ಮೋನು ಮತ್ತು ಆನೆ- ಮಕ್ಕಳಿಗೆ ನೀತಿ ಬೋಧಿಸುವ ಕಥೆಗಳು

| Published : Dec 21 2024, 01:18 AM IST

ಸಾರಾಂಶ

ಮಕ್ಕಳ ಮನಸು ತಿಳಿಗೊಳದಂತೆ ಮಕ್ಕಳ ಆಸೆಯನ್ನು ಕುಂದಿಸದೆ ಮನಸ್ಸನ್ನು ಅರಳಿಸಬೇಕು. ಅವರಲ್ಲಿ ದಯಾ ಗುಣ ಬೆಳೆಸಬೇಕು. ಸೃಜನಶೀಲತೆ ಬಾಲ್ಯದಲ್ಲೇ ಬರಬೇಕು. ಆಟದ ಮೂಲಕ ಪಾಠದ ಕಡೆಗೆ ಸೆಳೆಯಬೇಕು ಎಂಬುದನ್ನು ಲೇಖಕಿ ತಿಳಿಸಿಕೊಡುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಸಿರಿದೇವಿ ಪ್ರಕಾಶನ ಹೊರತಂದಿರುವ ಹಿರಿಯ ಲೇಖಕಿ ಬಿ.ಕೆ. ಮೀನಾಕ್ಷಿ ಅವರ ''''ಮೋನು ಮತ್ತು ಆನೆ'''' ಮಕ್ಕಳ ಕಥೆಗಳು ಗಮನ ಸೆಳೆಯುತ್ತವೆ. ಪ್ರತಿ ಕಥೆಯ ಅಂತ್ಯದಲ್ಲಿ ಒಂದು ನೀತಿ ಬೋಧನೆ ಇದೆ.

ಹಿಂದೆ ''''ಚಿಣ್ಣರಿಗಾಗಿ ಚಂದದ ಕಥೆ'''' ಸಂಕಲನ ಪ್ರಕಟಿಸಿದ್ದ ಮೀನಾಕ್ಷಿ ಅವರ ಈ ಸಂಕಲನದಲ್ಲಿ 48 ಕಥೆಗಳಿವೆ. ವಸ್ತು ವಿನ್ಯಾಸ, ಕಥನಕಲೆಗಳಿಂದಾಗಿ ಚಿಣ್ಣರ ಜೊತೆಗೆ ದೊಡ್ಡವರಿಗೂ ಇಷ್ಟವಾಗುತ್ತವೆ. ಅವರು ಪ್ರತಿ ಕಥೆಯ ಕೊನೆಯಲ್ಲಿ ಹೇಳಿರುವ ನೀತಿಯು ಕೇವಲ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಅನ್ವಯಿಸುವಂತಿದೆ. ಅಷ್ಟನ್ನು ಪಾಲಿಸಿದರೆ ಸಾಕು ಬದುಕು ಸುಸೂತ್ರವಾಗಿ ಸಾಗುತ್ತದೆ ಎಂಬುದನ್ನು ಎಲ್ಲಾ ಕಥೆಗಳು ಬಿಂಬಿಸಿವೆ.

ಸಾಮಾನ್ಯವಾಗಿ ಮಕ್ಕಳಿಗೆ ಪ್ರಾಣಿ- ಪಕ್ಷಿಗಳೆಂದರೆ ಹೆಚ್ಚು ಇಷ್ಟ. ಹೀಗಾಗಿ ಮೀನಾಕ್ಷಿಯವರು ಆಕಾಶದಲ್ಲಿ ಹಾರಿದ ಮೀನು, ಆನೆ ಮತ್ತು ನವಿಲು, ದೊಡ್ಡಾನೆಯ ನಗರ ಪ್ರದಕ್ಷಿಣೆ, ಮೋನು ಮತ್ತು ಆನೆ, ಸುಂದರಿ ಕಾಗೆ,

ಹಿಂದೆ ಅವಿಭಕ್ತ ಕುಟುಂಬದಲ್ಲಿ ಅಜ್ಜ- ಅಜ್ಜಿಯರು ಮಕ್ಕಳಿಗೆ ಕಥೆ ಹೇಳುತ್ತಿದ್ದರು. ಅವರು ಯಾವಾಗಲೂ ಒಂದಿರನಲ್ಲೊಬ್ಬ ರಾಜ... ಎಂದೇ ಆರಂಭಿಸುತ್ತಿದ್ದರು. ಇಲ್ಲಿ ಕಡೆ ಮೀನಾಕ್ಷಿಯವರು ಇದಲ್ಲದೇ ಬೇಟೆಯಾಡದ ರಾಜನ ಕಥೆ ಹೇಳಿದ್ದಾರೆ. ಇದಲ್ಲದೇ ಚಂದಿರನಲ್ಲಿಗೆ ಹೋಗುವ ಕನಸು, ದೇವರು ಬಂದನು, ಧರ್ಮವಂತರು, ಇರುವಲ್ಲೇ ಸುಖವಿರುವುದು, ಗೌರಜ್ಜಿ ಗುಂಡಜ್ಜಿ, ಕಾಶಿಗೆ ಹೋದ ಅಜ್ಜಿ, ತಾತನ ನೇತೃತ್ವದಲ್ಲಿ ರಜಾ, ಭಿಕ್ಷುಕನ ದಯೆ, ಹೊಲಿ ನಿನ್ನ ತುಟಿಗಳನು, ಕ.ಬು ಮತ್ತು ಕಾಲೊರಸು, ಬುದ್ಧಿ ಕಲಿತ ಮಿಣ್ಣಿ, ರಾಜುವಿನ ರೈಲು, ಪ್ರತಿಭೆಯಿದ್ದರೆ ಬದುಕುಳಿವರು, ಸನ್ಯಾಸಿ ಕಲಿಸಿದ ಪಾಠ, ಸೋಮು ಮತ್ತು ಚಂದು, ಸೋನು ಮತ್ತು ಚಾರು, ತನೀಶ ತನು ಶಾಲೆಗೆ ಬರಲಿಲ್ಲ, ಬದುಕುಳಿದ ಬಡಜೀವ, ಜಗಳಗಂಟರು, ರಾಮಯ್ಯನ ದಯಾಗುಣ, ಅಂತೂ ಶಾಲೆಗೆ ಹೋದರು, ಕೆಲಸದ ಬೆಲೆ, ಕೃಷ್ಣನ ಮನಸು, ಕಾಡಿನ ಸುಖ, ಮರ ಮಾತಾಡಿತು, ಕಡ್ಲೆಕಾಯಿಯ ಚಮತ್ಕಾರ, ಸುಂದರವಾದ ದೆವ್ವಗಳು, ಎರಡು ದೆವ್ವಗಳು ಕಥೆಗಳು ಕೂಡ ಇವೆ.

ದಯಾಗುಣ ಮನುಷ್ಯನ ಮೂಲ ಪ್ರವೃತ್ತಿ. ನಾವು ಮಾಡಿದ ಧರ್ಮ ನಮ್ಮನ್ನು ಕಾಯುತ್ತದೆ. ಬದುಕನ್ನು ಪರಿಶ್ರಮ ಉನ್ನತ ಸ್ಥಿತಿಗೆ ಒಯ್ಯುತ್ತದೆ. ಶ್ರಮವಿದ್ದರೆ ಸಾರ್ಥಕ ಬದುಕು. ಮಾಡಿದ ತಪ್ಪನ್ನು ಅಂಜಿಕೆಯಿಲ್ಲದೆ ಒಪ್ಪಿಕೊಳ್ಳಬೇಕು. ಅಗತ್ಯಬಿದ್ದಾಗ ನಮ್ಮನ್ನು ನಾವು ಕಾಪಾಡಿಕೊಳ್ಳಲು ತಿಳಿದಿರಬೇಕು. ಮೇಲಿದ್ದೇವೆಂದು ಕೆಳಗಿನವರನ್ನು ಅಣಕಿಸಬಾರದು. ಅಪಾಯವಿದೆ ಎಂದಾಗ ದೂರ ಸರಿದುಬಿಡಬೇಕು. ಎದುರಾಳಿಗಳು ಎಂಥವರೆಂದು ನೋಡಿಕೊಂಡು ಸಹಾಯ ಮಾಡಬೇಕು. ಸ್ನೇಹವನ್ನು ಕೊಡುಕೊಳ್ಳುವುದಕ್ಕೆ ಬಳಸಿಕೊಳ್ಳಬಾರದು. ಸಾಹಸ ಮಾಡುವ ಮೊದಲು ಪೂರ್ವತಯಾರಿ ಬೇಕು. ಒಗ್ಗಟ್ಟಿನಿಂದ ಕಾರ್ಯಸಾಧನೆಯಾಗುತ್ತದೆ. ಜೀವಹಾನಿಯಾಗದಂತೆ ನಮ್ಮ ಕೆಲಸಗಳಿರಬೇಕು. ಅಧಿಕಾರದಲ್ಲಿರುವವರ ಭರವಸೆಯನ್ನು ನಂಬಬಾರದು!. ಎಷ್ಟು ಅರ್ಥಪೂರ್ಣವಾಗಿವೆ ಗಮನಿಸಿ.

ಮಕ್ಕಳ ಮನಸು ತಿಳಿಗೊಳದಂತೆ ಮಕ್ಕಳ ಆಸೆಯನ್ನು ಕುಂದಿಸದೆ ಮನಸ್ಸನ್ನು ಅರಳಿಸಬೇಕು. ಅವರಲ್ಲಿ ದಯಾ ಗುಣ ಬೆಳೆಸಬೇಕು. ಸೃಜನಶೀಲತೆ ಬಾಲ್ಯದಲ್ಲೇ ಬರಬೇಕು. ಆಟದ ಮೂಲಕ ಪಾಠದ ಕಡೆಗೆ ಸೆಳೆಯಬೇಕು ಎಂಬುದನ್ನು ಲೇಖಕಿ ತಿಳಿಸಿಕೊಡುತ್ತಾರೆ.

ಒಳ್ಳೆಯತನಕ್ಕೆ ಎಲ್ಲರೂ ತಲೆಬಾಗುತ್ತಾರೆ. ಒಳ್ಳೆಯ ಕೆಲಸ ಮಾಡುತ್ತಾ ದೇವರನ್ನು ಕಾಣಬೇಕು. ಭಕ್ತಿಯೊಂದಿದ್ದರೆ ಶಾಪದಿಂದ ಮುಕ್ತರಾಗಬಗಹುದು. ಸದ್ದಿಲ್ಲದೆ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿರಬೇಕು.

ಈಗಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳನ್ನು ಟಿವಿ, ಮೊಬೈಲ್‌ಗಳಿಂದ ಹೊರತರುವುದು ಸವಾಲಿನ ಕೆಲಸ. ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಈ ರೀತಿಯ ಕಥಾ ಸಂಕಲನಗಳನ್ನು ಓದಿಸಿದರೆ ಅಥವಾ ನೀತಿ ಪಾಠ ತರಗತಿ ಇದ್ದಾಗ ಒಂದೊಂದು ಕಥೆಗಳನ್ನು ಹೇಳಿಕೊಟ್ಟರೂ ಸಾಕು. ಮಕ್ಕಳನ್ನು ಅಲ್ಪಮಟ್ಟಿಗೆ ಕಥೆಗಳ ಕಡೆಗೆ ಸೆಳೆಯಬಹುದು. ಸರಿದಾರಿಗೆ ತರಬಹುದು ಎನಿಸುತ್ತದೆ. ಸ್ವತಃ ಶಿಕ್ಷಕಿಯಾಗಿರುವ ಬಿ.ಕೆ. ಮೀನಾಕ್ಷಿ ಅವರು ಸರಳ, ಸುಂದರ ಶೈಲಿಯಲ್ಲಿ ಮಕ್ಕಳಿಗೆ ಕುತೂಹಲ ಕೆರಳಿಸುವ ರೀತಿಯಲ್ಲಿ ಕಥೆಗಳನ್ನು ಹೆಣೆದಿದ್ದಾರೆ.

ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮುನ್ನುಡಿ ಬರೆದಿದ್ದಾರೆ. ಆಸಕ್ತರು ಬಿ.ಕೆ. ಮೀನಾಕ್ಷಿ, ಮೊ. 98442 27225 ಸಂಪರ್ಕಿಸಬಹುದು.