿಸುತ್ತಾರೆ. ಅವರಿಗೆ ಗುಡುಗು-ಸಿಡಿಲಿನಿಂದ ಸುರಕ್ಷತೆ ಪಡೆಯಲು ತಿಳಿವಳಿಕೆ ನೀಡಬೇಕು. ಈ ಕುರಿತು ಗ್ರಾಮಗಳಲ್ಲಿ ಡಂಗೂರ, ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಬೇಕೆಂದರು.
ಮನೆ ಹಾನಿ ವರದಿ ಸಲ್ಲಿಸಿ:ಮಳೆಯಿಂದ ಜಿಲ್ಲೆಯ ವಿವಿಧೆಡೆ ಭಾಗಶಃ ಮನೆ ಹಾನಿಯಾದ ವರದಿಯಾಗಿದ್ದು ಮನೆ ಹಾನಿ ಬಗ್ಗೆ ನಿಖರ ಮತ್ತ ಸ್ಪಷ್ಟವಾದ ವರದಿ ಸಲ್ಲಿಸಬೇಕು. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿ ತಪ್ಪು ವರದಿ ನೀಡಿದವರು ಹಾಗೂ ಅಂಗೀಕರಿಸಿದವರ ವಿರುದ್ಧ ಇಲಾಖಾ ನಿಯಮಾವಳಿ ಪ್ರಕಾರ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶೇ. 22ರಷ್ಟು ಬಿತ್ತನೆ:ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ ಶೇ. 22ರಷ್ಟು ಭೂಮಿಯಲ್ಲಿ ಬಿತ್ತನೆ ಆಗಿದೆ. ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಆದರಿಂದ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ, ಗೊಬ್ಬರದ ಕೊರತೆ, ಕೃತಕ ಅಭಾವ ಹಾಗೂ ಹೆಚ್ಚಿನ ಬೆಲೆಗೆ ಮಾರಾಟ ಆಗದಂತೆ ನೋಡಿಕೊಳ್ಳಬೇಕು. ರಶೀದಿ ಇಲ್ಲದೆ ಮಾರಾಟ ಮಾಡುವವರ ಹಾಗೂ ಗೊಬ್ಬರದೊಂದಿಗೆ ಜಿಂಕ್ ಲಿಂಕ್ ನೀಡದರೆ ಎಫ್‌ಐಆರ್ ದಾಖಲಿಸಿ ಅಂತಹ ಅಂಗಡಿ ಸೀಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು. ಜತೆಗೆ ಯೂರಿಯೂ ಗೊಬ್ಬರದ ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಭೆ ನಿರಂತವಾಗಿ ನಡೆಯಲಿದೆ. ಆದರೆ, ಇಂದಿನ ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ಪೂರ್ವಾನುಮತಿ ಪಡೆಯದೆ ಸಭೆಗೆ ಗೈರಾಗಿದ್ದಾರೆ. ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಇಇ ಅನುಮತಿ ಪಡೆಯದೆ ಗೈರಾಗಿದ್ದಾರೆ. ಮುಂದಿನ ಸಭೆಗೆ ಬರದಿದ್ದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಡಿಎಚ್‌ಒ ಡಾ. ಶಶಿ ಪಾಟೀಲ, ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಎಂ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ ಇದ್ದರು.
ಕಾಮಗಾರಿ ಬೇಗ ಮುಗಿಸಿ:ಕಾಡಿನ ಅಂಚಿನಲ್ಲಿರುವ ಕಂಬಾರಗಣವಿ ಗ್ರಾಮ ಸಂಪರ್ಕಕ್ಕೆ ಇರುವ ಸೇತುವೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಬೇಗ ಪೂರ್ಣಗೊಳಿಸಬೇಕು. ಯಾವುದೇ ಸೇತುವೆ, ಕೆರೆಗಳಿಂದ ಸಾರ್ವಜನಿಕ ಹಾನಿ ಆದರೆ, ಅದರ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಭರಿಸಲು ಆದೇಶಿಸಲಾಗುವುದು. ಅಧಿಕಾರಿಗಳು ಎಚ್ಚರಿಕೆಯಿಂದ ಕಾಮಗಾರಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಪ್ರವಾಹ ಇಳಿಕೆ:ಕಳೆದ ಎರಡು ದಿನಗಳಿಂದ ಧಾರಾಕಾರ ಸುರಿದ ಮಳೆಗೆ ಧಾರವಾಡ ಗಡಿ ಭಾಗದಲ್ಲಿರುವ ಕಲ್ಲೇ-ಕಬ್ಬೇನೂರ ಗ್ರಾಮದ ಕಳ್ಳಿ ಹಳ್ಳ ತುಂಬಿ ಹರಿದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿತ್ತು. ಇದೀಗ ಆ ಭಾಗದಲ್ಲಿ ಮಳೆ ಪ್ರಮಾಣ ತಗ್ಗಿದ ಹಿನ್ನೆಲೆ ಹಾಗೂ ಸೇತುವೆ ಕೆಳಗೆ ಸಿಲುಕಿದ್ದ ಕಸ-ಕಡ್ಡಿ ತೆರವುಗೊಳಿಸಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿದೆ. ಎರಡೂ ಗ್ರಾಮಗಳಿಗೂ ಸಂಪರ್ಕ ಶುರುವಾಗಿದೆ.